ಬೆಂಗಳೂರು: ಒಂದಾದ ಮೇಲೊಂದರಂತೆ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ಇದೀಗ “ಬಹುಮನಿ ಸುಲ್ತಾನರ ಉತ್ಸವ’ ಇಕ್ಕಟ್ಟಿಗೆ ಸಿಲುಕಿಸಿದೆ.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಬಹುಮನಿ ಉತ್ಸವ ನಡೆಸಲಾಗುತ್ತಿದೆ ಎಂದಿದ್ದರೆ, ಸಿಎಂ ಸಿದ್ದರಾಮಯ್ಯ ಅವರು ಈ ಉತ್ಸವದ ಬಗ್ಗೆ ತಮಗೆ ಅರಿವೇ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಬಹುಮನಿ ಉತ್ಸವದ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ.
ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಹುಮನಿ ಸುಲ್ತಾನರ ಉತ್ಸವದ ಬಗ್ಗೆ ನನಗೇನೂ ಗೊತ್ತಿಲ್ಲ. ಸರ್ಕಾರದಿಂದ ಉತ್ಸವ ಆಚರಣೆ ಮಾಡುವ ತೀರ್ಮಾನವೂ ಆಗಿಲ್ಲ ಎಂದು ಹೇಳಿದ್ದಾರೆ. ಬಹುಮನಿ ಸುಲ್ತಾನರ ಉತ್ಸವ ಆಚರಣೆ ಕುರಿತು ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಹೇಳಿಕೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರನ್ನೇ ಕೇಳಿ, ಉತ್ಸವಕ್ಕಾಗಿ 30 ಕೋಟಿ ರೂ. ನೀಡಲಾಗುತ್ತಿದೆ ಎಂಬುದೂ ಸುಳ್ಳು ಎಂದು ತಿಳಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಸಚಿವ ಡಾ.ಶರಣ್‌ಪ್ರಕಾಶ್ ಪಾಟೀಲ್, ರಾಷ್ಟ್ರಕೂಟ ಉತ್ಸವ ಹಾಗೂ ಬಹುಮನಿ ಉತ್ಸವ ಮಾಡುವ ಬಗ್ಗೆ ಈ ಹಿಂದೆ ಹಲವಾರು ಸಂಘಟನೆಗಳು ಒತ್ತಾಯಿಸಿವೆ. ಈಗ ವಿರೋಧ ಏಕೆ ಎಂಬುದು ಗೊತ್ತಾಗುತ್ತಿಲ್ಲ. ಬಹುಮನಿ ಉತ್ಸವವನ್ನು ಕೆಲವರು ಬಹುಮನಿ ಜಯಂತಿ ಎಂದು ತಿಳಿದುಕೊಂಡಿದ್ದಾರೆ. ಬಹುಮನಿ ಜಯಂತಿ ಮಾಡುತ್ತಿಲ್ಲ. ಭಾವೈಕ್ಯತಾ ಹಿನ್ನೆಲೆಯಲ್ಲಿ ಬಹುಮನಿ ಉತ್ಸವ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಎಚ್ಚರಿಕೆ: ಬಹುಮನಿ ಸುಲ್ತಾನರ ಉತ್ಸವ ಆಚರಣೆ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಎಂದು ಟೀಕಿಸಿರುವ ಬಿಜೆಪಿ, ಇದೇ ವಿಚಾರ ಮುಂದಿಟ್ಟುಕೊಂಡು ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
ಹಠಮಾರಿ ಧೋರಣೆಯ ಮೂಲಕ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿರುವ ರಾಜ್ಯ ಸರ್ಕಾರ ಈಗ ಉತ್ತರ ಕರ್ನಾಟಕದಲ್ಲಿ ಓಟ್ ಬ್ಯಾಂಕ್ ರಾಜಕೀಯ ಭದ್ರಗೊಳಿಸಲು ಬಹಮನಿ ಸುಲ್ತಾನರ ಉತ್ಸವ ಮಾಡುತ್ತಿದೆ. ರಾಜ್ಯ ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಶತಾಯಗಥಾಯ ಇದನ್ನು ವಿರೋಧಿಸಲಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.