Advertisement

ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್‌ ವೆಲ್

02:38 PM Dec 25, 2024 | Team Udayavani |

ಕೊಪ್ಪಳ: ಬಹು ನಿರೀಕ್ಷಿತ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ-ನವಲಕಲ್‌ ಏತ ನೀರಾವರಿ ಯೋಜನೆಯಡಿ ಪ್ರಾಯೋಗಿಕವಾಗಿ ನೀರು ಹರಿಸಲು‌ ಎಲ್ಲ ಸಿದ್ಧತೆ ನಡೆದಿದೆ. ಈಗಾಗಲೇ ಮುಖ್ಯ ಪೈಪ್‌ಲೈನ್‌ ಕಾಮಗಾರಿ ಮುಗಿದಿದ್ದು ವಿದ್ಯುತ್‌ ಸಂಪರ್ಕದ ಕಾರ್ಯವೂ ಪೂರ್ಣಗೊಂಡಿದೆ. ಇದು ರೈತಾಪಿ ವಲಯದಲ್ಲಿ ಸಂತಸ ತರಿಸಿದೆ.

Advertisement

ಹೌದು. ತಾಲೂಕಿನ ಬಹದ್ದೂರಬಂಡಿ ಏತ ನೀರಾವರಿ ಯೋಜನೆ ಈ ಭಾಗದ ಜನರ ದಶಕಗಳಿಂದ ಕನಸಾಗಿತ್ತು. 2018ರಲ್ಲಿಯೇ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಚಾಲನೆ ದೊರೆತಿದೆ. ಮಧ್ಯದಲ್ಲಿ ಅನುದಾನ ಕೊರತೆಯಿಂದ ಕಾಮಗಾರಿ ಆಮೆಗತಿಯಲ್ಲಿ ನಡೆದಿತ್ತು. ಈಗ ಮುಖ್ಯ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು, ನೀರು ಹರಿಸಲು ಪ್ರಾಯೋಗಿಕ ಪರೀಕ್ಷಾ ಕಾರ್ಯದ ತಯಾರಿ ನಡೆದಿದೆ.

ಈ ಏತ ನೀರಾವರಿ ಯೋಜನೆಯಡಿ ತಾಲೂಕಿನ ಹ್ಯಾಟಿ-ಮುಂಡರಗಿ ಸಮೀಪದ ತುಂಗಭದ್ರಾ ಹಿನ್ನೀರಿನಲ್ಲಿ ಜಾಕವೆಲ್‌ ನಿರ್ಮಿಸಿದ್ದು, ಜಾಕ್‌ವೆಲ್‌ ಪಕ್ಕದಲ್ಲಿಯೇ ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಇದಲ್ಲದೇ ವಿದ್ಯುತ್‌ ಸ್ಟೇಷನ್‌ ನಿರ್ಮಿಸಲಾಗಿದೆ. ವಿದ್ಯುತ್‌ ಸಂಪರ್ಕದ ಪರೀಕ್ಷಾರ್ಥವೂ ನಡೆದಿದೆ.

ಇಲ್ಲಿಂದ ಮುಖ್ಯ ಪೈಪ್‌ಲೈನ್‌ ನಂದಿಬಂಡಿ ಬಸವೇಶ್ವರ ದೇವಸ್ಥಾನ ಸಮೀಪದಲ್ಲಿ ಹಾದು ನೇರ ನವಲಕಲ್‌ ಮಟ್ಟಿಯವರೆಗೂ ಸಾಗಿದೆ. ಅಲ್ಲಿಂದ ಕುಣಕೇರಿ ಭಾಗಕ್ಕೆ ಒಂದು ಮೇನ್‌ ರೈಸಿಂಗ್‌ ಪೈಪ್‌ ಸಾಗಿದ್ದರೆ ಇತ್ತ ಬಿ. ಹೊಸಳ್ಳಿ ಸೀಮಾ ವ್ಯಾಪ್ತಿಗೆ ಮತ್ತೊಂದು ಮೇನ್‌ ರೈಸಿಂಗ್‌ ಪೈಪ್‌ ನಿರ್ಮಿಸಲಾಗಿದೆ. ಎರಡೂ ಸ್ಥಳಗಳಲ್ಲಿ ವಾಟರ್‌ ಚೇಂಬರ್‌ ನಿರ್ಮಿಸಿ ಗೇಟ್‌ಗಳನ್ನೂ ಅಳವಡಿಸಲಾಗಿದೆ. ಇಲ್ಲಿ ನೀರು ಹರಿಸಿ ಪರೀಕ್ಷೆ ಮಾಡುವ ತಯಾರಿ ನಡೆದಿದೆ.

ಇದೇ ವಾರದಲ್ಲಿ ಪ್ರಾಯೋಗಿಕ ಪರೀಕ್ಷೆ?:
ಯೋಜನೆ ಆರಂಭವಾಗಿ ಐದು ವರ್ಷ ಗತಿಸಿದ್ದು, ಈ ಭಾಗದ ಸಾವಿರಾರು ರೈತರು ನಮ್ಮ ಭಾಗಕ್ಕೆ ನೀರಾವರಿ ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಶಾಸಕ, ಸಂಸದರಿಗೂ ನಿರಂತರ ಒತ್ತಡ ಹಾಕಿ ನೀರಾವರಿ ಭಾಗ್ಯ ಕಲ್ಪಿಸಿ, ಒಣ ಬೇಸಾಯಕ್ಕೆ ನೀರು ಹರಿಸಿ ಎಂದೆನ್ನುವ ಕೂಗು ನಿರಂತರ ಕೇಳುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ-ಸಂಸದರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದೇ ವಾರದಲ್ಲಿ ತುಂಗಭದ್ರಾ ಹಿನ್ನೀರಿನಿಂದ ಮುಖ್ಯಪೈಪ್‌ ಮೂಲಕ ಪ್ರಾಯೋಗಿಕ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ.ಮುಖ್ಯ ಪೈಪ್‌ನ ಮೂಲಕ ಹೊಸಳ್ಳಿ ಕೆರೆಗೆ ನೀರು ಹರಿಸಲು ತಯಾರಿ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

Advertisement

ಕಾಲುವೆ ನಿರ್ಮಾಣ ಶೀಘ್ರ ನಡೆಯಲಿ:
ಈ ಯೋಜನೆಯಡಿ 10ಕ್ಕೂ ಹೆಚ್ಚು ಹಳ್ಳಿಗಳ 12 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸುವ ಉದ್ದೇಶ ಹೊಂದಲಾಗಿದೆ. ಆದರೆ ಈ ಎಲ್ಲ ಹಳ್ಳಿಗಳ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಈಗಾಗಲೇ ಮುಖ್ಯ ಕಾಲುವೆ, ಉಪ ಕಾಲುವೆ ಸೇರಿ ಸೀಳು ಕಾಲುವೆ ನಿರ್ಮಾಣಕ್ಕೆ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇದರ ಡಿಪಿಆರ್‌ ಸಹಿತ ನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ.

ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕಾಲುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮೀಸಲಿಟ್ಟು ಕಾಲುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎನ್ನಬೇಕಿದೆ. ಅನುದಾನ ಬಿಡುಗಡೆಯಾದ ಬಳಿಕ ಕಾಲುವೆ ನಿರ್ಮಾಣ ಕಾರ್ಯ ನಡೆಯಲಿದೆ. ಒಟ್ಟಿನಲ್ಲಿ ಬಹು ನಿರೀಕ್ಷಿತ ಬಹದ್ದೂರಬಂಡಿ ಏತ ನೀರಾವರಿ ಯೋಜನೆಯಡಿ ಮುಖ್ಯ ಪೈಪ್‌ನಲ್ಲಿ ನೀರು ಹರಿಯುವ ಕುರಿತು ಪ್ರಾಯೋಗಿಕ ಪರೀಕ್ಷೆಗೆ ಅಧಿ ಕಾರಿಗಳು ಅಂತಿಮ ಸಿದ್ಧತೆ ಮಾಡಿದ್ದು, ಇದೇ ವಾರದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ನಿರೀಕ್ಷೆಯಂತೆ ನಡೆದರೆ ಕಾಲುವೆ ನಿರ್ಮಾಣ ಮಾತ್ರ ಬಾಕಿ ಉಳಿಯಲಿದೆ.

ಬಹದ್ದೂರ ಬಂಡಿ ಏತ ನೀರಾವರಿ ಈ ಭಾಗದ ಜನರ ಕನಸಾಗಿದೆ. ಯೋಜನೆಯಡಿ ಈಗಾಗಲೇ ಮೇನ್‌ ರೈಸಿಂಗ್‌ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್‌ ಸಂಪರ್ಕದ ವ್ಯವಸ್ಥೆಯೂ ನಡೆದಿದೆ. 2-3 ದಿನಗಳಲ್ಲಿ ಮೇನ್‌ ರೈಸಿಂಗ್‌ನಿಂದ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಆ ನೀರನ್ನು ಪೈಪ್‌ ಮೂಲಕ ಹೊಸಳ್ಳಿ ಕೆರೆಗೆ ಹರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಕಾಲುವೆಗಳ ನಿರ್ಮಾಣಕ್ಕೂ ಡಿಪಿಆರ್‌ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅದಕ್ಕೂ ಸಮ್ಮತಿ
ದೊರೆಯಲಿದೆ.
●ರಾಜಶೇಖರ ಹಿಟ್ನಾಳ, ಸಂಸದ

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next