ಪಾಂಡವಪುರ: “ಕ್ಷೇತ್ರದಲ್ಲಿ ನೀರಿನ ಬವಣೆ ನೀಗಿಸುವ ಸಲುವಾಗಿ ತಾವು ಸಚಿವನಾಗಿದ್ದ ವೇಳೆ ಹಲವಾರು ಚೆಕ್ ಡ್ಯಾಂಗಳಿಗೆ ಮಂಜೂರಾತಿ ನೀಡಿ ನಿರ್ಮಿಸುವ ಕೆಲಸ ಮಾಡಿದ್ದೇನೆ’ ಎಂದು ಶಾಸಕ ಸಿ.ಎಸ್. ಪುಟ್ಟರಾಜು ಹೇಳಿದರು.
ತಾಲೂಕಿನ ಸಂಗಾಪುರ ಗ್ರಾಮದ ಬಳಿ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಲೋಕಪಾವನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ ಡ್ಯಾಂನಲ್ಲಿ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು.
ರೈತರು ವಾಲ್ಟ್ ಗಳನ್ನು ನಿರ್ಮಿಸುವಂತೆ ಈ ಹಿಂದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇನ್ನೂ ಸುಮಾರು 15 ಲಕ್ಷದಷ್ಟು ಕೆಲಸ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು. ಕುರಹಟ್ಟಿ ಗ್ರಾಮದ ಸಮೀಪ ವಿಸಿ ನಾಲೆಯಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಏತ ನೀರಾವರಿ ಮೂಲಕ ಪೂರೈಕೆ ಮಾಡಿ ಕೆರೆ ತುಂಬಿಸುವ ಯೋಜನೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಕೋವಿಡ್ ವೈದ್ಯರನ್ನೇ ಬಿಡುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಸಾಮೂಹಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.
ಮನ್‌ಮುಲ್ ಅಧ್ಯಕ್ಷ ದುದ್ದ ರಾಮಚಂದ್ರು, ಜೆಡಿಎಸ್ ಮುಖಂಡರಾದ ಎಸ್. ಆನಂದ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಅಶ್ವತ್ಥಕುಮಾರೇಗೌಡ, ಬೆಟ್ಟಸ್ವಾಮೀಗೌಡ, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಶಿವಶಂಕರ್, ಕೆ.ಎನ್.ಪುಟ್ಟರಾಜು, ಗ್ರಾಪಂ ಮಾಜಿ ಸದಸ್ಯ ಪ್ರಕಾಶ್, ಸಣ್ಣನೀರಾವರಿ ಇಲಾಖೆ ಎಇಇ ಶ್ರೀನಿವಾಸಲು, ಎಇ ಕೋಡಿಗೌಡ, ಗುತ್ತಿಗೆದಾರ ಕೆ.ಆರ್. ಸಂತೋಷ್, ದೇವರಾಜು ಮತ್ತಿತರರಿದ್ದರು