ದೇವನಹಳ್ಳಿ: ಕಳೆದ 25 ವರ್ಷ ನಂತರ ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದು ಸಂತಸ ತಂದಿದೆ. ಅಂತರ್ಜಲ ಮಟ್ಟ ಹೆಚ್ಚಳದಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಕಾರಹಳ್ಳಿ ಕೆರೆಗೆ ಸೋಮವಾರ ಸಣ್ಣ ನೀರಾವರಿ ಇಲಾಖೆಯಿಂದ ಬಾಗಿನ ಅರ್ಪಿಸಿ ಮಾತನಾಡಿದ ಅವರು, ತಾಲೂಕಿನ ಕೆರೆಗಳಿಗೆ ಎಚ್. ಎನ್.ವ್ಯಾಲಿ ಯೋಜನೆಯಡಿ ನೀರು ಹರಿಸಲಿಕ್ಕಾಗಿಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಕೆರೆಯ ಸಮಗ್ರ ಅಭಿವೃದ್ಧಿಗಾಗಿ 48 ಲಕ್ಷ ಅನುಮೋದನೆ ಆಗಿದೆ. ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು.
ರೈತರಿಗೆ ವರದಾನ: ಗುಣಮಟ್ಟದ ಕಾಮಗಾರಿ ಮಾಡಬೇಕಾಗಿದೆ. ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಬಯಲುಸೀಮೆ ಪ್ರದೇಶವಾದ ದೇವನಹಳ್ಳಿಯ ಕೆರೆಗಳಿಗೆ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಹೆಚ್ಚು ನೀರು ಸಂಗ್ರಹಗೊಂಡು ಕೋಡಿ ಹರಿದಿರುವುದು ರೈತರ ಪಾಲಿಗೆ ವರದಾನವಾಗಿದೆ ಎಂದು ಹೇಳಿದರು.
ನೀರಿನ ಬವಣೆ ನೀಗಲಿದೆ: ಸಾರ್ವಜನಿಕರ ಬೇಡಿಕೆ ಈಡೇರಿದೆ. ಇಲ್ಲಿನ ಕೆರೆಗಳು ಭರ್ತಿಯಾಗಿ ಬೇರೆ ಕೆರೆಗಳಿಗೆ ಹರಿಯುತ್ತಿರುವುದು ಸಂತಸ ತಂದಿದೆ. ಇದರಿಂದ ಈ ಭಾಗದಲ್ಲಿನ ಕೊಳವೆಬಾವಿಗಳಲ್ಲಿಅಂತರ್ಜಲ ವೃದ್ಧಿ ಆಗುವುದರ ಜೊತೆಗೆ ಜನರ ಕುಡಿಯುವ ನೀರಿನ ಬವಣೆ ನೀಗಿಸಲಿಕ್ಕಾಗಿ ಅನುಕೂಲವಾಗಲಿದೆ ಎಂದು ಹೇಳಿದರು.
ಮಳೆ ಹಾನಿ: 129 ಮನೆಗಳಿಗೆ ಹಾನಿಯಾಗಿದೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಅವರಿಗೆ ಸೂಕ್ತ ಪರಿಹಾರ ಒದಗಿಸಲಿಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರೈತರ ಬೆಳೆಗಳೂ ನಷ್ಟವಾಗಿದ್ದು, ಅದರ ಪರಿಹಾರವಾಗಿ ಸರ್ಕಾರ, ಎಸ್‌ಡಿಆರ್‌ಎಫ್ನಲ್ಲಿ ಒಂದು ಎಕರೆಗೆ ಕೇವಲ ಒಂದೂವರೆ ಸಾವಿರ ಪರಿಹಾರ ಕೊಡ್ತಾರೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ, ಬೆಳೆ ನಷ್ಟಕ್ಕೆ 10 ಪಟ್ಟು ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ವಿವರಿಸಿದರು.
ಮೊಯ್ಲಿಗೆ ಅಪಾರ ಅನುಭವ: ನನ್ನ ವಯಸ್ಸಿನಷ್ಟು, ವೀರಪ್ಪಮೊಯ್ಲಿಗೆ ರಾಜಕೀಯ ಅನುಭವವಿದೆ. ನನಗೆ ಸದನದಲ್ಲಿ ನೀರಾವರಿ ಸಚಿವರು ಏನು ಉತ್ತರ ಕೊಟ್ಟಿದ್ದಾರೋ ಅದನ್ನೇ ಜನರಿಗೆ ಹೇಳಿದ್ದೇನೆ. ನಾನು ಕ್ಷೇತ್ರದ ಜನತೆಗೆ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುವ ಅಗತ್ಯವಿಲ್ಲ,ಜನರಿಗೆ ಸುಳ್ಳು ಹೇಳುವುದು ಕಾಂಗ್ರೆಸ್ ನವರ ವಾಡಿಕೆ ಎಂದು ಹೇಳಿದರು.
ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಿಕಾರವಿ ಕುಮಾರ್, ಪಿಡಿಒ ಕವಿತಾ, ಉಪತಹಶೀಲ್ದಾರ್ ಚೈತ್ರಾ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಮುಖಂಡದೇವರಾಜು, ಮಂಜಣ್ಣ, ರಾಜೇಂದ್ರ, ರಮೇಶ್,ಹನುಮಂತಪ್ಪ, ವೆಂಕಟಗಿರಿಕೋಟೆ ಗ್ರಾಪಂ ಅಧ್ಯಕ್ಷ ಎಚ್.ಶ್ರೀನಿವಾಸ್, ವೆಂಕಟೇಶಪ್ಪ, ಸುಬ್ಬಣ್ಣ, ಕಾರಹಳ್ಳಿ ಶ್ರೀನಿವಾಸ್ ಇತರರಿದ್ದರು.