ಚನ್ನರಾಯಪಟ್ಟಣ/ಶ್ರವಣಬೆಳಗೊಳ: ತಾಲೂಕಿನ ರೈತರ ಬದುಕು ಹಸನಾಗಲಿ ಎಂಬಉದ್ದೇಶದಿಂದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಶ್ರಮಿಸಿದ್ದೇನೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಏತನೀರಾವರಿ ಯೋಜನೆಯಿಂದ ಭರ್ತಿಯಾದ ಹುಳಿಗೆರೆ ಕೆರೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಈ ಭಾಗದ ಜನರಲ್ಲಿ ಇಷ್ಟು ದಿನ ಕೆರೆಗೆ ನೀರು ಬರುತ್ತದೋ, ಇಲ್ಲವೋ ಎಂಬ ಅನುಮಾನವಿತ್ತು. ಆದರೆ, ಈಗಹೋಬಳಿ ವ್ಯಾಪ್ತಿಯ ಹಲವು ಕೆರೆಗಳು ತುಂಬುತ್ತಿವೆ. ಇದರಿಂದ ರೈತರಲ್ಲಿ ವಿಶ್ವಾಸಬಂದಿದೆ. 20 ವರ್ಷದ ಕನಸು ನನಸಾಗಿದೆ ಎಂದು ತಿಳಿಸಿದರು.
ಪರೋಕ್ಷ ತಿರುಗೇಟು: ಏತನೀರಾವರಿ ಯೋಜ ನೆಯು ಸಮರ್ಥವಾಗಿ ಸಾಕಾರಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ, ಕೆಲವರ ಹೇಳಿಕೆಗಳಿಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್ ಮುಖಂಡರಿಗೆಪರೋಕ್ಷವಾಗಿ ತಿರುಗೇಟು ನೀಡಿದರು. ಇನ್ನು ಒಂದು ವಾರದೊಳಗೆ ಚನ್ನೇನಹಳ್ಳಿ,ಕೆಂಪಿನಕೋಟೆ, ಮರಿಶೆಟ್ಟಿಹಳ್ಳಿ, ಎನ್.ಜಿ. ಕೊಪ್ಪಲು, ಪರಮ, ಹಳೆಬೆಳಗೊಳ, ಬೆಕ್ಕ ಗ್ರಾಮದ ಕೆರೆಗಳು ತುಂಬಲಿವೆ, ಅ.25ರಹೊತ್ತಿಗೆ ಮತಿಘಟ್ಟ ಕೆರೆಗೆ ನೀರು ಹರಿಯಲಿದ್ದು, ನಂತರ ಹಿರೀಸಾವೆ ಭಾಗದ ಕೆರೆಗಳು ತುಂಬಲಿವೆ ಎಂದು ಹೇಳಿದರು.
ಇತರೆ ಕೆರೆಗಳಿಗೂ ನೀರು: ಡಿಸೆಂಬರ್31ರವರೆಗೆ ನಾಲೆಯಲ್ಲಿ ನೀರು ಹರಿಯಲಿದ್ದು, ಈ ಭಾಗದ ಬಹುತೇಕ ಕೆರೆಗಳು ತುಂಬಲಿವೆ, ಮುಂದಿನ ಸಾಲಿನಲ್ಲಿ ಸುಂಡಹಳ್ಳಿ, ಕಂಡೇರಿಕಟ್ಟೆ, ಹೊಸಹಳ್ಳಿ, ಚಲ್ಯಾ, ಕುಂಭೇನಹಳ್ಳಿ ಕೆರೆಗಳಿಗೆ ನೀರು ಬರಲಿದೆ ಎಂದು ಭರವಸೆ ನೀಡಿದರು. ಹುಳಿಗೆರೆ ಕೆರೆ 25 ಎಕರೆ ಪ್ರದೇಶವನ್ನು ಹೊಂದಿದೆ. ಈಗ ಕೆರೆ ತುಂಬಿದ್ದರಿಂದ ನಮ್ಮ ಸುತ್ತಮುತ್ತಲಿನ ಜಮೀನಿನ ತೆಂಗಿನ ತೋಟ ಸಮೃದ್ಧಿಗೊಂಡಿದ್ದು, ಅಂತರ್ಜಲ ಹೆಚ್ಚಾಗಿದೆ. ಇದರಿಂದ ರೈತರ ಸಂಕಷ್ಟಗಳು ದೂರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ಮೆರವಣಿಗೆ: ಬಾಗಿನ ಅರ್ಪಿಸಲು ಆಗಮಿಸಿದ್ದ ಶಾಸಕರನ್ನು ಗ್ರಾಮಸ್ಥರು ಹೂ, ಬಾಳೆಕಂದು ಕಟ್ಟಿ ಅಲಂಕೃತಗೊಳಿಸಿದ್ದ ಎತ್ತಿನಗಾಡಿಯಲ್ಲಿ ಗ್ರಾಮದಿಂದ ಕೆರೆ ವರೆಗೆ ಮೆರವಣಿಗೆ ಮಾಡಿದರು. ಶಾಸ್ತ್ರೋಕ್ತವಾಗಿ ಗಂಗಾಪೂಜೆ ಮಾಡಿದ ಶಾಸಕ ಬಾಲಕೃಷ್ಣ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಮತಾ ರಮೇಶ್, ಪೂಮಡಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎ.ದೊಡ್ಡೇಗೌಡ, ಗ್ರಾಮದ ರಾಜಮ್ಮ, ಚಿಕ್ಕಮ್ಮ, ನಂಜುಂಡೇಗೌಡ, ನಾಗೇಗೌಡ, ಎಂಜಿನಿಯರ್ ಗಜೇಂದ್ರ ಮಂಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜೇಗೌಡ, ಟಿಎಪಿಎಂ ಎಸ್ ನಿರ್ದೇಶಕ ಕೃಷ್ಣೇಗೌಡ, ತಾಪಂ ಮಾಜಿ ಸದಸ್ಯ ಮಂಜೇಗೌಡ, ರಾಜಣ್ಣ, ಗಂಗಣ್ಣ, ಸುತ್ತ ಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.