Advertisement

ಜೀವ ಬೆದರಿಕೆಗೆ ಬಗ್ಗಲ್ಲ: ಶಿಮುಶ

02:58 PM Mar 22, 2017 | |

ದಾವಣಗೆರೆ: ಮೂಢನಂಬಿಕೆ ಮೂಲೋತ್ಪಾಟನೆ, ಸಾಮಾಜಿಕ ಪರಿವರ್ತನೆ, ಪ್ರಯೋಗದಲ್ಲಿ ತೊಡಗಿರುವ ತಮಗೆ ಜೀವ ಬೆದರಿಕೆ ಬಂದಿರುವುದು ನಿಜ. ಪೊಲೀಸರು ಆ ಬಗ್ಗೆ ತನಿಗೆ ನಡೆಸುತ್ತಿದ್ದಾರೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಂಬರ, ಅದ್ಧೂರಿತನವನ್ನು ಮುಂದಿಟ್ಟುಕೊಂಡವರು ಸಲೀಸಾಗಿ ಬದುಕು ನಡೆಸುತ್ತಾರೆ. ತಮ್ಮಂತೆ ಸದಾ ಆದರ್ಶದಿಂದ ಬದುಕು ಸಾಗಿಸುವವರಿಗೆ ಇಂತಹ ಬೆದರಿಕೆ ಸರ್ವೇ ಸಾಮಾನ್ಯ. ತಾವು ಇಂತಹ ಬೆದರಿಕೆಗೆ ಜಗ್ಗುವ, ಅಧೀರರಾಗುವ ಮಾತೇ ಇಲ್ಲ.

ಬದಲಿಗೆ ಮತ್ತಷ್ಟು ಸ್ಪಷ್ಟತೆಗೆ ಒಳಗಾಗಿ ತಮ್ಮ ಕಾರ್ಯ ಮುಂದುವರಿಸುತ್ತೇವೆ ಎಂದು ಹೇಳಿದರು. ಸೋಮವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ತಮಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರ ಕುರಿತು ಪೊಲೀಸರ ಗಮನಕ್ಕೆ ತರಲಾಯಿತು. ಆ ಬಗ್ಗೆ ತನಿಖೆ ನಡೆಯುತ್ತಿದೆ.

ಕರೆ ಮಾಡಿದವರು ಹೈದರಾಬಾದ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ತನಿಖೆ ನಡೆಯುತ್ತಿರುವ ಸಮಯದಲ್ಲಿ ತಾವು ಹೆಚ್ಚಿನ ಮಾಹಿತಿ ನೀಡುವುದರಿಂದ ಕರೆ ಮಾಡಿದವರು ಬೇರೆ ಕಡೆ ತೆರಳುವಂತಾಗಲು ನೆರವು ಆದಂತಾಗುತ್ತದೆ. ಹಾಗಾಗಿ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ತನಿಖೆ ನಂತರ ಎಲ್ಲ ವಿಷಯ ಬೆಳಕಿಗೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕಳೆದ 10 ವರ್ಷದ ಹಿಂದೆ ಶರಣ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಇದೇ ರೀತಿ ಬೆದರಿಕೆಯ ಪತ್ರ ಬಂದಿತ್ತು. ಶರಣ ಸಂಸ್ಕೃತಿಯ ಉತ್ಸವದ ಕೊನೆ ದಿನ ಆ ಪತ್ರವನ್ನು ಪ್ರದರ್ಶಿಸಿದ್ದೆವು. ಶರಣ ಸಂಸ್ಕೃತಿಗೆ ಜನರು ಬರದಂತಾಗಲಿ ಎಂಬ ಕಾರಣಕ್ಕೆ ಆ ರೀತಿ ಬೆದರಿಕೆ ಪತ್ರ ಬಂದಿತ್ತು ಎಂದೆನಿಸುತ್ತದೆ ಎಂದು ತಿಳಿಸಿದರು. 

Advertisement

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ನೇಮಕಕ್ಕೆ ಅಲ್ಲಿನ ಶಾಸಕರ ಒಲವು ಕಾರಣ. ಉತ್ತರ ಪ್ರದೇಶದಂತೆ ದೇವಸ್ಥಾನದ ಅರ್ಚಕರೊಬ್ಬರು, ಮಠಾಧೀಶರು ಮುಖ್ಯಮಂತ್ರಿ ಆಗುವಂತಹ ವಾತಾವರಣ ಸದ್ಯಕ್ಕಂತೂ ಇಲ್ಲ. ಮುಂದೆ ಹೇಗೋ, ಏನಾಗಲಿದೆಯೋ ಗೊತ್ತಿಲ್ಲ. ಮಠಾಧೀಶರೊಬ್ಬರು ಮುಖ್ಯಮಂತ್ರಿ ಆಗಿದ್ದಾರೆ.

ಅವರು ಯಾವ ರೀತಿ ಅಧಿಕಾರ ನಡೆಸುತ್ತಾರೋ ಎಂಬುದನ್ನು ನೋಡೋಣ. ಮೇಲಾಗಿ ಜವಾಬ್ದಾರಿಯುತ ಸ್ಥಾನಕ್ಕೆ ಬಂದಾಗ ಹಿಂದಿನ ಪ್ರತಿಪಾದನೆ ಬದಲಾಯಿಸಿಕೊಂಡು ಒಳ್ಳೆಯ ಅಧಿಕಾರ ನೀಡಬಹುದು ಎಂಬುದು ತಮ್ಮ ವಿಶ್ವಾಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಲವು ವರ್ಷದಿಂದ ರಾಜಕೀಯದಲ್ಲಿ ಧರ್ಮ ಅನುಸರಣೆ ಮಾಡಬೇಕು ಎಂಬ ವಿಷಯ ಚರ್ಚೆಯಲ್ಲಿದೆ.

ಯೋಗಿ ಆದಿತ್ಯನಾಥ್‌ ಪಾರಮಾರ್ಥಿಕ ವಿಚಾರ ಮುಂದಿಟ್ಟುಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ, ನೆಮ್ಮದಿ,ಸುವ್ಯವಸ್ಥೆ ನೆಲೆಸಲು ಹಾಗೂ ಎಲ್ಲಾ ಜಾತಿ, ಧರ್ಮದವರನ್ನು ಸಮಾನತೆಯಿಂದ ನೋಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಲಿ. ಸ್ವಾಮಿ ವಿವೇಕಾನಂದರು ಇಡೀ ಭಾರತವನ್ನು ಜಾಗೃತಗೊಳಿಸಿದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next