ಬಾಗೇಪಲ್ಲಿ: ಪಟ್ಟಣದ ಪುರಸಭೆಯ 23 ಸ್ಥಾನ (ವಾರ್ಡ್)ಗಳಿಗೆ 2019 ಏ.31 ರಂದು ಸಾರ್ವತ್ರಿಕ ಚುನಾವಣೆ ನಡೆದಿದ್ದು, 18 ತಿಂಗಳು ಕಳೆದ ನಂತರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಸರ್ಕಾರ ಸೂಚಿಸಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಅ) ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಪಡಿಸಿದ್ದು, ನ.6 ರಂದು ಚುನಾವಣೆ ನಡೆಸುವಂತೆ ವೇಳಾಪಟ್ಟಿ ಬಿಡುಗಡೆ ಮಾಡಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಆದೇಶ ಹೊರಡಿಸಿದ್ದು, ಪುರಸಭೆ ಆಡಳಿತ ಅಧಿಕಾರಕ್ಕೆ ಹಿಡಿದಿದ್ದ ಗ್ರಹಣಕ್ಕೆ ಮೋಕ್ಷ ಲಭಿಸಿದೆ.
ಚುನಾವಣೆ ನಡೆಸಲು ಆದೇಶ: ಬಾಗೇಪಲ್ಲಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಿಟ್ಟು 2020 ಮಾರ್ಚ್ 11 ರಂದು ರಾಜ್ಯ ಸರ್ಕಾರ ಅಧಿಸೂಚನೆಯಂತೆ ಮೀಸಲಾತಿ ಪ್ರಕಟಿಸಿತ್ತು. ಆದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮೀಸಲಾತಿ ಪ್ರಶ್ನಿಸಿ ರಾಜ್ಯಾದ್ಯಂತ ಹಲವು ಸದಸ್ಯರು ಕೋರ್ಟ್ ಮೆಟ್ಟಿಲು ಹತ್ತಿದ ಕಾರಣ, ಹಳೇ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಪರಿಷ್ಕರಣೆ ಮಾಡಿದ ಹೊಸ ಮೀಸಲಾತಿ ಪಟ್ಟಿ ಘೋಷಣೆ ಮಾಡಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ನಡೆಸುವಂತೆ ಆದೇಶಿಸಿ ದಿನಾಂಕ ನಿಗದಿಪಡಿಸಿದೆ.
ಪಕ್ಷಗಳ ಬಲಾ ಬಲ: ಒಟ್ಟು 23 ಸ್ಥಾನಗಳಿದ್ದು, ಕಾಂಗ್ರೆಸ್ 13, ಸಿಪಿಎಂ 2, ಜೆಡಿಎಸ್ 1 ಹಾಗೂ ಪಕ್ಷೇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗದ್ದುಗೆಗೇರಲು 12 ಸದಸ್ಯರ ಸಂಖ್ಯಾ ಬಲ ಮಾತ್ರ ಅವಶ್ಯಕತೆ ಇದೆ. ಕಾಂಗ್ರೆಸ್‌ಗೆ 13 ಸದಸ್ಯರ ಸಂಖ್ಯಾಬಲವಿದ್ದು, ಅಧ್ಯಕ್ಷ ಗಾದೆಗಾಗಿ ಮೂವರು ಪ್ರಮುಖರಿದ್ದು, ಅಗತ್ಯ ಸಂಖ್ಯಾಬಲದ ಬೆಂಬಲಕ್ಕಾಗಿ ಮೂವರು ಆಕಾಂಕ್ಷಿ ಅಭ್ಯರ್ಥಿಗಳು ಸದಸ್ಯರ ಬಳಿ ದುಂಬಾಲು ಬೀಳುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿರುವ ಭಿನ್ನಮತೀಯರ ಸದಸ್ಯರಗುಂಪನ್ನು ಪಕ್ಷೇತರರು ತಮ್ಮ ಕಡೆ ಪಲಾಯನ ಮಾಡಿಕೊಂಡು ಗೆಲುವಿನ ಅವಕಾಶಕ್ಕಾಗಿ ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಧಿಕಾರ ಯಾರಿಗೆ ಒಲಿಯಲಿದೆ ಎಂಬುದು ಕಾದು ನೋಡಬೇಕಿದೆ. ಆಕಾಂಕ್ಷಿ ಅಭ್ಯರ್ಥಿಗಳ ವಿವರ: 18 ನೇ ವಾರ್ಡ್ ನ ಹಸೀನಾ ಮನ್ಸೂರ್ (ಕಾಂಗ್ರೆಸ್), 17 ನೇ ವಾರ್ಡ್‌ನ ಶಭಾನಾ ಪರ್ವೀನ್(ಕಾಂಗ್ರೆಸ್), 14 ನೇ ವಾರ್ಡ್‌ನ ಗುಲ್ನಾಜ್ ಬೇಗ್(ಕಾಂಗ್ರೆಸ್),13 ನೇ ವಾರ್ಡ್‌ನ ಸದಸ್ಯೆ ನುತಾದೇ(ಸಿಪಿಎಂ), 5 ನೇ ವಾರ್ಡ್‌ನ ರೇಷ್ಮಬಾನು (ಪಕ್ಷೇತರ) ಸೇರಿದಂತೆ 5 ಜನ ಪುರಸಭೆ ಸದಸ್ಯರು ಹಿಂದುಳಿದವರ್ಗ (ಅ) ಮಹಿಳಾ ಮೀಸಲಾತಿ ನಿಗದಿಯಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹ ಸದಸ್ಯರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವ ಕಾರಣ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರ ನಡುವೆ ತೀವ್ರ ಪೈ ಪೋಟಿ ನಡೆಯುತ್ತಿದೆ.
ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ : ಬಾಗೇಪಲ್ಲಿ ಪಟ್ಟಣ ಹಿಂದುಳಿದಿದ್ದು, ಬಡವರ ಸೇವೆ ಮಾಡಬೇಕು ಎಂಬ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡಿದ್ದು, ಮತದಾರರು ಪುರಸಭೆ ಸದಸ್ಯೆಯಾಗಿ ಆಯ್ಕೆ ಮಾಡಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ(ಅ)ಮಹಿಳೆಗೆ
ಮೀಸಲಿಟ್ಟಿರುವ ಕಾರಣ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಹಿರಿಯ ಮುಖಂಡರ ಅಭಿಪ್ರಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ಸಿಪಿಎಂನಿಂದ 13ನೇ ವಾರ್ಡ್‌ನ ಸದಸ್ಯೆ ವಿನುತಾದೇವಿ ತಿಳಿಸಿದರು.
ಶಾಸಕರು, ಸದಸ್ಯರ ತೀರ್ಮಾನಕ್ಕೆ ಬದ್ಧ : ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಅ) ಮಹಿಳೆಗೆ ಮೀಸಲಾತಿ ಬಂದಿರುವುದು ಅಲ್ಪಸಂಖ್ಯಾತರ ಪಾಲಿಗೆ ವರದಾನವಾಗಿದೆ. ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಹಾಗೂ ಕಾಂಗ್ರೆಸ್ ಸದಸ್ಯರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಅಧ್ಯಕ್ಷೆ ಆಕಾಂಕ್ಷಿ 14 ನೇ ವಾರ್ಡ್ ಸದಸ್ಯೆ ಗುಲ್ನಾಜ್ ಬೇಗಂ ತಿಳಿಸಿದ್ದಾರೆ.