Advertisement
Related Articles
Advertisement
ಕಳೆದ ಬಾರಿ 6 ಸ್ಥಾನಗಳನ್ನು ಹೊಂದಿದ್ದ ಸಿಪಿಎಂ 4 ಸ್ಥಾನಗಳನ್ನು ಕಳೆದುಕೊಂಡು 2ಕ್ಕೆ ಇಳಿದಿದೆ. ಕಳೆದ ಬಾರಿ ಎರಡು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಈ ಬಾರಿ 1 ಸ್ಥಾನ ಕಳೆದುಕೊಂಡು 1 ಸ್ಥಾನಕ್ಕೆ ಇಳಿದಿದೆ. ಪಕ್ಷೇತರರರು ಕಳೆದ ಬಾರಿ 8 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ 1 ಸ್ಥಾನ ಕಳೆದುಕೊಂಡು 7 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಪಕ್ಷೇತರರ ಬೆಂಬಲದೊಂದಿಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಈಗ ಸ್ವಂತ ಬಲದೊಂದಿಗೆ ಪುರಸಭೆಯಲ್ಲಿ ಆಡಳಿತ ನಡೆಸಲು ಸಜ್ಜಾಗಿದೆ.
ಶಿಡ್ಲಘಟ್ಟ ನಗರಸಭೆಗೆ ಆನೆ ಪ್ರವೇಶ: ಇದೇ ಮೊದಲ ಬಾರಿಗೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಬಹುಜನ ಸಮಾಜ ಪಕ್ಷ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ತೆರೆದು ರಾಜಕೀಯವಾಗಿ ಗಮನ ಸೆಳೆದಿದೆ. ಜಿಲ್ಲೆಯ ಶಿಡ್ಲಘಟ್ಟ ನಗರಸಭೆಗೆ ಇದೇ ಮೊದಲ ಬಾರಿಗೆ ಆನೆ ಪ್ರವೇಶ ಮಾಡಿದೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳಾಗಿ 12ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಮೌಲ (594) ಮತ ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಮುಸಾವರ (347) ವಿರುದ್ಧ 247 ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಾರ್ಡ್ 29 ರಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಜಬೀವುಲ್ಲಾ (487) ಮತ ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಮೀರ್ ಹುಸೇನ್ ಖಾನ್ (411) ವಿರುದ್ಧ ಕೇವಲ 19 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅತಂತ್ರವಾಗಿರುವ ಶಿಡ್ಲಘಟ್ಟ ಯಾರಿಗೆ ಒಲಿಯುತ್ತೆ? ಒಟ್ಟು 31 ಸದಸ್ಯ ಬಲ ಇರುವ ಶಿಡ್ಲಘಟ್ಟ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ಹೀಗಾಗಿ ಯಾವುದೇ ಪಕ್ಷ ಅಧಿಕಾರಕ್ಕೇ ಏರಬೇಕಾದರೂ ಕನಿಷ್ಠ ಸಂಖ್ಯೆ 16 ಸದಸ್ಯರ ಮೇಲೆ ಇರಬೇಕಿದೆ. ಆದರೆ ಕಾಂಗ್ರೆಸ್ 13, ಜೆಡಿಎಸ್ 10 ಸ್ಥಾನ ಪಡೆದಿದೆ. ಸ್ಥಳೀಯ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ರಾಜ್ಯದಲ್ಲಿ ಆದಂತೆ ಇಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗುವುದು ಅನುಮಾನವಾಗಿದೆ.
ಕಾಂಗ್ರೆಸ್ ಪಕ್ಷ ಬಿಎಸ್‌ಪಿ ಹಾಗೂ ಪಕ್ಷೇತರರ ಜೊತೆ ಸೇರಿ ಆಡಳಿತ ನಡೆಸುತ್ತಾ ಇಲ್ಲ, 10 ಸದಸ್ಯರನ್ನು ಹೊಂದಿರುವ ಜೆಡಿಎಸ್ ಬಿಎಸ್‌ಪಿ, ಪಕ್ಷೇತರರ ಜೊತೆ ಸೇರಿ ಅಧಿಕಾರ ನಡೆಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶಿಡ್ಲಘಟ್ಟ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಸದಸ್ಯರ ಕುದುರೆ ವ್ಯಾಪಾರ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಗೆದ್ದವರು ಬೀಗಿ ಸಂಭ್ರಮಾಚರಣೆ: ಲೋಕಸಭಾ ಚುನಾವಣೆ ಬಳಿಕ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಒಂದು ರೀತಿ ಕಾಂಗ್ರೆಸ್ ಪಕ್ಷಕ್ಕೆ ತುಸು ಸಮಾಧಾನ ತಂದಿದೆ. ಮತ ಎಣಿಕೆ ನಡೆದ ಅಭ್ಯರ್ಥಿಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ ಗೆಲುವು ಸಾಧಿಸಿದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಗೆಲುವಿನ ಸಂಭ್ರಮಾಚರಣೆ ನಡೆಸಿದ ದೃಶ್ಯಗಳು ಸಾಮಾನ್ಯವಾಗಿತ್ತು. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು. ತಮ್ಮ ವಾರ್ಡ್‌ಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಭ್ಯರ್ಥಿಗಳ ಗೆಲುವಿನ ಅಂತರ 6 ಮತಗಳಿಂದ ಹಿಡಿದು 706 ಮತಗಳ ಗಡಿ ದಾಟಿದೆ. ಕೆಲವರು 11, 7, 6 ಮತಗಳ ಅಂತರಿಂದ ಚುನಾವಣೆಯಲ್ಲಿ ಸೋತಿದ್ದು ಕಂಡು ಬಂತು.
ಮತ ಎಣಿಕೆ ಕಾರ್ಯ ಸುಸೂತ್ರ : ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಒಟ್ಟು 31 ವಾರ್ಡ್‌ಗಳಿಗೂ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಮಧ್ಯಾಹ್ನ 12 ಗಂಟೆಗೆಲ್ಲಾ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇವಿಎಂ ಮತಯಂತ್ರಗಳಿಂದ ಅನಾವರಣಗೊಂಡಿತು. ಬಾಗೇಪಲ್ಲಿ ಪುರಸಭೆಯ 23 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದು ಬೆಳಗ್ಗೆ 11 ಗಂಟೆಗೆಲ್ಲಾ ಫಲಿತಾಂಶ ಹೊರ ಬಿತ್ತು. ಮತ ಎಣಿಕೆ ಕೇಂದ್ರಗಳ ಸುತ್ತಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.