Advertisement

ಬಾಗೇಪಲ್ಲಿಗೆ ಬರಲಿ ಭಾಗ್ಯನಗರ

11:17 PM Sep 27, 2022 | Team Udayavani |

ರಾಜ್ಯದ ಗುಲ್ಬರ್ಗ (ಕಲಬುರಗಿ), ಬಿಜಾಪುರ (ವಿಜಯಪುರ) ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಆಂಧ್ರಪ್ರದೇಶದ ಗಡಿಗೆ ಹೊಂದಿ ಕೊಂಡಿರುವ ಬಾಗೇಪಲ್ಲಿ ತಾಲೂಕಿನ ಹೆಸರನ್ನು ಬದಲಾಯಿಸಿ ಅದಕ್ಕೆ “ಭಾಗ್ಯ ನಗರ’ ಎಂದು ಮರುನಾಮಕರಣ ಮಾಡಲು ಕನ್ನಡ‌ ಹಾಗೂ ಪ್ರಗತಿಪರ ಸಂಘಟನೆಗಳು ಅಭಿಯಾನವನ್ನು ಆರಂಭಿಸಿವೆ.

Advertisement

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿ ಪ್ರದೇಶಕ್ಕೆ ಹೊಂದಿಕೊಂಡಿವೆ. ಅದರಲ್ಲೂ ಬಾಗೇಪಲ್ಲಿ ಆಂಧ್ರಪ್ರದೇಶದ ಗಡಿಗೆ ಹೊಂದಿ ಕೊಂಡಿದ್ದು ನಂಜುಂಡಸ್ವಾಮಿ ವರದಿಯ ಅಂಕಿ ಅಂಶಗಳ ಪ್ರಕಾರ ಇದನ್ನು ಹಿಂದುಳಿದ ಪ್ರದೇಶವೆಂದು ಪರಿಗಣಿಸಿ ಸರಕಾರಗಳು ಈಗಾಗಲೇ ಈ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡಿದೆ. ಅವಳಿ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಜತೆಗೆ ಪರಭಾಷೆಯ ಪ್ರಭಾವ ಹೆಚ್ಚಿದ್ದರೂ ಸಹ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ್ದಾರೆ.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿ ರುವ ಬಾಗೇಪಲ್ಲಿ ತಾಲೂಕಿನಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಿದ್ದರೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಈ ಮಧ್ಯೆ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ತಾಲೂಕಿನ ಹೆಸರು ಬದಲಾವಣೆ ಮಾಡುವ ಕೂಗು ಕೇಳಿ ಬರುತ್ತಿದೆ. ಕನ್ನಡಪರ ಸಂಘಟನೆಗಳ ಹೋರಾಟ ಮತ್ತು ಬೇಡಿಕೆಗೆ ಮಣಿದಿರುವ ಕ್ಷೇತ್ರದ ಶಾಸಕ ಎಸ್‌.ಎನ್‌. ಸುಬ್ಟಾರೆಡ್ಡಿ ಅವರು ಬಾಗೇಪಲ್ಲಿ ತಾಲೂಕಿನ ಹೆಸರನ್ನು ಬದಲಾಯಿಸಿ ಭಾಗ್ಯನಗರ ಮಾಡಬೇಕೆಂದು ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾವ ಮಾಡಿ ಸ್ಥಳೀಯವಾಗಿ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಬಾಗೇಪಲ್ಲಿ ತಾಲೂಕಿನ ಕನ್ನಡಪರ ಹಾಗೂ ಪ್ರಗತಿಪರ ಹೋರಾಟಗಾರರ ಸಭೆ ನಡೆಸಿ ಸರಕಾರಕ್ಕೂ ಒಂದು ಪ್ರಸ್ತಾವನೆ ಸಲ್ಲಿಸಿ ಕೂಡಲೇ ಭಾಗ್ಯನಗರ ಹೆಸರಿಡಬೇಕೆಂದು ಆಗ್ರಹಿಸಿದ್ದಾರೆ.

ನಟ ಉದಯಕುಮಾರ್‌ ಪ್ರೇರಣೆ?
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕನ್ನಡ ಕಲಾ ಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರ ನಟ ಉದಯಕುಮಾರ್‌ ಅವರು ಬಾಗೇಪಲ್ಲಿ ತಾಲೂಕನ್ನು ಭಾಗ್ಯನಗರವೆಂದು ಮರುನಾಮಕರಣ ಮಾಡಬೇಕೆಂದು ಪ್ರಸ್ತಾವ ಮಾಡಿದ್ದರು.

ಭಾಗ್ಯನಗರವೇ ಏಕೆ?
ಬಾಗೇಪಲ್ಲಿ ಮೊದಲು ಹಳ್ಳಿಯಾಗಿತ್ತು.ಅಂದರೆ ಪಳ್ಳಿ ಎಂದರೆ ಹಳ್ಳಿ ಅಂತ. ಈಗ ಇದನ್ನು ಭಾಗ್ಯನಗರವೆಂದು ಕರೆದರೆ, ಹಳ್ಳಿಯಿಂದ ನಗರವಾಗಿ ಬದಲಾದಂತೆ ಆಗುತ್ತದೆ ಎಂಬುದು ಒಂದು ಕಾರಣ. ಮತ್ತೂಂದು ಇಂಥ ಬಾಗೇಪಲ್ಲಿಯಿಂದ ಹೋಗಿ ದೊಡ್ಡ ನಟರಾದ ಉದಯಕುಮಾರ್‌ ಅವರಿಂದ ಬಾಗೇಪಲ್ಲಿಗೆ ಭಾಗ್ಯ ಬಂದಿದೆ. ಹೀಗಾಗಿ ಭಾಗ್ಯನಗರ ಎಂಬ ಹೆಸರಿಡಬೇಕು ಎಂಬುದು ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ.

Advertisement

-ಎಂ.ಎ. ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next