ಶಿರಹಟ್ಟಿ: ಬಗರ್‌ಹುಕುಂ ಸಾಗುವಳಿದಾರರು ಕಳೆದ 5 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಜಿಲ್ಲಾಡಳಿತದ ಸಕಾರಾತ್ಮಕ ಭರವಸೆ ಹಿನ್ನೆಲೆಯಲ್ಲಿ ಅಂತ್ಯಗೊಂಡಿದೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ವರಗಪ್ಪನವರ, ತಹಶೀಲ್ದಾರ್ ಕಲಗೌಡ ಪಾಟೀಲ, ಸಿಪಿಐ ವಿಕಾಸ ಲಮಾಣಿ ಅವರು ಧರಣಿನಿರತರಿಗೆ ಎಳನೀರು ಕುಡಿಸುವ ಮೂಲಕ ಸತ್ಯಾಗ್ರಹಕ್ಕೆ ತೆರೆ ಎಳೆದರು.
ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ತಿರಸ್ಕೃತಗೊಂಡಿರುವ 802 ಅರ್ಜಿಗಳನ್ನು ನ. 15ರ ನಂತರ ಪುನರ್ ಪರಶೀಲನೆ ಮಾಡಿ ಮತ್ತೆ ಸೂಕ್ತ ದಾಖಲೆ ಪಡೆದು ಯಾರಿಗೆ ಭೂಮಿ ಇಲ್ಲವೋ ಅವರಿಗೆ ಮೊದಲ ಅವಕಾಶ ಕಲ್ಪಿಸಿಕೊಡುವ ಕುರಿತು ಮೇಲಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈಗಾಗಲೇ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ತೊಂದರೆ ಆಗದಂತೆ ಅರಣ್ಯ ಇಲಾಖೆ ಅಧಿ ಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ. ರೈತರು ಯಾವುದೇ ಹಂತದಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಂಘಟನೆಯ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ನಮ್ಮ ಧರಣಿ ಸತ್ಯಾಗ್ರಹ ಬಹುತೇಕ ಯಶಸ್ವಿಯಾಗಿದ್ದು, ಬಹುತೇಕ ಬೇಡಿಕೆಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ. ಕಂದಾಯ, ಗೋಮಾಳ, ಹುಲ್ಲುಗಾವಲು ಪ್ರದೇಶಗಳಲ್ಲಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರು ಯಾವುದೇ ಆತಂಕ ಪಡಬಾರದು ಎಂದು ಹೇಳಿದರು. ನ.15ರ ನಂತರ ತಿರಸ್ಕೃತಗೊಂಡಿರುವ 802 ಅರ್ಜಿಗಳ ಪುನರ್ ಪರಿಶೀಲನೆ ನಡೆಸಿ, ಕಾನೂನಿನಡಿ ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯಲಿದೆ.
ಕೆಲೂರಿನಲ್ಲಿ ಹುತಾತ್ಮರಾದ ರೈತ ಮಹಿಳೆಗೂ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ದೇವಪ್ಪ ಲಮಾಣಿ, ಶಿವು ಲಮಾಣಿ, ಈರಣ್ಣ ಲಮಾಣಿ, ಶ್ರೀನಿವಾಸ ಬಾರಬಾರ, ಮಂಜುನಾಥ ಅರೆಪಲ್ಲೆ, ಎನ್.ಟಿ.ಪೂಜಾರ, ಪುಂಡಲೀಕ ಲಮಾಣಿ, ಶಿವು ಲಮಾಣಿ, ಹನುಮಂತ ನಾದಿಗಟ್ಟಿ, ರೂಪಾ ನಾಯಕ, ಧನಸಿಂಗಪ್ಪ ಲಮಾಣಿ, ಚಂದ್ರಕಾಂತ ಚವ್ಹಾಣ, ರಮೇಶ ಪವಾರ, ನಾಮದೇವ ಮಾಂಡ್ರೆ, ನೀಲು ರಾಠೊಡ, ಸಿಪಿಐ ವಿಕಾಸ ಲಮಾಣಿ ಮತ್ತು ಪಿಎಸ್‌ಐ ಪ್ರವೀಣ ಗಂಗೋಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.