ಬೆಂಗಳೂರು: ಸ್ಯಾಟಲೈಟ್ ಸಮೀಕ್ಷೆ ಸೇರಿದಂತೆ ತಂತ್ರಜ್ಞಾನ ಬಳಸಿಕೊಂಡು ಭೂ ಸರ್ವೇಕ್ಷಣೆ ನಡೆಸಲು ಮುಂದಾಗಿರುವ ಕಂದಾಯ ಇಲಾಖೆ, ಇದಕ್ಕಾಗಿ ತಂತ್ರಾಂಶ (ಆ್ಯಪ್)ವೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೂಲಕ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಇತ್ಯರ್ಥಪಡಿಸುವ ಕುರಿತು ಸಾಧ್ಯತಾ ವರದಿ ನೀಡುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.
ಬುಧವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಬಗರ್‌ಹುಕುಂ ತಂತ್ರಾಶದ ಬಳಕೆಯ ಕುರಿತು ಸಚಿವರಿಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ರಾಜ್ಯಾದ್ಯಂತ ನಮೂನೆ 50, 53, 57 ಅರ್ಜಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇವುಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸಿ ಎಂದರು.
ಆಕಸ್ಮಿಕವಾಗಿ ಸರಕಾರಿ ಜಾಗದಲ್ಲಿ ಸಾಗುವಳಿ ನಡೆಯುತ್ತಿದ್ದರೆ ಅಕ್ರಮ-ಸಕ್ರಮ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಇಲಾಖೆ ಬದ್ಧವಾಗಿದೆ. ಆದರೆ, ಪ್ರತಿ ಯೊಂದು ಪ್ರದೇಶಕ್ಕೂ ಅಧಿಕಾರಿಗಳೇ ಖುದ್ದಾಗಿ ಹೋಗಿ ಕೃಷಿ ಚಟುವಟಿಕೆ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ.
ಹೀಗಾಗಿ ಬಗರ್‌ಹುಕುಂ ತಂತ್ರಾಶಕ್ಕೆ ಸ್ಯಾಟ್‌ಲೈಟ್ ಇಮೇಜ್ ಸಹ ಪಡೆದು ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯ ಸಮ್ಮತವಾಗಲಿದೆ. ಈ ಆ್ಯಪ್‌ನಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ಶೀಘ್ರದಲ್ಲೇ ಅಭಿವೃದ್ಧಿಪಡಿಸಿ ಕಾರ್ಯಯೋಜನೆಗೆ ತರುವಂತೆ ಸಚಿವರು ಸೂಚಿಸಿದರು.