ಬಂಗಾರಪೇಟೆ: ತಾಂತ್ರಿಕ ಯುಗದಲ್ಲಿ ಮನುಷ್ಯ ಸೇವಿಸುವ ಆಹಾರ ಪದಾರ್ಥದಲ್ಲಿ ಸತ್ವ ಕಡಿಮೆಯಾಗುತ್ತಿರುವುದರಿಂದ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಪಟ್ಟಾಭಿಷೇಕ ಉದ್ಯಾನದಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆ ಜೀವನದಲ್ಲಿ ಮಾನವನಿಗೆ ಮಾನಸಿಕ ಒತ್ತಡವು ಹೆಚ್ಚಾಗುತ್ತಿದೆ. ಅದನ್ನು ನಿವಾರಣೆ ಮಾಡಿಕೊಳ್ಳಲು ಇಲ್ಲ ಸಲ್ಲದ ದಾರಿಗಳನ್ನು ಹುಡುಕಿಕೊಳ್ಳುವುದರ ಬದಲು ಪ್ರತಿ ನಿತ್ಯ ಯೋಗ ಮಾರ್ಗಗಳನ್ನು ಅನುಸರಿಸಬೇಕು. ಇದರಿಂದ ಮಾನಸಿಕವಾಗಿ ಜೊತೆಯಲ್ಲಿ ಶಾರೀರಿಕವಾಗಿ ಸಧೃಡವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿದರು.
ಗಾಳಿ ಸೇವನೆ: ಪ್ರಾಚೀನ ಕಾಲದಲ್ಲಿ ಋಮುನಿಗಳು ಯೋಗಮುದ್ರೆಯಲ್ಲಿ ಕೇವಲ ಗಾಳಿಯನ್ನು ಸೇವನೆ ಮಾಡುತ್ತ, ಆರೋಗ್ಯವಾಗಿ ಇರುತ್ತಿದ್ದರು. ಅಂತೆಯೇ ನಾವು ಸಹ ಯೋಗದ ಹಾದಿಯನ್ನು ಹಿಡಿದರೆ ಅದು ನಮಗೆ ಆರೋಗ್ಯದ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ವಿಶ್ವ ಯೋಗ ದಿನ: ಸ್ವಾಮಿ ವಿವೇಕಾನಂದರು ಯೋಗ ಅಭ್ಯಾಸದಿಂದ ಜ್ಞಾನ, ಪ್ರೀತಿ, ಸಂತೋಷ, ಬೆಳಕಿನ ಭಾವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ. ಇದನ್ನು ವಿಶ್ವಸಂಸ್ಥೆಯೂ ಗುರುತಿಸಿ ಅದನ್ನು ಪ್ರಚಾರ ಪಡಿಸಲೆಂದೇ ವಿಶ್ವ ಯೋಗ ದಿನವನ್ನು ಅಚರಿಸುವ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಪ್ರತಿದಿನ ಯೋಗಾಭ್ಯಾಸ ಮಾಡಿ: ದೇಹ ಹಾಗೂ ಮನಸ್ಸನ್ನು ಸದಾ ಕ್ರಿಯಾಶೀಲವಾಗಿಡುವ ಮಾರ್ಗಕ್ಕೆ ಯೋಗ ಎನ್ನುವರು. ಯೋಗ ಎಂಬುವುದು ದೀಪ. ಒಮ್ಮೆ ನೀವು ಅದನ್ನು ಹೊತ್ತಿಸಿದರೆ ಅದರ ಬೆಳಕು ಎಂದಿಗೂ ನಂದಿ ಹೋಗದು. ಪ್ರತಿದಿನ ಯೋಗಾಭ್ಯಾಸ ಮಾಡಿದಂತೆಲ್ಲ ದೀಪ ಪ್ರಜ್ವಲಿಸತ್ತಲ್ಲೇ ಇರುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ದಿನ ನಿತ್ಯವೂ ಯೋಗ ಮಾಡುವುದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿವಿಧ ಯೋಗಾಸನಗಳು: ಯೋಗ ಶಿಕ್ಷಕಿ ವೆಂಕಟರತ್ನಮ್ಮ ಸಾಮೂಹಿಕವಾಗಿ, ಸೂರ್ಯ ನಮಸ್ಕಾರ, ಅರ್ಧಚಕ್ರಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಪರಿವರ್ತಾಸನಾ ತ್ರಿಕೋನಾಸನ, ವಜ್ರಾಸನ, ಶಶಕಾಂಗಾಸನ, ಪಶ್ಚಿಮೊತ್ತಾಸನ, ಭುಜಾಂಗಾಸನ, ಧರ್ನೂಸನ, ಸರ್ವಾಂಗಾಸನ, ಹಾಲಾಸನ, ಚಕ್ರಾಸನ, ಕಪಾಲಾಭಾತಿ, ಪ್ರಾಣಾಯಾಮ, ನಾಡಿಶೋಧ, ಈ ರೀತಿಯ ಯೋಗಾಸನಗಳನ್ನು ಮಾಡಿಸಿದರು.
ಪುರಸಭೆ ಸದಸ್ಯೆ ರತ್ನಮ್ಮ ತಿಮ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ಸಿಬ್ಬಂದಿಯಾದ ಗೋವಿಂದರಾಜ್, ವೆಂಕಟೇಶ್, ಸೋಮು, ಮುಖಂಡರಾದ ರಂಗರಾಮಯ್ಯ, ಕೆ.ಸಿ.ಪ್ರಸಾದ್ ಮುಂತಾದವರು ಹಾಜರಿದ್ದರು.