Advertisement
ಬಾಗಲಕೋಟೆಯ ಈ ಹೋಳಿ ಹಬ್ಬಕ್ಕೆ ಗತ ವೈಭವದ ಇತಿಹಾಸವಿದೆ. ನೀರಾವರಿಗಾಗಿ ತ್ಯಾಗ ಮಾಡಿ, ಇಡೀ ನಗರ ಹರಿದು ಹಂಚಿ ಹೋದರೂ ತ್ಯಾಗಿಗಳ ಊರಿನಲ್ಲಿ ಸಂಸ್ಕೃತಿ-ಪರಂಪರೆ ಇಂದಿಗೂ ಉಳಿದಿದೆ ಎಂದರೆ ಈ ಊರಿನ ಪ್ರತಿಯೊಬ್ಬರ ಕೊಡುಗೆಯೇ ಸರಿ.
Related Articles
Advertisement
ಪ್ರಸಿದ್ಧ ಮನೆತನಗಳ ಕೊಡುಗೆ: ನಗರದ ಕಿಲ್ಲಾ, ಹೊಸಪೇಟ, ಹಳಪೇಟ, ಜೈನಪೇಟ ಹಾಗೂ ವೆಂಕಟಪೇಟ ಎಂಬ ಪ್ರಸಿದ್ಧ ಐದು ಮನೆತನದ ಬಡಾವಣೆಗಳಿವೆ. ಈ ಐದು ಬಡಾವಣೆಗಳಲ್ಲಿ ಪ್ರತಿವರ್ಷ ಹೋಳಿ ಹಬ್ಬದ ಬಣ್ಣದಾಟ ಮೂರು ದಿನಗಳವರೆಗೆ ಆಚರಿಸುವ ವಾಡಿಕೆ ಇದೆ. ಮುಖ್ಯವಾಗಿ ಹಲಗೆ ಬಾರಿಸುವ ವಾಡಿಕೆ ಇದೆ. ಈ ಹಲಗೆ ಬಾರಿಸುವ ಗತ್ತು ನಗರದಲ್ಲಿಯ ನಿವಾಸಿಗಳಿಗೆ ಮಾತ್ರ ಬರುತ್ತದೆ. ಇನ್ನುಳಿದವರಿಗೆ ಹಲಗೆ ಬಾರಿಸುವ ಗತ್ತು ಬರಲು ಸಾಧ್ಯವಿಲ್ಲ ಎನ್ನಬಹುದು. ಪ್ರತಿ ಬಡಾವಣೆಗಳಲ್ಲಿಯೂ ಕೆಲವು ಆಯ್ದ ಹಿರಿಯರ ಮನೆಗಳಲ್ಲಿ ಈ ನಿಶಾನೆ ಹಾಗೂ ತುರಾಯಿ ಹಲಗೆಗಳಿರುತ್ತವೆ. ಅವುಗಳನ್ನು ಹೋಳಿ ಹಬ್ಬದಲ್ಲಿ ಮಾತ್ರ ಹೊರಗೆ ತೆಗೆಯುತ್ತಾರೆ. ಪ್ರತಿ ವರ್ಷ ಹುಬ್ಟಾ ನಕ್ಷತ್ರದಂದು ಕಿಲ್ಲಾ ಬಡಾವಣೆಯಲ್ಲಿ ಸುಪ್ರಸಿದ್ಧ ಶ್ರೀಮಂತ ಬಸವಪ್ರಭು ಸರನಾಡಗೌಡ ಅವರ ಮನೆಯಿಂದ ಹಲಿಗೆ ಹಾಗೂ ನಿಶಾನೆ ತೆಗೆದುಕೊಂಡು, ಕುಲಕರ್ಣಿ ಮನೆತನದವರನ್ನು (ಗುರುರಾಜ, ಮದ್ವರಾವ್, ನಾರಾಯಣರಾವ್) ಕರೆದುಕೊಂಡು ಅಂಬೇಡ್ಕರ್ ಗಲ್ಲಿಯ ಪ್ರವೀಣ ಖಾತೇದಾರ ಮನೆಯಿಂದ ಬೆಂಕಿಯನ್ನು ತಂದು ತಮ್ಮ ಬಡಾವಣೆಯಲ್ಲಿ ಮೊದಲು ಕಾಮನದಹನ ಮಾಡುವ ವಾಡಿಕೆ ಇದೆ. ನಂತರ ವಿವಿಧ ಬಡಾವಣೆಯಲ್ಲಿ ಕಾಮದಹನ ಮಾಡಲಾಗುತ್ತದೆ.
ಐತಿಹಾಸಿಕ ನಿಶಾನೆ ಹಾಗೂ ಹಲಗೆಗಳಿರುವ ಮನೆಗಳು: ಕಿಲ್ಲಾ ಓಣಿಗೆ ಸರನಾಡಗೌಡ, ಸರದೇಸಾಯಿ (ಮನ್ನಿಕೇರಿ) ಹಾಗೂ ಮೇಟಿ ಮನೆತನಗಳು, ಹಳಪೇಟ ಓಣಿಗೆ ನಾರಾ, ಹಿರೇಮಠ ಹಾಗೂ ಪೂಜಾರಿ ಮನೆತನಗಳು, ಹೊಸಪೇಟ ಓಣಿಗೆ ಪ್ಯಾಟಿಶೆಟ್ಟರ ಮನೆತನ, ತಪಶೆಟ್ಟಿ, ಅಂಗಡಿ, ಕಲ್ಯಾಣಿ ಮನೆತನಗಳು, ಜೈನಪೇಟ ಓಣಿಯಲ್ಲಿ ಬಾದೋಡಗಿ, ಲೋಕಂಡೆ ಮನೆತನಗಳು, ವೆಂಕಪೇಟ ಓಣಿಗೆ ಹೆರಕಲ್ಲಮಠ ಹಾಗು ಮೋಹರೆ ಮನೆತನಗಳಿವೆ. ಈ ಮೊದಲು ಐದು ಬಡಾವಣೆಯವರು ಐದು ದಿವಸಗಳ ಹೋಳಿ ಹಬ್ಬ ಆಚರಿಸುವ ವಾಡಿಕೆ ಇತ್ತು. ಆದರೆ ಸಾರ್ವಜನಿಕರಿಗೆ, ನಗರದ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುವುದನ್ನು ಗಮನಿಸಿ ಹಿರಿಯರು ಈಗ ಮೂರು ದಿನಗಳವರೆಗೆ ಆಚರಿಸುವ ರೂಢಿ ಬಂದಿದೆ.
ಸೋಗುಗಳ (ಸ್ತಬ್ಧಚಿತ್ರ) ಪ್ರದರ್ಶನ- ಬಣ್ಣದ ಆಟ: ಹೋಳಿ ಹಬ್ಬದಲ್ಲಿ ಸುಮಾರು ರೂ ಎರಡು ಲಕ್ಷಕ್ಕಿಂತಲೂ ಹೆಚ್ಚು ಹಣ ಬಣ್ಣಕ್ಕೆ ವೆಚ್ಚವಾಗುತ್ತದೆ ಎಂಬ ಅಂದಾಜಿದೆ. ಕಾಮನ ದಹನವಾದ ನಂತರ ರಾತ್ರಿ ಒಂದು ಬಡಾವಣೆಯವರು ಮೊದಲು ಸೋಗಿನ ಗಾಡಿಯನ್ನು ಎಲ್ಲ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿಸುತ್ತಾರೆ. ಸುಮಾರು 10ರಿಂದ 20 ಚಕ್ಕಡಿಗಳಲ್ಲಿ ವಿವಿಧ ವೇಷ-ಭೂಷಣ ಪ್ರದರ್ಶನ ನಡೆಯುತ್ತದೆ. ಆದರೆ ಒಂದೊಂದು ಸೋಗಿನ ಗಾಡಿಗೆ ಸುಮಾರು 15-20 ಸಾವಿರ ರೂ.ವೆಚ್ಚ ತಗಲುತ್ತದೆ. ಈಚೆಗೆ ಕಡಿಮೆ ಪ್ರಮಾಣದಲ್ಲಿ ಸೋಗಿನ ಗಾಡಿಗಳನ್ನು ಪ್ರದರ್ಶಿಸುತ್ತಾರೆ. ರಾತ್ರಿ ಸೋಗಿನ ಗಾಡಿಗಳ ಪ್ರದರ್ಶನ ನಡೆದ ನಂತರ ಬೆಳಗ್ಗೆ ಅದೇ ಬಡಾವಣೆಯವರು ಚಕ್ಕಡಿ (ಬಂಡಿ), ಟ್ರಾಕ್ಟರ, ಲಾರಿಗಳಲ್ಲಿ ಬಣ್ಣ ತುಂಬಿದ ಬ್ಯಾರಲ್ ಗಳನ್ನು ಇಟ್ಟು ವಿವಿಧ ಬಡಾವಣೆಗಳಲ್ಲಿ ಬಣ್ಣದ ಆಟ ಆಡುತ್ತಾರೆ.
ಬಣ್ಣದಾಟ ನೋಡಲೆಂದೇ ಬರ್ತಾರೆ ಬೀಗರು: ಬಣ್ಣದ ಗಾಡಿಗಳು ಬಡಾವಣೆಗಳಲ್ಲಿ ಬರುತ್ತಿರುವ ಬಗ್ಗೆ ಅಲ್ಲಿಯ ನಾಗರಿಕರು ತಮ್ಮ ಮನೆಯ ಮಾಳಿಗೆಯ ಮೊದಲೇ ಸಂಗ್ರಹಿಸಿದ ಬಣ್ಣವನ್ನು ಗಾಡಿಯವರ ಮೇಲೆ ಮುಖಾಮುಖೀ ಬಣ್ಣ ಎರಚುವ ದೃಶ್ಯ ಮನೋಹರವಾಗಿ ಕಾಣಿಸುತ್ತದೆ. ಮಾ.11ರಂದು ಬಣ್ಣದಾಟ, ಒಂದು ಕಡೆಯಿಂದ ಹಳೇಪೇಟ ಓಣಿ ಕಡೆಯಿಂದ ಬಂದರೆ, ವಿರುದ್ದ ದಿಕ್ಕಿನಿಂದ ಜೈನಪೇಟ, ವೆಂಕಟಪೇಟ ಓಣಿಯವರ ಮಧ್ಯೆ ಬಣ್ಣದ ಯುದ್ದದ ಅನುಭವದಂತೆ ಬಣ್ಣದಾಟ ನಡೆಯುತ್ತದೆ. ಈ ದೃಶ್ಯ ನೋಡಲೆಂದೇ ಬೇರೆ ಬೇರೆ ಊರುಗಳಿಂದ ಸಾವಿರಾರು ಜನರು ಬಂದು ತಮ ಕಣ್ತುಂಬಿಕೊಳ್ಳುತ್ತಾರೆ. ಮಾರವಾಡಿ ಸಮಾಜದವರು ವಿಶೇಷವಾಗಿ ಮಹಿಳೆಯರು ಹೋಳಿ ಒಂದು ದಿವಸ ಮಾತ್ರ ಆಚರಿಸುವ ವಾಡಿಕೆಯಿದೆ. ಹೋಳಿ ನೋಡಲು ಪರ ಊರುಗಳಿಂದ ನಾಗರಿಕರು ಬರುತ್ತಾರೆ.
-ಎಸ್.ಕೆ. ಬಿರಾದಾರ