ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳದಲ್ಲಿ ನಡೆದ ಜೋಡಿ ಕೊಲೆಯ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಮಹಿಳೆಯರು ಡಿಸಿ ಕಚೇರಿ ಎದುರು ಉರುಳಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿಸಿಎಂ ಕಾರಜೋಳ ರ ಕ್ಷೇತ್ರ ಮುಧೋಳದಲ್ಲಿ ಮಂಗಳವಾರ ಜೋಡಿ ಕೊಲೆ ನಡೆದಿತ್ತು. ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮುಧೋಳಕ್ಕೆ ಒಯ್ಯಲು ಪೊಲೀಸರು ನಿರ್ಧರಿಸಿದರು. ಆಗ ಮೃತದೇಹಗಳನ್ನು ಜಿಲ್ಲಾಡಳಿತ ಭವನದ ಎದುರು ಇಟ್ಟು ಪ್ರತಿಭಟಿಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ತದನಂತರ ಪೊಲೀಸರು ಬೇರೆ ಮಾರ್ಗದ ಮೂಲಕ ಶವಗಳನ್ನು ಸಾಗಿಸಿದರು.
ಇತ್ತ ದಲಿತ ಸಂಘರ್ಷ ಸಮಿತಿ, ಭೀಮವಾದ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಆರಂಭಗೊಂಡು, ಶವಗಳನ್ನು ವಾಪಸ್ ತನ್ನಿ ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಧರಣಿ ನಡೆಸಿದರು.
ಪೊಲೀಸರೊಂದಿಗೆ ತಳ್ಳಾಟ:
ಎಸ್ಪಿ ನೇತೃತ್ವದಲ್ಲಿ ಶಿರೋಳಕ್ಕೆ ಕೊಂಡೊಯ್ದ ಜೋಡಿ ಕೊಲೆ ಶವಗಳನ್ನು ವಾಪಸ್ ತರುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶಿರೋಳಕ್ಕೆ ಶವಗಳನ್ನು ಕಳುಹಿಸಿದ್ದನ್ನು ವಿರೋಧಿಸಿ ಕೊಲೆಗೀಡಾದ ವಿಠ್ಠಲ, ಶ್ರೀಶೈಲ ತಳಗೇರಿ ಕುಟುಂಬದವರು ಹಾಗೂ ಡಿಎಸ್ ಎಸ್ ಸದಸ್ಯರು ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು. ಭವನದ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಬಲವಂತವಾಗಿ ಪ್ರತಿಭಟನಾಕಾರರನ್ನು ಹೊರದಬ್ಬಿದ್ದಾರೆ.