Advertisement

ಬಾಗಲಕೋಟೆ: ತೇರದಾಳ ಪೊಲೀಸ್‌ ಸಿಬ್ಬಂದಿಗಿಲ್ಲ ವಸತಿಗೃಹ

05:57 PM Jan 19, 2024 | Team Udayavani |

ಉದಯವಾಣಿ ಸಮಾಚಾರ
ತೇರದಾಳ: ಪಟ್ಟಣದಲ್ಲಿರುವ ಪೊಲೀಸ್‌ ಠಾಣೆ ಹಾಗೂ ರಬಕವಿ ಉಪ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಸಿಸಲು ಅಗತ್ಯಕ್ಕೆ ತಕ್ಕಂತೆ ವಸತಿ ಗೃಹಗಳು ಇಲ್ಲದ ಕಾರಣ ಬಾಡಿಗೆ ಮನೆ ಹುಡುಕಾಡುವಂತಾಗಿದೆ.

Advertisement

ತೇರದಾಳ ಪೊಲೀಸ್‌ ಠಾಣೆ ಹಾಗೂ ರಬಕವಿ ಉಪಠಾಣೆಯಲ್ಲಿ ಪಿಎಸ್‌ಐ, ಎಎಸ್‌ಐ ಸೇರಿದಂತೆ ಅಂದಾಜು 35 ಸಿಬ್ಬಂದಿ ಇದ್ದಾರೆ.
ಆದರೆ, ಸಿಬ್ಬಂದಿ ಇರುವಷ್ಟು ಪೊಲೀಸ್‌ ವಸತಿ ಗೃಹಗಳು ಇಲ್ಲ.

ನಾಡಕಾರ್ಯಾಲಯದ ಎದುರಿಗೆ ಕೇವಲ ಆರು ಮತ್ತು ಜಮಖಂಡಿ ರಸ್ತೆಗಿರುವ ಪೊಲೀಸ್‌ ಠಾಣೆಯ ಆವರಣದಲ್ಲಿ ಆರು ವಸತಿ ಗೃಹಗಳಿವೆ. ಅದರಂತೆ ಠಾಣಾ ವ್ಯಾಪ್ತಿಯ ಹೊರಠಾಣೆ ಹೊಂದಿದ ಸಮೀಪದ ರಬಕವಿಯಲ್ಲಿ ನಾಲ್ಕು ಪೊಲೀಸ್‌ ವಸತಿಗೃಹಗಳಿವೆ. ಪಟ್ಟಣದ ಠಾಣೆ ಆವರಣದಲ್ಲಿ ಪಿಎಸ್‌ಐ ಅವರಿಗೆ ಪ್ರತ್ಯೇಕ ವಸತಿ ಗೃಹ ಇದೆ. ಆದರೆ, ಇನ್ನೂಳಿದ 18 ಸಿಬ್ಬಂದಿಗೆ ವಸತಿಗೃಹ ಇಲ್ಲದೆ ಪಟ್ಟಣದ ಬೇರೆ ಕಡೆಗೆ ಬಾಡಿಗೆ ಮನೆಯಲ್ಲಿದ್ದಾರೆ. ಬಾಡಿಗೆ ಇದ್ದ ಕೆಲವು ಕಡೆಯಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದಿರುವುದು ಒಂದೆಡೆಯಾದರೆ ಹೆಚ್ಚು ದುಬಾರಿಯೂ ಆಗುತ್ತಿದೆ. ಇದರ ನಡುವೆ ನಾಡಕಾರ್ಯಾಲಯ ಎದುರಿಗೆ ಇರುವ ವಸತಿಗೃಹಗಳು ಕೇವಲ ಹೆಸರಿಗಷ್ಟೇ ವಸತಿಗೃಹಗಳು ಅನಿಸಿಕೊಂಡಿವೆ. ಅಲ್ಲಿ ಶೌಚಾಲಯಗಳು ಇಲ್ಲ. ಚರಂಡಿ ಇಲ್ಲ.
ಕೊಠಡಿಗಳು ಇಕ್ಕಟ್ಟಿನಿಂದ ಕೂಡಿವೆ.

ಪಟ್ಟಣದ ಎಸ್‌ಬಿಐದಿಂದ ದೇಸಾರ ಬಾವಿ ಕಡೆಗೆ ಹೋಗುವ ರಸ್ತೆಯಲ್ಲಿ ಮೊದಲು ಪೊಲೀಸ್‌ ಇಲಾಖೆಗೆ ಸಂಬಂಧಿಸಿದ
ವಸತಿಗೃಹಗಳಿದ್ದವು. ಆದರೆ, ಅವುಗಳು ಹಾಳು ಬಿದ್ದಿದ್ದರಿಂದ ಅವುಗಳನ್ನು ತೆರವುಗೊಳಿಸಲಾಗಿದೆ. ಇದರ ನಡುವೆ ಜಾಗದ ಅತಿಕ್ರಮಣವೂ ಸದ್ದಿಲ್ಲದೆ ನಡೆದಿತ್ತು. ಈ ಬಗ್ಗೆ ಎಚ್ಚೆತ್ತುಗೊಂಡ ಪೊಲೀಸರು ಅಲ್ಲಿನ ನಿರುಪಯುಕ್ತ ವಸ್ತುಗಳನ್ನು ಹೊರತೆಗೆದು ಹಾಕುವ ಕೆಲಸ ಮಾಡಿದ್ದಾರೆ. ಈಗಿನ ಪಿಎಸ್‌ಐ ಅಪ್ಪಣ್ಣ ಐಗಳಿ ಜಾಗದ ಮುಂದೆ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಜಾಗ ಎಂಬ ಫಲಕ ಅಳವಡಿಸುವ ಕೆಲಸ ಮಾಡಿದ್ದಾರೆ. ಆದರೆ, ಜಾಗ ಮಾತ್ರ ಹಾಳು ಬಿದ್ದಿದೆ.

ವಸತಿಗೃಹ ಕಟ್ಟಲು ಠಾಣೆಯ ಆವರಣದಲ್ಲಿಯೂ ಸಾಕಷ್ಟು ಸ್ಥಳಾವಕಾಶ ಇದೆ. ಅದರಂತೆ ದೇಸಾರ ಬಾವಿ ರಸ್ತೆಯಲ್ಲಿಯೂ
ಇದೆ. ಆದ್ದರಿಂದ ವಸತಿಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಮೂಲಕ ಪೊಲೀಸರಿಗೆ ಬಲ ತುಂಬುವ ಕಾರ್ಯ ಮಾಡಬೇಕಿದೆ.

Advertisement

ತೇರದಾಳ ಪೊಲೀಸ್‌ ಠಾಣೆಗೆ ಸಂಬಂಧಿ ಸಿದ ಜಾಗ ಅತಿಕ್ರಮಣ ಮಾಡಬಾರದು ಎಂಬ ಸದುದ್ದೇಶದಿಂದ ಠಾಣೆಯವರು ಅಲ್ಲಿ ಫಲಕ ಅಳವಡಿಸುವ ಕೆಲಸ ಮಾಡಿದ್ದಾರೆ. ಪೊಲೀಸರಿಗೆ ವಸತಿಗೃಹಗಳ ಕೊರತೆ ಇದೆ. ವಸತಿಗೃಹಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ವಾಸ್ತವ ತಿಳಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಬಳಿಕ ನಿರ್ದೇಶನ ಬಂದ ಕೂಡಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಶಾಂತವೀರ ಈ.
ಡಿಎಸ್‌ಪಿ ಜಮಖಂಡಿ

*ಬಿ.ಟಿ. ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next