Advertisement

ಬಾಗಲಕೋಟೆ: ಹೆಲ್ಮೆಟ್‌ ಜಾಗೃತಿಗೆ ಬೈಕ್‌ ಹತ್ತಿ ರಸ್ತೆಗಿಳಿದ ಎಸ್ಪಿ

05:36 PM Jan 06, 2024 | Team Udayavani |

ಬಾಗಲಕೋಟೆ: ರಸ್ತೆ ಅಪಘಾತ ತಡೆ ಹಾಗೂ ಅಪಘಾತದ ವೇಳೆ ಸಾವನ್ನಪ್ಪುವುದನ್ನು ತಪ್ಪಿಸಲು ಹೆಲ್ಮೆಟ್‌ ಕಡ್ಡಾಯಗೊಳಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಸ್ವತಃ ಹೆಲ್ಮೆಟ್‌ ಧರಿಸಿ ಬೈಕ್‌ ಹತ್ತಿ ಜಾಗೃತಿಗಿಳಿದರು.

Advertisement

ಶುಕ್ರವಾರ ನವನಗರದ ಜಿಲ್ಲಾ ಪೊಲೀಸ್‌ ಕಚೇರಿಯಿಂದ ಆರಂಭಗೊಂಡ ಜಾಗೃತಿ ಕಾರ್ಯದಲ್ಲಿ ಸ್ವತಃ ಎಸ್ಪಿ ಅಮರಾಥನ ರಡ್ಡಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮಹಾಂತೇಶ ಗದ್ದಿ, ಡಿವೈಎಸ್ಪಿ ಪಂಪನಗೌಡ ಹಾಗೂ ಇಡೀ ಪೊಲೀಸರ ತಂಡ, ನಗರದಲ್ಲಿ ಬೈಕ್‌ ರ್ಯಾಲಿ ನಡೆಸಿದರು.

ಈ ವೇಳೆ ಸಂಚಾರಿ ನಿಮಯ ಪಾಲಿಸಿ, ಹೆಲ್ಮೆಟ್‌ ಧರಿಸಿ ಬಂದ ಸಾರ್ವಜನಿಕರಿಗೆ ಸ್ವತಃ ಎಸ್ಪಿ ಹಾಗೂ ಇತರ ಅಧಿಕಾರಿಗಳು ಹೂವು ನೀಡಿ ಶ್ಲಾಘಿಸಿದರು. ಅಲ್ಲದೇ ಪ್ರತಿಯೊಬ್ಬ ಬೈಕ್‌ ಸವಾರರ, ಹೆಲ್ಮೆಟ್‌ ಧರಿಸಿಯೇ ಬೈಕ್‌ ಚಾಲನೆ ಮಾಡಬೇಕು. ಜತೆಗೆ ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯಗೊಸಲಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಸ್ಪಿ ಅಮರನಾಥ ಮಾತನಾಡಿ, ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿದರೆ ತಲೆಗೆ ಪೆಟ್ಟು ಬೀಳುವುದನ್ನು ತಪ್ಪಿಸಬಹುದು. ಜಿಲ್ಲೆಯಾದ್ಯಂತ ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸಿದ್ದರಿಂದ ಬೈಕ್‌ ಸವಾರ, ಹಿಂದೆ ಕುಳಿತವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ತಲೆಗೆ ಪೆಟ್ಟಾಗಿ ಜೀವವೇ ಕಳೆದುಕೊಂಡಿದ್ದಾರೆ. ಇದರಿಂದ ಅವರನ್ನೇ ಅವಲಂಬಿತವಾದ ಕುಟುಂಬ ಸಂಕಷ್ಟಕ್ಕೆ ಈಡಾಗುತ್ತದೆ. ಆದ್ದರಿಂದ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಬೇಕು.

ಇಂಹತ ಜಾಗೃತಿ ಕಾರ್ಯಕ್ರಮ ಮಾಡುವ ಜತೆಗೆ ಜನರಿಗೆ ಮನವೊಲಿಸುವ ಕೆಲಸ ನಾವು ಮಾಡದಿದ್ದರೂ ವೇತನ ಬರುತ್ತದೆ. ಆದರೆ, ಜನರ ಜೀವ ಮುಖ್ಯ. ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಲೇಬೇಕು ಎಂದು ತಿಳಿಸಿದರು.

Advertisement

ನಿತ್ಯ ಒಂದು ಸಾವಿರ ಕೇಸ್‌: ಜಿಲ್ಲೆಯಾದ್ಯಂತ ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸಿದರೆ, ನಿತ್ಯವೂ ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಬೇಕಾಗುತ್ತದೆ. ಜನರು ಇದಕ್ಕೆ ಅವಕಾಶ ಕೊಡಬಾರದು. ಬೈಕ್‌ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್‌ ಹಾಕದೇ ಸಂಚರಿಸಿದರೆ 500 ರೂ. ದಂಡ ವಿಧಿಸಲಾಗುವುದು. ಸಾಮಾನ್ಯ ಜನರು ನಿತ್ಯ ದುಡಿದ ಹಣವನ್ನು ದಂಡಕ್ಕೆ ಹಾಕುವ ಬದಲು, ಹೆಲ್ಮೆಟ್‌ ಹಾಕಿಯೇ ಸಂಚರಿಸಬೇಕು ಎಂದು ತಿಳವಳಿಕೆ ನೀಡಿದರು. ಯಾರೇ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೂ ಪ್ರಕರಣ ದಾಖಲಿಸುಲಾಗುತ್ತದೆ.

ಪೊಲೀಸರ ಕರ್ತರ್ವಕ್ಕೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು. ಇಲಾಖೆಯೊಂದಿಗೆ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್‌ ದೇಸಾಯಿ, ಡಿವೈಎಸ್‌ಪಿ ಪಂಪನಗೌಡ, ನಗರ ಠಾಣೆ ಸಿಪಿಐ ಗುರುನಾಥ ಚವಾಣ, ನವನಗರ ಠಾಣೆ ಸಿಪಿಐ ಬಿರಾದಾರ, ಗ್ರಾಮೀಣ ಠಾಣೆ ಸಿಪಿಐ ಆರ್‌.ಎಚ್‌. ಪಾಟೀಲ, ಸಂಚಾರಿ ಠಾಣೆಯ ಪಿಎಸ್‌ಐ ಪ್ರಕಾಶ ಬಣಕಾರ ಮುಂತಾದವರು ಪಾಲ್ಗೊಂಡಿದ್ದರು.

ಹೂವು ನೀಡಿ ಸ್ವಾಗತಿಸಿದ ಆಟೋ ಚಾಲಕರು

ಹೆಲ್ಮೆಟ್‌ ಜಾಗೃತಿಗಾಗಿ ಸ್ವತಃ ಹೆಲ್ಮೆಟ್‌ ಧರಿಸಿ, ಎನ್‌ ಫೀಲ್ಡ್‌ ಬೈಕ್‌ ಹತ್ತಿ ಬಾಗಲಕೋಟೆಯ ರಸ್ತೆಗಿಳಿದ ಎಸ್ಪಿ ಅಮರನಾಥ ರಡ್ಡಿ ಅವರನ್ನು ನಗರದ ವಿವಿಧೆಡೆ ಆಟೋ ಚಾಲಕರು, ಸಾರ್ವಜನಿಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ನವನಗರದ ಎಸ್ಪಿ ಕಚೇರಿಯಿಂದ ಹೊರಟ ಬೈಕ್‌ ರ್ಯಾಲಿ ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಲ್ಲಿಂದ ವಿದ್ಯಾಗಿರಿ,
ಬಾಗಲಕೋಟೆಯ ಅಂಬೇಡ್ಕರ್‌ ವೃತ್ತ, ಹಳೆಪೋಸ್ಟ್‌, ವಲ್ಲಭಬಾಯ್‌ ಚೌಕ್‌, ಎಂಜಿ ರಸ್ತೆಯಿಂದ ಬಸವೇಶ್ವರ ವೃತ್ತ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next