ಬಾಗಲಕೋಟೆ: ಜಿಲ್ಲೆಯಲ್ಲಿರುವ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಪೈಕಿ 674 ಅಂಗಡಿಗಳ ಮೂಲಕ ಶೇ. 50ರಷ್ಟು ಪಡಿತರ ಚೀಟಿದಾರರಿಗೆ ಆಹಾರಧಾನ್ಯ ತಲುಪಿಸಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಪೈಕಿ 674 ಅಂಗಡಿಗಳ ಮೂಲಕ 46,266 ಅಂತ್ಯೋದಯ ಮತ್ತು 366294 ಬಿಪಿಎಲ್ ಸೇರಿ ಒಟ್ಟು 4,12,570 ಪಡಿತರ ಚೀಟಿದಾರರ ಪೈಕಿ 1,91,122 ಪಡಿತರರಿಗೆ ಆಹಾರಧಾನ್ಯ ವಿತರಿಸಲಾಗಿದೆ. ಇಲ್ಲಿಯವರೆಗೆ ಅಂದಾಜು ಒಟ್ಟು 10 ಲಕ್ಷ ಜನರಿಗೆ ಆಹಾರ ಧಾನ್ಯ ತಲುಪಿಸುವ ಕಾರ್ಯ ಮಾಡಲಾಗಿದೆ.
ಬಾದಾಮಿ ತಾಲೂಕಿನಲ್ಲಿ ಒಟ್ಟು 70325 ಬಿಪಿಎಲ್ ಪಡಿತರ ಚೀಟಿಗಳಲ್ಲಿ 36,705, ಬಾಗಲಕೋಟೆ 56867ರಲ್ಲಿ 22638, ಬೀಳಗಿ 33254ರಲ್ಲಿ 15586, ಹುನಗುಂದ 68546 ಪೈಕಿ 33,727, ಜಮಖಂಡಿ 107017 ರಲ್ಲಿ 44,399 ಹಾಗೂ ಮುಧೋಳ ತಾಲೂಕಿನ ಒಟ್ಟು 76561ರಲ್ಲಿ 38067 ಪಡಿತರ ಚೀಟಿದಾರರಿಗೆ ಆಹಾರಧಾನ್ಯ ವಿತರಿಸಲಾಗಿದೆ.
ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಗಾಗದೇ ನ್ಯಾಯಬೆಲೆ ಅಂಗಡಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯಬೇಕು. ಅಲ್ಲದೇ ಪಡಿತರ ಪಡೆಯಲು ಬರುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಅಂಗಡಿ ಮುಂದೆ ಗುರುತಿಸಿರುವ ಚೌಕ್ ಬಾಕ್ಸ್‌ಗಳಲ್ಲಿ ನಿಂತು ಸದರಿ ಪ್ರಕಾರ ತಮ್ಮ ಹಕ್ಕಿನ ಪಡಿತರ ಧಾನ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.