Advertisement

ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ

02:43 PM Aug 29, 2018 | |

ಬಾಗಲಕೋಟೆ: ರಾಜ್ಯದಲ್ಲಿ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆ ಹಾಗೂ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ ಒಂದು ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಪಾಟೀಲ ಗೆಲುವು ನಿಶ್ಚಿತ. ಸ್ಥಳೀಯ ಸಂಸ್ಥೆಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಅದಕ್ಕೆ ಸುನೀಲಗೌಡ ಯೋಗ್ಯ ಅಭ್ಯರ್ಥಿಯಾಗಿದ್ದು, ಎರಡೂ ಜಿಲ್ಲೆಯ ಮತದಾರರು ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಲೋಕಸಭೆ ಚುನಾವಣೆಗೆ ಬುನಾದಿ: ಜಿಲ್ಲೆಯ 312 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ 309 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, 12 ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ನಾನು ರಾಜ್ಯಾದ್ಯಂತ ಪ್ರವಾಸ ನಡೆಸಿದ್ದು, ಎಲ್ಲೆಡೆ ಕಾಂಗ್ರೆಸ್‌ ಅಲೆ ಇದೆ ಎಂದರು.

ಮುಂಬರುವ ಲೋಕಸಭೆ ಚುನಾವಣೆಗೆ, ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಭದ್ರ ಬುನಾದಿಯಾಗಲಿದೆ. ಹೀಗಾಗಿ ನಮ್ಮ ಎಲ್ಲ ನಾಯಕರು, ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ನಾನು ಹಿಂದಿನ ಸರ್ಕಾರದಲ್ಲಿ ಪೌರಾಡಳಿತ ಸಚಿವನಾಗಿದ್ದ ವೇಳೆ ನಗರ ಸ್ಥಳೀಯ ಸಂಸ್ಥೆಗಳಿಗೆ 3 ಸಾವಿರ ಕೋಟಿ ಅನುದಾನ ನೀಡಿದ್ದೆ ಎಂದು ಹೇಳಿದರು.

10 ಸಾವಿರ ಪೌರ ಕಾರ್ಮಿಕರ ಕಾಯಂ: ನಗರೋತ್ಥಾನ-3 ಅಡಿಯಲ್ಲಿ ರಾಜ್ಯದ 270 ನಗರ ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ, ನಗರ ಪ್ರದೇಶ ವ್ಯಾಪ್ತಿಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ರಾಜ್ಯ ಸರ್ಕಾರದಿಂದ ತಲಾ 11 ಸಾವಿರ ಹಾಗೂ ಕೇಂದ್ರದಿಂದ 4 ಸಾವಿರ ಪ್ರೋತ್ಸಾಹಧನ ನೀಡಲಾಗಿದೆ. ನಾವು 11 ಸಾವಿರ ಕೊಟ್ಟರೆ, ಕೇಂದ್ರ ಕೇವಲ 4 ಸಾವಿರ ಕೊಟ್ಟಿದೆ. ಅಲ್ಲದೇ ರಾಜ್ಯದ 10 ಸಾವಿರ ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸಲು ನಿರ್ಧಾರ ತೆಗೆದುಕೊಂಡಿದ್ದೇವು. ಅವರಿಗೆ ನೀಡುತ್ತಿದ್ದ 6500 ವೇತನವನ್ನು 16 ಸಾವಿರಕ್ಕೆ ಹೆಚ್ಚಿಸಿದ್ದೇವೆ. ಪೌರ ಕಾರ್ಮಿಕರು ಮನೆ ಕಟ್ಟಿಕೊಳ್ಳಲು 8 ಲಕ್ಷ ಸಹಾಯಧನ ನೀಡಲಾಗಿದೆ. 1 ಸಾವಿರ ಕಾರ್ಮಿಕರಿಗೆ ವಿದೇಶ ಪ್ರವಾಸ ಕೈಗೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವಹಣೆ ಹಾಗೂ ಜನರ ಸೇವೆಗೆ ಹೊಸ ಹೊಸ ತಂತ್ರಜ್ಞಾನ ಪರಿಚಯಿಸಲಾಗಿದೆ. ಇದೆಲ್ಲ ಕೈಗೊಂಡಿದ್ದು ಕಾಂಗ್ರೆಸ್‌ ಸರ್ಕಾರದಲ್ಲಿ. ಹೀಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ಬಿಜೆಪಿ ಏನು ಮಾಡಿದೆ ಎಂದು ಹೇಳಿಕೊಳ್ಳಲಿ ಎಂದು ಸವಾಲು ಹಾಕಿದರು.

Advertisement

ಬಿಜೆಪಿಯ ಭರವಸೆ ಹುಸಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದಿರುವ ಕೇಂದ್ರ ಸರ್ಕಾರ, ಚುನಾವಣೆ ವೇಳೆ ನೀಡಿದ ಎಲ್ಲ ಭರವಸೆ ಹುಸಿಗೊಂಡಿವೆ. ಕಪ್ಪುಹಣ ತರುವುದರಿಂದ ಹಿಡಿದು, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂಬ ಭರವಸೆ ಇಂದಿಗೂ ಈಡೇರಿಲ್ಲ. ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ತೊಗರಿ ಒಂದು ಕ್ವಿಂಟಲ್‌ಗೆ 10 ಸಾವಿರ ಬೆಂಬಲ ಬೆಲೆ ಇತ್ತು. ಈಗ 6 ಸಾವಿರ ಮಾಡಿದ್ದಾರೆ. ಅದನ್ನೇ ದೊಡ್ಡ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ದೇಶದ ಘನತೆ- ಗೌರವಕ್ಕೆ ಧಕ್ಕೆ ಬರುವಂತೆ ಕಾರ್ಯನಿರ್ವಹಿಸುತ್ತಿದೆ. ಇಂತಹ ಸರ್ಕಾರ ಬಹಳ ದಿನ ಉಳಿಯಲ್ಲ. ದನಗಳ ಹೆಸರಿನಲ್ಲಿ, ಮಕ್ಕಳ ಕಳ್ಳರ ಹೆಸರಿನಲ್ಲಿ ಜನರನ್ನು ಕೊಲ್ಲುವ ಸಂಸ್ಕೃತಿ ದೇಶಕ್ಕೆ ದೊಡ್ಡ ಕಂಟಕವಾಗಿದೆ ಎಂದರು. ಮಾಜಿ ಸಚಿವರಾದ ಎಸ್‌.ಆರ್‌. ಪಾಟೀಲ, ಎಚ್‌.ವೈ. ಮೇಟಿ, ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ, ಜಿಲ್ಲಾ ಉಸ್ತುವಾರಿ ಪಾರಸಮಲ್‌ ಜೈನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಸೌದಾಗರ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ, ಎಸ್‌.ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಜಿ.ಪಂ. ಸದಸ್ಯೆ ಹನಮವ್ವ ಕರಿಹೋಳಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮುತ್ತಪ್ಪ ಹುಗ್ಗಿ, ಕೈಮಗ್ಗ ನಿಮಗದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರಗಿ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ದಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next