Advertisement

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

04:57 PM Apr 25, 2024 | Team Udayavani |

■ ಉದಯವಾಣಿ ಸಮಾಚಾರ
ಬಾಗಲಕೋಟೆ: ಬಿಜೆಪಿ ಅಂದ್ರ ಬಸ್‌ ಇದ್ದಂಗ್‌. ಬಸ್‌ನ್ಯಾಗ ಹೆಂಗ್‌ ಜನಾ ಹತ್ತತಾರ್‌-ಇಳಿತಾರೋ ಹಂಗೆ ನಮ್ಮ ಪಕ್ಷಕ್ಕೂ ಹಲವರು ಬರ್ತಾರ್‌, ಹೊಗ್ತಾರ್‌. ಆದ್ರ ಪಕ್ಷಕ್ಕೆ ಯಾವುದೇ ಬಾಧಕ ಆಗಲ್ಲ ಎಂದು ತೇರದಾಳ ಶಾಸಕ, ಬಾಗಲಕೋಟೆ ಲೋಕಸಭೆ ಚುನಾವಣೆ ಸಂಚಾಲಕ ಸಿದ್ದು ಸವದಿ ಹೇಳಿದರು.

Advertisement

ನವನಗರದ ಯೂನಿಟ್‌-2ರಲ್ಲಿ ಏ.28ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ತಯಾರಿಗೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೊಡ್ಡ ವ್ಯಕ್ತಿಗಳು ಬರ್ತಾರ್‌: ಬಾಗಲಕೋಟೆಯ ಬಿಜೆಪಿ ಉಚ್ಚಾಟಿತರು, ಕಾಂಗ್ರೆಸ್‌ ಸೇರ್ಪಡೆ ಕುರಿತ ಪ್ರಶ್ನೆಗೆ ಈ ರೀತಿ ಪ್ರಕ್ರಿಯಿಸಿದ ಸವದಿ, ಬರೋರು ಬರ್ತಾರೆ, ಹೋಗೋರು ಹೋಗ್ತಾರೆ. ಯಾರೇ ಹೋದ್ರೂ ಅವರಗಿಂತ ದೊಡ್ಡ ವ್ಯಕ್ತಿಗಳು ನಮ್ಮ ಪಕ್ಷಕ್ಕೆ ಬರುತ್ತಾರೆ. ಇದಕ್ಕೆ ಪಕ್ಷ ತಲೆಕೆಡಿಸಿಕೊಳ್ಳಲ್ಲ. ನಾವು ಈ ಬಾರಿ ವಿಜಯಪುರ-ಬಾಗಲಕೋಟೆ ಎರಡೂ ಕ್ಷೇತ್ರ ಗೆಲ್ಲುತ್ತೇವೆ. ಬಾಗಲಕೋಟೆ ಕ್ಷೇತ್ರವನ್ನು 2 ಲಕ್ಷ ಮತಗಳ ಅಂತರದಿಂದ ವಿಜಯ ಸಾಧಿಸಿ ದಾಖಲೆ ಬರೆಯುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಪಕ್ಷದ ತತ್ವ-ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಬಂದೇ ಬರುತ್ತಾರೆ. ನಂಬಿಕೆ ಇಲ್ಲದವರು ಹೋಗುತ್ತಾರೆ ಎಂದ ಅವರು, ಏ.28ರಂದು ಪ್ರಧಾನಿ ಮೋದಿ ಮಧ್ಯಾಹ್ನ 3 ಗಂಟೆಗೆ ನವನಗರದ ಯೂನಿಟ್‌
-2ರ ಬೃಹತ್‌ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.ಅವರ ಆಗಮನ, ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಎರಡೂ ಕ್ಷೇತ್ರಗಳ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವರ ನಿರೀಕ್ಷೆ ಇದೆ ಎಂದರು.

ಕಾಂಗ್ರೆಸ್ಸಿಗರು ಪ್ರತ್ಯಕ್ಷ ನೋಡಲು ಬನ್ನಿ: ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಮೋದಿ ಕಲ್ಯಾಣ ಕಾರ್ಯಗಳಿಗೆ ವಿಶ್ವವೇ ಮೆಚ್ಚಿದೆ. ಆದರೂ ಕಾಂಗ್ರೆಸ್ಸಿಗರು ಅವರನ್ನು ಟೀಕೆ ಮಾಡುತ್ತಾರೆ. ದೇಶಕ್ಕಾಗಿ ಸರ್ವವೂ ತ್ಯಾಗ ಮಾಡಿದ ಮೋದಿ ಅವರನ್ನು ಕಣ್ಣಾರೆ ನೋಡಲು ಜಿಲ್ಲೆಯ ಕಾಂಗ್ರೆಸ್ಸಿಗರೂ ಈ ಸಮಾವೇಶಕ್ಕೆ ಬರಬೇಕು. ಒಮ್ಮೆ ಪ್ರತ್ಯಕ್ಷವಾಗಿ ನೋಡಿದರೆ ವಿಶ್ವವೇ ಭಾರತದತ್ತ ಏಕೆ ನೋಡುತ್ತಿದೆ ಎಂಬುದು ಕಾಂಗ್ರೆಸ್ಸಿಗರಿಗೂ ಗೊತ್ತಾಗುತ್ತದೆ.

Advertisement

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಪಡೆದಿದ್ದೇವೆ. ಈ ಬಾರಿ ಆ ದಾಖಲೆಯೂ ಮುರಿದು ಹೊಸ ದಾಖಲೆ ಸೃಷ್ಟಿಯಾಗಲಿದೆ ಎಂದರು.

ಮಹಿಳಾ ಫಲಾನುಭವಿಗಳಿಂದ ಸನ್ಮಾನ: ಪಕ್ಷದ ಯುವ ಮುಖಂಡ ಜಗದೀಶ ಹಿರೇಮನಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದ ಅವಳಿ ಜಿಲ್ಲೆಯ ಮಹಿಳಾ ಫಲಾನುಭವಿಗಳಿಂದ ಪ್ರಧಾನಿ ಮೋದಿ ಸನ್ಮಾನ ನಡೆಯಲಿದೆ. ಸಮಾವೇಶ ಯಶಸ್ಸಿಗೆ 28 ವಿಭಾಗ ರಚಿಸಿದ್ದು, ಸಮಾವೇಶಕ್ಕೆ ಬರುವ ಜನರಿಗೆ ನೀರು, ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ. ಪಕ್ಷದಿಂದ ಪ್ರಬಂಧಕರ ನೇಮಕ ಕೂಡ ಮಾಡಲಾಗಿದೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದರು.

ಈ ವೇಳೆ ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಡಾ|ವೀರಣ್ಣ ಚರಂತಿಮಠ, ಬಿಜೆಪಿ ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮುಖಂಡರಾದ ಅಶೋಕ ಲಿಂಬಾವಳಿ, ಉಪಾಧ್ಯೆ, ಸತ್ಯನಾರಾಯಣ ಹೇಮಾದ್ರಿ, ರಾಜು ಗಾಣಗೇರ ಸೇರಿದಂತೆ ಇತರರಿದ್ದರು.

ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏನೇನೋ ಮಾತಾಡುತ್ತಿದ್ದಾರೆ. ಸಂಘದ
ಪ್ರಚಾರಕರಾದ ಅಶೋಕ ಸಿಂಘಾಲ್‌ ಅವರಿಗೆ ಕುಟುಂಬವೇ ಇಲ್ಲ. ಇನ್ನು ಮಗಳು ಎಲ್ಲಿಂದ ಬರ್ತಾರೆ. ಆದರೆ, ಅವರ ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಅಸ್ತಿತ್ವಕ್ಕಾಗಿ ಗಣ್ಯರ ಹೆಸರನ್ನು ಈ ರೀತಿ ಬಳಸುವುದು ಸರಿಯಲ್ಲ.
*ಜಗದೀಶ ಹಿರೇಮನಿ, ರಾಜ್ಯ ಸಂಯೋಜಕ, ಪ್ರಧಾನಿ ಸಮಾವೇಶ ಉಸ್ತುವಾರಿ ಘಟಕ

Advertisement

Udayavani is now on Telegram. Click here to join our channel and stay updated with the latest news.

Next