Advertisement

ಕಂಕಣವಾಡಿ ರೈತರು ಐಡಿಯಾ ಮಾಡ್ಯಾರ!

02:11 PM Oct 28, 2022 | Team Udayavani |

ಬಾಗಲಕೋಟೆ: ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇದು ನಿಜ. ಇಲ್ಲಿ ನಿತ್ಯವೂ 20 ಅಡಿಗೂ ಆಳವಾದ ನದಿ ನೀರಿನ ಮೇಲೆ 10ರಿಂದ 15 ಟನ್‌ ಭಾರ ಹೊತ್ತ ಟ್ಯಾಕ್ಟರ್‌ ಸರಳವಾಗಿ ನದಿ ದಾಟುತ್ತದೆ.

Advertisement

ಹೌದು. ಇದನ್ನು ನಂಬಲೇಬೇಕು. ಇದು ಯಾವುದೋ ವಿಜ್ಞಾನಿಯ ಪ್ರಯೋಗವಲ್ಲ. ಹೊಸ ತಂತ್ರ ಜ್ಞಾನವೂ ಬಳಸಿಲ್ಲ. ಅದಕ್ಕಾಗಿ ಲಕ್ಷಾಂತರ ರೂ. ಖರ್ಚೂ ಮಾಡಿಲ್ಲ. ಇಂತಹವೊಂದು ಹೊಸ ಪ್ರಯತ್ನವನ್ನು ದುಬಾರಿ ಖರ್ಚಿಲ್ಲದೇ ರೈತರೇ ಮಾಡಿದ್ದು ಮತ್ತೂಂದು ವಿಶೇಷ. ಇದನ್ನು ನೋಡಬೇಕೆಂದರೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಕ್ಕೆ ಹೋಗಬೇಕು. ಅಲ್ಲಿಗೆ ಹೋಗಬೇಕಾದರೂ ಬೋಟ್‌ ಮೂಲಕವೇ ತೆರಳಬೇಕು. ಏಕೆಂದರೆ ಇದು, ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶ. ಕೃಷ್ಣಾ ನದಿಗೆ ಹೊಂದಿಕೊಂಡಿರುವ ಈ ಗ್ರಾಮದ ಸುತ್ತಲೂ ಆಲಮಟ್ಟಿ ಡ್ಯಾಂ ಮತ್ತು ಚಿಕ್ಕಪಡಸಲಗಿ ಬ್ಯಾರೇಜ್‌ನ ಹಿನ್ನೀರು ಆವರಿಸಿಕೊಳ್ಳುತ್ತದೆ.

ಏನಿದು ಹೊಸ ಐಡಿಯಾ: ಜಮಖಂಡಿ ತಾಲೂಕಿನ ಕಂಕಣವಾಡಿ ನಡುಗಡ್ಡೆ ಗ್ರಾಮದ ರೈತರೇ ಮಾಡಿದ ಹೊಸ ಐಡಿಯಾ ಎಂದರೆ ಬೋಟ್‌ನಲ್ಲಿ ಟ್ರ್ಯಾಕ್ಟರ್‌ ಸಾಗಿಸುವ ಸಾಹಸ. ಎರಡು ದೊಡ್ಡ ಬೋಟ್‌ಗಳ ಮಧ್ಯೆ ವಿಶೇಷವಾಗಿ ತಯಾರಿಸಿದ ಕಬ್ಬಿಣದ ಆ್ಯಂಗ್ಲರ್‌ ಅಳವಡಿಸಿದ್ದಾರೆ. ಅದರ ಮೇಲೆ ಟ್ರ್ಯಾಕ್ಟರ್‌ ನಿಲ್ಲಿಸಿ ಎರಡೂ ಬೋಟ್‌ ಮೂಲಕ ಕಬ್ಬು ತುಂಬಿದ ಟ್ರ್ಯಾಕ್ಟರ್‌ ಅನ್ನು ಕೃಷ್ಣಾ ನದಿಯಲ್ಲಿ ಸಾಗಿಸಿ, ಅಲ್ಲಿಂದ ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಿದ್ದಾರೆ. ಇದರಿಂದ ಕಬ್ಬು ತಡವಾಗಿ ಕಾರ್ಖಾನೆಗೆ ಕಳುಹಿಸುವುದು ನಿಂತಿದೆ, ಸಮಯ-ಹಣ, ದೂರ ಕ್ರಮಿಸುವುದೂ ತಪ್ಪಿದೆ.

ಈ ಸಾಹಸಮಯ ಹೊಸ ಐಡಿಯಾ ಸಾಕಾರಕ್ಕೆ ರೈತರೇ ಹಣ ಕೂಡಿಸಿದ್ದಾರೆ. ಕಂಕಣವಾಡಿ ಗ್ರಾಮದಲ್ಲಿ ವರ್ಷವೂ ಸುಮಾರು 700ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆ ಕಬ್ಬನ್ನು ಪ್ರತಿವರ್ಷ ಕಾರ್ಖಾನೆಗೆ ಸಾಗಿಸಲು ಶ್ರಮ ವಹಿಸುವ ಬದಲು ಇಲ್ಲಿಯ ಸುಮಾರು 200ಕ್ಕೂ ಹೆಚ್ಚು ರೈತರು ಇದಕ್ಕೆ ತಗಲುವ ಹಣ ಹಾಕಿದ್ದಾರೆ. ಈ ಮೊದಲು ಒಂದು ಟನ್‌ ಕಬ್ಬನ್ನು ನದಿಯ ಆ ಬದಿಯಿಂದ ಈ ಬದಿಗೆ ಸಾಗಿಸಿ, ಅಲ್ಲಿಂದ ಕಾರ್ಖಾನೆಗೆ ತಲುಪಿಸಲು 900 ರೂ. ಖರ್ಚಾಗುತ್ತಿತ್ತು. ಅದನ್ನು ತಪ್ಪಿಸಲು ಮಾಡಿದ ಹೊಸ ಐಡಿಯಾಕ್ಕೆ ಸುಮಾರು 3.50 ಲಕ್ಷ ಖರ್ಚಾಗಿದೆ. ಈಗ ಒಂದು ಟನ್‌ ಕಬ್ಬನ್ನು ನದಿ ದಾಟಿಸಿ, ಅಲ್ಲಿಂದ ಕಾರ್ಖಾನೆಗೆ ಪೂರೈಸಲು ಕೇವಲ ತಲಾ 200 ಖರ್ಚಾಗುತ್ತಿದೆ. ಮುಖ್ಯವಾಗಿ ಸಮಯ-ಹಣ, ಶ್ರಮ ಎಲ್ಲವೂ ಉಳಿದಿದೆ ಎನ್ನುತ್ತಾರೆ ಕಂಕಣವಾಡಿಯ ರೈತ ಮಲ್ಲಿಕಾರ್ಜುನ ನರಗಟ್ಟಿ.

ಕಜಕಿಸ್ತಾನದಲ್ಲಿ ಇಂತಹವೊಂದು ಪ್ರಯೋಗ ಮಾಡಿದ್ದನ್ನು ಇಲ್ಲಿಯ ಕೆಲವು ರೈತರು ಯುಟ್ಯೂಬ್‌ ನಲ್ಲಿ ನೋಡಿದ್ದರು. ನಾವೂ ಏಕೆ ಅದನ್ನು ಮಾಡಬಾರದು ಎಂದುಕೊಂಡು ಪ್ರಯೋಗ ಮಾಡಿ ಯಶಸ್ವಿಯೂ ಆದರು. ಈಗ ಎರಡು ಬೋಟ್‌ಗಳ ಮಧ್ಯೆ ಒಂದು ಟ್ರ್ಯಾಕ್ಟರ್‌ ಸಾಗಿಸಿದರೆ ಬರೋಬ್ಬರಿ 11 ಟನ್‌ ಕಬ್ಬನ್ನು ಆ ಬದಿಯಿಂದ ಈ ಬದಿಗೆ ಸರಳವಾಗಿ ಸಾಗಿಸಬಹುದು.

Advertisement

ಊರಿಗೇ ಬೋಟೇ ಆಸರೆ

ಈ ಗ್ರಾಮದ ರೈತರು, ನೌಕರರು ಯಾರೇ ಜಮಖಂಡಿ ಅಥವಾ ನಗರಕ್ಕೆ ಬರಬೇಕಾದರೆ ಬೋಟೇ ಆಸರೆ. ಇಲ್ಲಿಯ ಜನ ಸಂತಿ-ಪ್ಯಾಟಿಗೆಂದು ನಗರಕ್ಕೆ ಬೋಟ್‌ ಮೂಲಕವೇ ಬರಬೇಕು, ಬೋಟ್‌ ಮೂಲಕವೇ ಹೋಗಬೇಕು. ಆದರೆ ರೈತರು ಬೆಳೆದ ಯಾವುದೇ ಆಹಾರಧಾನ್ಯ ಅಥವಾ ಇನ್ನಿತರೆ ವಸ್ತುಗಳನ್ನು ಇಲ್ಲಿಯ ಜನ ಬೋಟ್‌ ಮೂಲಕವೇ ತೆಗೆದುಕೊಂಡು ಹೋಗುತ್ತಾರೆ. ಕಬ್ಬಿನ ಸೀಜನ್‌ ವೇಳೆ, ಕಬ್ಬು ತುಂಬಿದ ಟ್ಯಾಕ್ಟರ್‌ ತೆಗೆದುಕೊಂಡು ಹೋಗಲು ರೈತರು ಹಲವು ರೀತಿಯ ಕಷ್ಟ ಅನುಭವಿಸುತ್ತಿದ್ದರು. ಸಕ್ಕರೆ ಕಾರ್ಖಾನೆಗೆ ಸುತ್ತಿ ಬಳಸಿ, ಹೋಗಲು ಸಮಯ, ಹಣ, ದೂರ ದಾರಿ ಕ್ರಮಿಸಬೇಕಿತ್ತು. ಅದೇ ಬೋಟ್‌ ಮೂಲಕ ಬಂದರೆ ಕೇವಲ ಒಂದು ಕಿ.ಮೀ. ಶ್ರಮಿಸಿದರೆ ಸಾಕು ಆ ಬದಿಯಿಂದ ಈ ಬದಿಗೆ ಬಂದು ತಲುಪುತ್ತಾರೆ.

ಸುಮಾರು 700 ಎಕರೆ ಕಬ್ಬು ಬೆಳೆಯುತ್ತೇವೆ. ಪ್ರತಿವರ್ಷ ಕಾರ್ಖಾನೆಗೆ ಕಬ್ಬು ಸಾಗಿಸಲು ಬಹಳ ಕಷ್ಟ ಆಗುತ್ತಿತ್ತು. ಈಗ ಹೊಸ ಪ್ರಯೋಗದ ಮೂಲಕ ಟ್ರ್ಯಾಕ್ಟರ್‌ ಅನ್ನು ಸರಳವಾಗಿ ಸಾಗಿಸಬಹುದು. ಇದರಿಂದ ನಮಗೆ ಹಣ, ಶ್ರಮ, ಸುತ್ತಿ ಬಳಸಿ ಕಾರ್ಖಾನೆಗೆ ಕಬ್ಬು ಸಾಗಿಸುವುದು ಎಲ್ಲವೂ ತಪ್ಪಿದೆ. ●ಮಲ್ಲಿಕಾರ್ಜುನ ನರಗಟ್ಟಿ, ಕಂಕಣವಾಡಿಯ ರೈತ.

Advertisement

Udayavani is now on Telegram. Click here to join our channel and stay updated with the latest news.

Next