ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ) ಎಲ್ಲ ಕಡೆ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಅತ್ತ ಸವದತ್ತಿಯ ನವಿಲುತಿರ್ಥ ಜಲಾಶಯ ಕೂಡ ಭರ್ತಿಯಾಗುತ್ತಿದೆ. ನದಿ ಪಾತ್ರದ ಪ್ರದೇಶದಲ್ಲಿ ಮಳೆಯ ಕೊರತೆಯುಂಟಾಗಿ ಮಲಪ್ರಭಾ ನದಿ ಮಾತ್ರ ಸಂಪೂರ್ಣ ಬತ್ತಿ ಹೋಗಿದೆ. ನದಿಯಲ್ಲಿ ನೀರು ಹರಿಯುತ್ತಿಲ್ಲ. ಬೊಗಸೆ ನೀರು ಸಹ ಸಿಗುತ್ತಿಲ್ಲ ಇದರಿಂದ ರೈತರು ಕಂಗಾಲಾಗಿದ್ದಾರೆ.
ನವಿಲುತೀರ್ಥ ಜಲಾಶಯದ ಮೇಲ್ಬಾಗದಲ್ಲಿ ದಿನದ 24 ಗಂಟೆ ಬಿಟ್ಟು-ಬಿಡದೆ ಮಳೆ ಸುರಿಯುತ್ತಿದೆ. ಜಲಾಶಯದ ಒಳ ಹರಿವು ಸಹ ಅಧಿಕವಾಗಿದ್ದು, ಪ್ರತಿದಿನ ಎರಡು ಅಡಿ ನೀರು ಸಂಗ್ರಹವಾಗುತ್ತಿದೆ. ಸದ್ಯ ಜಲಾಶಯ ಭರ್ತಿಯಾಗುವ ಸಾದ್ಯತೆ ಹೆಚ್ಚಿದೆ.
ಸಕಾಲಕ್ಕೆ ಮಳೆ ಬರದ ಹಿನ್ನೆಲೆ ಬರಿದಾಗಿರುವ ಮಲಪ್ರಭಾ ನದಿ ಪಾತ್ರದ ಗ್ರಾಮಗಳ ಜನ- ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದ ಎಲ್ಲ ಜಲಾಶಯ ಭರ್ತಿಯಾಗಿ ನದಿಗಳು ತುಂಬಿ ಹರಿಯುತ್ತಿವೆ. ಮಲಪ್ರಭಾ ನದಿಯ ಸುತ್ತ ಸೇರಿದಂತೆ ಎಲ್ಲೆಡೆ ಮಳೆ ಸುರಿಯುತ್ತಿದೆ. ವಿಪರ್ಯಾಸವೆಂದರೆ ಮಲಪ್ರಭಾ ನದಿಯಲ್ಲಿ ಮಾತ್ರ ಸ್ವಲ್ಪವೂ ನೀರು ಹರಿಯುತ್ತಿಲ್ಲ. ನದಿಯ ಒಡಲು ಸಂಪೂರ್ಣ ಬರಿದಾಗಿದ್ದು ಮಳೆಗಾಲದಲ್ಲೂ ಬರದ ಛಾಯೆ ಮೂಡಿದೆ.
ಮಲಪ್ರಭಾ ಎಡ ಮತ್ತು ಬಲದಂಡೆ ವ್ಯಾಪ್ತಿಯ ರೈತರಿಗೆ ನದಿಯ ನೀರೇ ಆಸರೆಯಾಗಿದೆ. ಸರಿಯಾದ ಮಳೆ ಇಲ್ಲದೆ ಈ ಬಾರಿ 70% ರಷ್ಟು ರೈತರು ತಮ್ಮ ಭೂಮಿ ಬಿತ್ತನೆ ಮಾಡೇ ಇಲ್ಲ. ಬಿತ್ತನೆ ಮಾಡಿದ ಅಲ್ಪ-ಸ್ವಲ್ಪ ರೈತರ ಬೆಳೆಗಳು ಕೂಡಾ ಭಾರೀ ಮಳೆಗೆ ಹಾಳಾಗುತ್ತಿವೆ. ನಮ್ಮ ಜಿಲ್ಲೆಯನ್ನೂ ಬರಗಾಲ ಎಂದು ಘೋಷಣೆ ಮಾಡಿ ಎಂದು ಪತ್ರಿಕೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ ಮಲಪ್ರಭಾ ತಟದ ರೈತರು ಮನವಿ ಮಾಡಿಕೊಂಡಿದ್ದಾರೆ.