ಕಲಾದಗಿ: ಶಾರದಾಳ ಗ್ರಾಮದ ಮುತ್ತಪ್ಪ ಈರಪ್ಪ ಹಲಗಲಿ ಎರಡು ಟ್ರೇಲರ್‌ಗೆ ಕೇವಲ ಆರು ಗಂಟೆಗಳಲ್ಲಿ 22 ಟನ್ ಕಬ್ಬು
ಹೇರಿ ಸಾಧನೆ ಮಾಡಿದ್ದಾನೆ. ಮಧ್ಯಾಹ್ನ 12 ಗಂಟೆಗೆ ಲೋಡ್ ಮಾಡಲು ಆರಂಭಿಸಿ ಸಂಜೆ 6 ಗಂಟೆ ವೇಳೆಗೆ ಎರಡೂ ಟ್ರೇಲರ್
ಭರ್ತಿ ಮಾಡಿದ್ದಾನೆ.
ಸಾಮಾನ್ಯವಾಗಿ ಒಂದು ಟ್ರೇಲರ್ ಕಬ್ಬನ್ನು 10 ರಿಂದ 15 ಜನ ಕೂಡಿ ಹೇರುತ್ತಾರೆ. ಮೇಲ್ಗಡೆ ಹೇರಲು ಇಬ್ಬರು ಅಥವಾ ಮೂವರು ಇದ್ದರೆ, ಕೆಳಗಡೆಯಿಂದ ಹೊತ್ತು ಕೊಡಲು 10 ರಿಂದ 13 ಜನರಿರುತ್ತಾರೆ.
ಇಲ್ಲಿ ಮಾತ್ರ ಮೇಲ್ಗಡೆ ಹೇರಿಕೊಳ್ಳಲು ಒಬ್ಬ,ಕೆಳಗಡೆಯಿಂದ ಹೊತ್ತು ಕೊಟ್ಟಿದ್ದು ಒಬ್ಬನೇ ಒಬ್ಬ. ಒಂದು ಟ್ರೇಲರ್ ತುಂಬಲು 600 ಕಬ್ಬಿನ ಪೆಂಡಿಗಳು ಬೇಕಾಗುತ್ತವೆ. ಎರಡು ಟ್ರೇಲರ್ ಗಳಿಗೆ 1200 ಕಬ್ಬಿನ ಪೆಂಡಿಗಳನ್ನು ಹೊತ್ತು ಹೇರಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.ಶಾರದಾಳ ಗ್ರಾಮದ ಮಹಾದೇವಿ ಬಾಲಪ್ಪ ಶಿರಬೂರ ಇವರ ಕಬ್ಬಿನ ತೋಟದಲ್ಲಿ ಮುತ್ತಪ್ಪ ಈ ಸಾಹಸ ಮಾಡಿದ್ದಾನೆ.
ಕಬ್ಬಿನ ಲೋಡ್ ಮಾಡುವುದು ಕಷ್ಟ ಆದರೂ ಶ್ರಮ ವಹಿಸಿದರೆ ಸಾಧ್ಯವಾಗುತ್ತದೆ. ದಿನನಿತ್ಯ ಲೋಡ್ ಹೇರಿದ ದೈಹಿಕ ಶ್ರಮ ಅಭ್ಯಾಸವಿತ್ತು. ಆದರೆ ಒಬ್ಬನೇ ಹೊತ್ತು ಕೊಡುವುದು ಕಷ್ಟವಾದರೂ ಲೋಡ್ ಮಾಡಿದ್ದೇನೆ.
ಮುತ್ತಪ್ಪ ಹಲಗಲಿ,
ಕೂಲಿ ಕಾರ್ಮಿಕ ಯುವಕ, ಶಾರದಾಳ
ಒಬ್ಬರೇ ಕಬ್ಬು ಲೋಡ್ ಮಾಡುವುದಾಗಿ ಕೇಳಿದಾಗ, ಮುತ್ತಪ್ಪ ಹಲಗಲಿ ತಾನು ಮಾಡುವುದಾಗಿ ಹೇಳಿದ್ದು, ಅದರಂತೆ
ಲೋಡ್ ಮಾಡಿದ್ದಾನೆ.
ಲಕ್ಷ್ಮಣ ಶಿರಬೂರ
*ಚಂದ್ರಶೇಖರ ಹಡಪದ