Advertisement

ಬಾಗಲಕೋಟೆ-ಕುಡಚಿ ರೈಲು ಮಾರ್ಗ…ಶತಕದ ಬೇಡಿಕೆ; ದಶಕವಾದರೂ ಮುಗಿದಿಲ್ಲ!

05:40 PM Oct 08, 2022 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದಿಂದ ಮುಂಬೈ ಭಾಗಕ್ಕೆ ಸಂಪರ್ಕ ಸನಿಹಗೊಳಿಸುವ ಹಾಗೂ ಜಿಲ್ಲೆಯ ವಾಣಿಜ್ಯೋದ್ಯಮಕ್ಕೆ ಪೂರಕವಾಗಲಿರುವ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣದ ಬೇಡಿಕೆ ಬರೋಬ್ಬರಿ ಒಂದು ಶತಕದ ಹಿಂದಿನದ್ದು. ಅಳೆದು-ತೂಗಿ ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾದರೂ ಅದು ಕುಂಟುತ್ತಲೇ ಸಾಗಿದೆ.

Advertisement

ಹೌದು, ಸ್ವಾತಂತ್ರ್ಯಪೂರ್ವದಲ್ಲೇ ಎರಡು ಬಾರಿ ಸರ್ವೆ ಆಗಿದ್ದ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣದ ಬೇಡಿಕೆ ಆರಂಭಗೊಂಡಿದ್ದು 1912ರಿಂದ. ಅಲ್ಲಿಂದ 2010ರವರೆಗೂ ಹಲವು ಹೋರಾಟ, ಮನವಿ ಹಾಗೂ ಜನಪ್ರತಿನಿಧಿಗಳ ಒತ್ತಾಯದ ಬಳಿಕ, ಮಮತಾ ಬ್ಯಾನರ್ಜಿ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ವೇಳೆ, ಘೋಷಣೆ ಮಾಡಲಾಗಿತ್ತು. ಒಟ್ಟು 141 ಕಿ.ಮೀ ಉದ್ದ, 816 ಕೋಟಿ ಮೊತ್ತದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದಕ್ಕಾಗಿ ಐದು ವರ್ಷಗಳ ಸಮಯ ಕೂಡ ನಿಗದಿ ಮಾಡಲಾಗಿತ್ತು.

ಆದರೆ, ಮಾರ್ಗ ನಿರ್ಮಾಣದ ಹೊಣೆ ಕೇಂದ್ರ ಹಾಗೂ ಭೂ ಸ್ವಾಧೀನದ ಹೊಣೆ ರಾಜ್ಯ ಸರ್ಕಾರ ಪಡೆದ ಬಳಿಕ, ಎರಡೂ ಸರ್ಕಾರಗಳ ಸಮನ್ವಯತೆ ಕೊರತೆ, ಅಗತ್ಯ ಅನುದಾನ ದೊರೆಯದ ಹಿನ್ನೆಲೆಯಲ್ಲಿ ಕಳೆದ 2012ರಿಂದ ಆರಂಭಗೊಂಡ ಕಾಮಗಾರಿ ಈ ವರೆಗೂ ಪೂರ್ಣಗೊಂಡಿಲ್ಲ. ಕಳೆದ ಎರಡು ದಶಕಗಳಲ್ಲಿ ಜಿಲ್ಲೆಗೆ ಘೋಷಣೆಯಾದ ಹೊಸ ರೈಲ್ವೆ ಮಾರ್ಗದ ಯೋಜನೆ ಎಂದರೆ ಬಾಗಲಕೋಟೆ-ಕುಡಚಿ ಇದೊಂದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಬಾಗಲಕೋಟೆ-ಕುಡಚಿ ಮಾರ್ಗದಲ್ಲಿ ರೈಲು ಓಡಾಟ ಮಾಡಬೇಕಿತ್ತು. ಆದರೆ, ಬಾಗಲಕೋಟೆಯಿಂದ ಖಜ್ಜಿಡೋಣಿ ವರೆಗೆ ಒಟ್ಟು 33 ಕಿ.ಮೀ ಮಾತ್ರ ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾರೆ ಸುಮಾರು 700 ಕೋಟಿಯಷ್ಟು ಖರ್ಚು ಮಾಡಿವೆ. ಕಾಮಗಾರಿ ವಿಳಂಬವಾದಂತೆ ಯೋಜನಾ ಮೊತ್ತವೂ ದುಪ್ಪಟ್ಟು ಪಾಲು ಹೆಚ್ಚಳವಾಗುತ್ತಿದೆ.

ಈ ಮಾರ್ಗದಡಿ ಬಾಗಲಕೋಟೆ ಉಪ ವಿಭಾಗದಡಿ 33 ಕಿ.ಮೀ ಮಾರ್ಗಕ್ಕೆ 580 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಜಮಖಂಡಿ ಉಪ ವಿಭಾಗದಡಿ 1800 ಎಕರೆ ಬರುತ್ತಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಭೂ ಸ್ವಾಧೀನಗೊಂಡಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. ಅಲ್ಲದೇ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಡಿ 380 ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದೆ.

Advertisement

ಮಾರ್ಗದಿಂದ ಲಾಭವೇನು : ಬಾಗಲಕೋಟೆಯಿಂದ ಆರಂಭಗೊಂಡು, ಕುಡಚಿಗೆ ಪೂರ್ಣಗೊಳ್ಳಬೇಕಿರುವ ಈ ಮಾರ್ಗ ನಿರ್ಮಾಣದಿಂದ ಲೋಕಾಪುರ, ಮುಧೋಳ, ಜಮಖಂಡಿ, ಕಲಾದಗಿ ಭಾಗದಲ್ಲಿ ಹೇರಳವಾಗಿ ಬೆಳೆಯುವ ದ್ರಾಕ್ಷಿ, ಚಿಕ್ಕು ಸಹಿತ ವಿವಿಧ ತೋಟಗಾರಿಕೆ ಬೆಳೆಗಳನ್ನು ಮುಂಬೈ ಮಾರುಕಟ್ಟೆಗೆ ಕಳುಹಿಸಲು ಸಹಕಾರಿ ಆಗಲಿದೆ.

ಅಲ್ಲದೇ ಮುಖ್ಯವಾಗಿ ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲೇ ಅತಿಹೆಚ್ಚು ಸಕ್ಕರೆ ಕಾರ್ಖಾನೆ, ಸಿಮೆಂಟ್‌ ಕಾರ್ಖಾನೆ ಹಾಗೂ ಸುಣ್ಣ ತಯಾರಿಕೆ ಘಟಕಗಳಿವೆ. ಈ ರೈಲ್ವೆ ಮಾರ್ಗ ನಿರ್ಮಾಣದಿಂದ ಇಲ್ಲಿನ ಸಕ್ಕರೆ, ಸಿಮೆಂಟ್‌, ಸುಣ್ಣ ಸಾಗಾಣಿಕೆಗೂ ಪ್ರಮುಖ ಸಹಾಯವಾಗಲಿದೆ. ಇದರಿಂದ ಜಿಲ್ಲೆಯ ವಾಣಿಜ್ಯೋದ್ಯಮದ ಸಂಪರ್ಕ ನೇರವಾಗಿ ಮುಂಬೈ ಮಾರುಕಟ್ಟೆಗೆ ದೊರೆಯಲಿದೆ ಎಂಬುದು ವಾಣಿಜ್ಯೋದ್ಯಮಿಗಳ ಆಶಯ.

ಹೊಸ ಮಾರ್ಗಕ್ಕಾಗಿ ಸರ್ವೇ: ಸಧ್ಯ ನಿರ್ಮಾಣ ಹಂತದಲ್ಲಿರುವ ಕುಡಚಿ-ಬಾಗಲಕೋಟೆ ಮಾರ್ಗವನ್ನು ರಾಯಚೂರು ವರೆಗೆ ವಿಸ್ತರಿಸುವುದು, ಆಲಮಟ್ಟಿ-ಯಾದಗಿರಿಯ 140 ಕಿ.ಮೀ, ಆಲಮಟ್ಟಿ-ಕೊಪ್ಪಳದ 160 ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೇ ಮಾಡಲಾಗಿದೆ. ಅಲ್ಲದೇ ಗಂಗಾವತಿ- ಕುಷ್ಟಗಿ-ಇಳಕಲ್ಲ-ಹುನಗುಂದ-ಬಾಗಲ ಕೋಟೆ ಮಾರ್ಗದಲ್ಲಿ ಹೊಸ ಮಾರ್ಗ ನಿರ್ಮಾಣದ ಸರ್ವೆ ನಡೆಸಲು ಬೇಡಿಕೆ ಇಡಲಾಗಿದೆ.

ಇನ್ನು ರೈಲ್ವೆ ಯೋಜನೆಗಳಲ್ಲಿ ಕಳೆದ 2013ರಲ್ಲಿ ಬಾಗಲಕೋಟೆ ರೈಲ್ವೆ ನಿಲ್ದಾಣವನ್ನು ಆದರ್ಶ ರೈಲು ನಿಲ್ದಾಣವನ್ನಾಗಿ ನಿರ್ಮಿಸುವ ಘೋಷಣೆಯಾಗಿತ್ತು. ಇದು 2022ರಲ್ಲಿ ಕಾಮಗಾರಿ ಆರಂಭಗೊಂಡಿದೆ. ಸೊಲ್ಲಾಪುರ-ಗದಗ ಮಧ್ಯೆ ಇದ್ದ ಮೀಟರ್‌ ಗೇಜ್‌ ಮಾರ್ಗವನ್ನು ಬ್ರಾಡ್‌ಗೇಜ್‌ ಅನ್ನಾಗಿ ಮೇಲ್ದರ್ಜೆಗೇರಿಸಿದ್ದು, ಎರಡು ದಶಕಗಳಲ್ಲಿ ಆದ ಬದಲಾವಣೆ. ಇದೇ ಮಾರ್ಗದಲ್ಲಿ ರೈಲ್ವೆ ಬಡ್ಲಿಂಗ್‌ ಮತ್ತು ವಿದ್ಯುತ್ತೀಕರಣ ಆಗಬೇಕೆಂಬ ಬೇಡಿಕೆ ಕೂಡ ಈಡೇರುತ್ತಿದ್ದು, ಆ ಕಾಮಗಾರಿಯೂ
ನಡೆಯುತ್ತಿದೆ.

ಒಟ್ಟಾರೆ, ಜಿಲ್ಲೆಯಲ್ಲಿ ಇರುವ ರೈಲ್ವೆ ಮಾರ್ಗಗಳು, ಸ್ವಾತಂತ್ರ್ಯ ಪೂರ್ವವೇ ನಿರ್ಮಾಣಗೊಂಡಿವೆ. ಹೊಸದಾಗ ಘೋಷಣೆಯಾಗಿ, ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಲ್ಲಿ ಬಾಗಲಕೋಟೆ-ಕುಡಚಿ ಮಾರ್ಗ ಮಾತ್ರವಿದೆ. ಅದೂ ನಿರೀಕ್ಷಿತ ಮಟ್ಟದಲ್ಲಿ ವೇಗವಾಗಿ ಕಾಮಗಾರಿ ಮುಗಿಯುತ್ತಿಲ್ಲ ಎಂಬ ಬೇಸರ ಜಿಲ್ಲೆಯ ಜನರಲ್ಲಿದೆ.

ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರದ ಬಳಿ ಹಣದ ಕೊರತೆ ಇಲ್ಲ. ಭೂಸ್ವಾಧೀನ ಕಾರ್ಯ ವಿಳಂಭವಾದರಿದ್ದ ಅದು ಪೂರ್ಣಗೊಂಡಿಲ್ಲ. ಹಿಂದೆ 2014ಕ್ಕೂ ಮುಂಚೆ ಎರಡು ಬಾರಿ ಲೋಕಾಪುರ ಬಳಿ ಮಾರ್ಗ ನಿರ್ಮಾಣದ ನಕ್ಷೆ ಬದಲಾಯಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಕಾರ್ಯ ನಡೆಯುತ್ತಿದ್ದು, ಭೂಮಿ ನೀಡಿದ, ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ.
ಪಿ.ಸಿ. ಗದ್ದಿಗೌಡರ, ಸಂಸದ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next