Advertisement

ಬರ ನೀಗಿಸಲು ಸಜ್ಜಾದ ಹೆರಕಲ್‌ ಬ್ಯಾರೇಜ್‌

04:18 PM Oct 06, 2018 | |

ಬಾಗಲಕೋಟೆ: ಇಬ್ಬರು ಮುಖ್ಯಮಂತ್ರಿಗಳಿಂದ ಭೂಮಿ ಪೂಜೆಗೊಂಡಿದ್ದ ಹೆರಕಲ್‌ ಸೇತುವೆ ಸಹಿತ ಬ್ಯಾರೇಜ್‌ ಕೊನೆಗೂ ಬರ ನೀಗಿಸಲು ಸಿದ್ಧಗೊಂಡಿದೆ. ಕೃಷ್ಣಾ ಭಾಗ್ಯ ಜಲ ನಿಗಮದಿಂದ ಬೀಳಗಿ ತಾಲೂಕಿನ ಹೆರಕಲ್‌ (ಹೆರಕಲ್‌ ಮೂಕಿ) ಬಳಿ 75.57 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣಗೊಂಡಿದ್ದು, ನೀರು ಸಂಗ್ರಹಕ್ಕೆ ಕೆಬಿಜೆಎನ್‌ಎಲ್‌ ಸಜ್ಜಾಗಿದೆ.

Advertisement

ಇದು ಜಿಲ್ಲೆಯ ಅತಿದೊಡ್ಡ ಬ್ಯಾರೇಜ್‌ ಎಂಬ ಖ್ಯಾತಿಯೂ ಪಡೆದಿದೆ. ಜತೆಗೆ ಬೀಳಗಿ, ಬಾಗಲಕೋಟೆ ಮತ್ತು ಪಕ್ಕದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕುಗಳಿಗೆ ನೀರು-ನೀರಾವರಿಗೆ ಅನುಕೂಲವಾಗಲಿದ್ದು, ಬ್ಯಾರೇಜ್‌ ಸಹಿತ ಸೇತುವೆಯಿಂದ ಮೂರು ತಾಲೂಕಿನ ಸಂಪರ್ಕ ಸನಿಹವಾಗಲಿದೆ. ಜಿಲ್ಲೆಯ ಅಷ್ಟೂ ಬ್ಯಾರೇಜ್‌ಗಳ ಪೈಕಿ ಅತಿ ಎತ್ತರದ ಬ್ಯಾರೇಜ್‌ ಇದಾಗಿದ್ದು, ಒಟ್ಟು 18 ಗೇಟ್‌ಗಳಿವೆ. ಸದ್ಯ 1.80 ಟಿಎಂಸಿ ಅಡಿ ನೀರು ಸಂಗ್ರಹ ಗುರಿ ಹಾಕಿಕೊಂಡಿದ್ದು, 528 ಮೀಟರ್‌ವರೆಗೂ ಬ್ಯಾರೇಜ್‌ನ ಎತ್ತರವಿದೆ. ಆದರೆ, ಸದ್ಯ 515 ಮೀಟರ್‌ವರೆಗೆ ಮಾತ್ರ ನೀರು ನಿಲ್ಲಿಸಲು ಕೆಬಿಜೆಎನ್‌ಎಲ್‌ ನಿಗದಿತ ಯೋಜನೆ ಹಾಕಿಕೊಂಡಿದೆ. ಮುಂದೆ ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ ಗೆ ಎತ್ತರಿಸಿದಾಗಲೂ ನೀರು ಸಂಗ್ರಹದ ಗುರಿ ಇಟ್ಟುಕೊಂಡೇ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಲಾಗಿದೆ.

ಸಂಗಮ-ಆಲಮಟ್ಟಿ ಸನಿಹ: ಆಲಮಟ್ಟಿ ಜಲಾಶಯದ ಹಿನ್ನೀರು ನಿಲ್ಲುವ ಹಾಗೂ ಘಟಪ್ರಭಾ ನದಿಯಲ್ಲಿ ನಿರ್ಮಿಸಿರುವ ಈ ಸೇತುವೆ ಸಹಿತ ಬ್ಯಾರೇಜ್‌ನಿಂದ ಬೀಳಗಿ ತಾಲೂಕಿನಿಂದ ಆಲಮಟ್ಟಿ, ಕೂಡಲಸಂಗಮ ಸುತ್ತಿ ಬಳಸಿ ತೆರಳುವುದಕ್ಕೆ ಬ್ರೇಕ್‌ ಬಿದ್ದಿದೆ. ಈ ಮಾರ್ಗದ ಮೂಲಕ ತೆರಳಿದರೆ ಸುಮಾರು 18ರಿಂದ 20 ಕಿ.ಮೀ ದೂರ ಸನಿಹವಾಗಲಿದೆ. ಅಲ್ಲದೇ ಬ್ಯಾರೇಜ್‌ನ ಬಲದಂಡೆ ವ್ಯಾಪ್ತಿಯ 11 ಹಳ್ಳಿಗಳು, ಎಡದಂಡೆ ವ್ಯಾಪ್ತಿಯ 17 ಹಳ್ಳಿಗಳ ಜನರು ನಿತ್ಯ ಸಂಚರಿಸುತ್ತಿದ್ದ ದೂರದ ಪ್ರಯಾಣವೂ ಕಡಿಮೆಯಾಗಲಿದೆ.

ಹೆರಕಲ್‌ ಸೇತುವೆ ಸಹಿತ ಬ್ಯಾರೇಜ್‌ನಿಂದ ಬಾಗಲಕೋಟೆ, ಬೀಳಗಿ ತಾಲೂಕಿನ ಬಹು ಹಳ್ಳಿಗಳ ಕುಡಿಯುವ ನೀರಿನ ಬರ ನೀಗಲಿದೆ. ಬೇಸಿಗೆಯಲ್ಲಿ ಸಂಪೂರ್ಣ ಬರಿದಾಗುತ್ತಿದ್ದ ಘಟಪ್ರಭಾ ನದಿಯಲ್ಲೂ ನೀರು ನಿಲ್ಲಲಿದೆ. ಈ ನೀರು ಬನ್ನಿದಿನ್ನಿ ಬ್ಯಾರೇಜ್‌, ಕಲಾದಗಿ ಬ್ಯಾರೇಜ್‌ವರೆಗೂ ವಿಸ್ತಾರವಾಗಿ ನಿಲ್ಲಲಿದೆ. ಜತೆಗೆ ಬೇಸಿಗೆಯಲ್ಲಿ ಕುಡಿಯುವ ನೀರು, ನೀರಾವರಿ ಒದಗಿಸಲಿದೆ. ಮುಖ್ಯವಾಗಿ ಬಾಗಲಕೋಟೆ ನಗರ ಹಾಗೂ 62 ಹಳ್ಳಿಗಳಿ, ಬೀಳಗಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗಳಿಗೆ ನಿರಂತರ ನೀರು, ಈ ಬ್ಯಾರೇಜ್‌ನಿಂದ ದೊರೆಯಲಿದೆ.

ಪ್ರತಿವರ್ಷ ಬನ್ನಿದಿನ್ನಿ ಬ್ಯಾರೇಜ್‌ ಖಾಲಿ ಆದಾಗ ಬೆಳಗಾವಿಯ ಹಿಡಕಲ್‌ ಡ್ಯಾಂನಿಂದ ಘಟಪ್ರಭಾ ನದಿ ಗುಂಟ ನೀರು ಬಿಡಿಸಲು ದೊಡ್ಡ ಸಾಹಸ ಮಾಡಬೇಕಿತ್ತು. ಹಿಡಕಲ್‌ ಡ್ಯಾಂನಿಂದ ನೀರು ಬಿಟ್ಟರೂ ಅದು 23 ಬ್ಯಾರೇಜ್‌ ದಾಟಿ ಬನ್ನಿದಿನ್ನಿ ಬ್ಯಾರೇಜ್‌ ಗೆ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿರಲಿಲ್ಲ. ಹೀಗಾಗಿ ಬಾಗಲಕೋಟೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿತ್ತು. ಈಗ ಹೆರಕಲ್‌ ಬ್ಯಾರೇಜ್‌ ನಿರ್ಮಾಣಗೊಂಡಿದ್ದರಿಂದ ಬಾಗಲಕೋಟೆಗೆ ನೀರು ಕೊಡುವ ಬನ್ನಿದಿನ್ನಿ ಬ್ಯಾರೇಜ್‌, ಹೆರಕಲ್‌ ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಲಿದೆ. ಹೀಗಾಗಿ ಬೇಸಿಗೆಯಲ್ಲಿ ಬಾಗಲಕೋಟೆ, 62 ಹಳ್ಳಿ, ಬೀಳಗಿ ಪಟ್ಟಣಕ್ಕೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.

Advertisement

ಪ್ರವಾಸೋದ್ಯಮಕ್ಕೂ ಅನುಕೂಲ
ಬೀಳಗಿ ತಾಲೂಕಿನ ಹೆರಕಲ್‌ ಮೂಕಿ, ಘಟಪ್ರಭಾ ನದಿಯ ಪ್ರಮುಖ ಸ್ಥಳ. ಇಲ್ಲಿ ನದಿಯ ಮಟ್ಟ 503 ಮೀಟರ್‌ ಇದೆ. 528 ಮೀಟರ್‌ ಎತ್ತರದವರೆಗೂ ಬ್ಯಾರೇಜ್‌ ನಿರ್ಮಿಸಲಾಗಿದೆ. ಆದರೆ, 515 ಮೀಟರ್‌ ಹಿನ್ನೀರು ಇದ್ದಾಗ ನೀರು ಸಂಗ್ರಹ ಆರಂಭಗೊಳ್ಳಲಿದೆ. 1.80 ಟಿಎಂಸಿ ಅಡಿ ನೀರು ಸಂಗ್ರಹ, 178 ಮೀಟರ್‌ ಬ್ಯಾರೇಜ್‌ನ ಉದ್ದ, 260 ಮೀಟರ್‌ ಸೇತುವೆ ಉದ್ದವಿದೆ. ಜಿಲ್ಲೆಯ ಅಷ್ಟೂ ಬ್ಯಾರೇಜ್‌ ಗಳಲ್ಲಿ ಇದು ವಿಶೇಷ ಸ್ಥಳ ಹಾಗೂ ಸುಂದರ ನಿರ್ಮಾಣದಿಂದ ಗಮನ ಸೆಳೆದಿದೆ. ಉಡುಪಿಯ ಜಿ.ಶಂಕರ ಅವರ ಗುತ್ತಿಗೆ ಕಂಪನಿ ಈ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಿದೆ. ಈ ಸೇತುವೆ ಸಹಿತ ಬ್ಯಾರೇಜ್‌ ಸ್ಥಳದಲ್ಲಿ ಪ್ರವಾಸೋದ್ಯಮಕ್ಕೂ ಅವಕಾಶವಿದೆ. ಯಾನಾ ಮಾದರಿಯ ಬೆಟ್ಟಗಳು ಇಲ್ಲಿದ್ದು, ಕಣ್ಣು ಹಾಯಿಸಿದಷ್ಟೂ ವಿಶಾಲವಾಗಿ ಹಿನ್ನೀರು ಆವರಿಸಿಕೊಂಡಿದೆ. ಜತೆಗೆ ನದಿಯ ಎರಡು ಬದಿಯ ದೂರ ಕೇವಲ 260 ಮೀಟರ್‌ ಇದ್ದು, ಇಲ್ಲಿ ತೂಗು ಸೇತುವೆ, ಮಕ್ಕಳ ಪಾರ್ಕ್‌, ಬೋಟಿಂಗ್‌ ವ್ಯವಸ್ಥೆ ಮಾಡಿದರೆ ಇದೊಂದು ಅದ್ಭುತ ಪ್ರವಾಸಿ ತಾಣವಾಗಲಿದೆ. ಈ ಕುರಿತು ಕೆಬಿಜೆಎನ್‌ ಎಲ್‌ನಲ್ಲಿ ಹಲವು ಬಾರಿ ಪ್ರಸ್ತಾಪ ಕೂಡ ಆಗಿದೆ. ಅದಕ್ಕೆ ಅನುದಾನ, ರಾಜಕೀಯ ನಾಯಕರ ಇಚ್ಛಾಶಕ್ತಿ ಬೇಕಿದೆ.

ಆಲಮಟ್ಟಿ ಜಲಾಶಯದಲ್ಲಿ ಸದ್ಯ 518.60 ಮೀಟರ್‌ಗೆ ನೀರಿದೆ. ಅದು 515 ಮೀಟರ್‌ಗೆ ಇಳಿದಾಗ ನಾವು ಹೆರಕಲ್‌ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಲು ಆರಂಭಿಸುತ್ತೇವೆ. ನವೆಂಬರ್‌ ಮೊದಲ ವಾರದಿಂದ ನೀರು ಸಂಗ್ರಹ ಮಾಡುತ್ತೇವೆ. ಕಲಾದಗಿ ಬ್ಯಾರೇಜ್‌ವರೆಗೂ ನೀರು ನಿಲ್ಲಲಿದೆ. ಬೇಸಿಗೆಯಲ್ಲಿ ಬಾಗಲಕೋಟೆ ನಗರವೂ ಸೇರಿದಂತೆ ಮೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.
. ಜಯಣ್ಣ,
  ಕೆಬಿಜೆಎನ್‌ಎಲ್‌ ಸೆಕ್ಷನ್‌ ಅಧಿಕಾರಿ, ಆಲಮಟ್ಟಿ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next