ಬಾಗಲಕೋಟೆ: ಜಿಲ್ಲೆಯ ಹಣ್ಣು ಬೆಳೆಗಾರರ ಬದುಕನ್ನು ಕೊರೊನಾ ಮಹಾಮಾರಿ, ಹಣ್ಣುಗಾಯಿ ಮಾಡಿದೆ. ಹೊಲದಲ್ಲಿ ಬೆಳೆದ ಅಪಾರ ಪ್ರಮಾಣದ ಹಣ್ಣು ಬೆಳೆಗಳನ್ನು ಮಾರಲೂ ಆಗಲಿಲ್ಲ. ಇತ್ತ ತಿಪ್ಪೆಗೆ ಸುರಿದು ಗೊಬ್ಬರವೂ ಮಾಡಲಾಗಿಲ್ಲ. ಹೀಗಾಗಿ ಕೈಯಾರೆ ಬೆಳೆದ ಬೆಳೆ ಕಂಡು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.
ಹೌದು, ರಾಜ್ಯದಲ್ಲಿ ತೋಟಗಾರಿಕೆ ಬೆಳೆಗೆ ಜಿಲ್ಲೆ ಹೆಸರುವಾಸಿ. ಇದಕ್ಕೆ ಪ್ರೋತ್ಸಾಹ ನೀಡಲೆಂದೇ ಇಲ್ಲಿ ತೋಟಗಾರಿಕೆ ವಿವಿ ಕೂಡ ಸ್ಥಾಪಿಸಲಾಗಿದೆ. ಇಲ್ಲಿನ ಚಿಕ್ಕು, ದಾಳಿಂಬೆ, ದ್ರಾಕ್ಷಿ ದೇಶ- ವಿದೇಶಕ್ಕೂ ರಫ್ತು ಆಗುತ್ತಿದ್ದವು. ಆದರೆ, ಕೊರೊನಾ ಎಂಬ ವೈರಸ್, ಹಣ್ಣು ಬೆಳೆಗಾರರ ಬದುಕು ಬರ್ಬರವಾಗಿಸಿದೆ.
ಕೈಯಾರೆ ಕಿತ್ತಿ ಎಸೆದರು: ಭೂಮಿ ಹದ ಮಾಡಿ, ಬೀಜ-ಗೊಬ್ಬರ ಹಾಕಿ ಕೈಯಾರೆ ಆರೈಕೆ ಮಾಡಿ ಉತ್ತಮ ಫಸಲು ಬೆಳೆದಿದ್ದ ರೈತರು, ಕಣ್ಣೀರು ಹಾಕುತ್ತ ತಮ್ಮ ಕೈಯಾರೆ ಕಿತ್ತಿ ಹೊಲದ ಬದುವಿಗೆ ಎಸೆದಿದ್ದಾರೆ. ಜಿಲ್ಲೆಯ ಬಹುತೇಕ ರೈತರ ಹೊಲದ ಬದುಗಳೀಗ ಹಣ್ಣು, ತರಕಾರಿಗಳಿಂದ ತುಂಬಿಕೊಂಡಿವೆ. ಕೆಲವು ಹಣ್ಣುಗಳನ್ನು ತಿಪ್ಪೆಗೆ ಹಾಕಿದರೂ ಅದು ಗೊಬ್ಬರವಾಗಲ್ಲ. ಹೀಗಾಗಿ ಬದುವಿಗೆ ಎಸೆದು, ಕಂಡವರಿಗೆಲ್ಲ ನೋಡಿ ನಮ್ಮ ಬೆಳಿ ಹೆಂಗ್ ಆಗ್ಯಾದ್ ಎಂದು ಕಣ್ಣು ತೇವ ಮಾಡಿಕೊಳ್ಳುತ್ತಿದ್ದಾರೆ.
ವಿವಿ-ಇಲಾಖೆಗಳೂ ನೆರವು ನೀಡಲಾಗುತ್ತಿಲ್ಲ: ಜಿಲ್ಲೆಯಲ್ಲಿ ತೋಟಗಾರಿಕೆ ವಿವಿ, ತೋಟಗಾರಿಕೆ ಇಲಾಖೆ, ಹಾಪ್‌ಕಾಮ್ಸ್, ಎಪಿಎಂಸಿ ಎಲ್ಲವೂ ಇವೆ. ಆದರೂ, ರೈತರ ನೆರವಿಗೆ ಬಾರದಂತಹ ಅನಿವಾರ್ಯ ಪರಿಸ್ಥಿತಿಯಲ್ಲಿವೆ. ಪ್ರತಿವರ್ಷ ಜಿಲ್ಲೆಯಿಂದ ಪಪ್ಪಾಯಿ, ಚಿಕ್ಕು, ದಾಳಿಂಬೆ, ದ್ರಾಕ್ಷಿ, ಬಾಳೆ ಹೀಗೆ ಹಲವು ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಮುಂಬೈ, ಹೈದ್ರಾಬಾದ್, ಮಂಗಳೂರು, ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದಕ್ಕಾಗಿಯೇ ಹಲವು ವ್ಯಾಪಾರಸ್ಥರೂ ರೈತರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಿತ್ತು. ಆದರೆ, ಈ ಬಾರಿ ವ್ಯಾಪಾರಸ್ಥರೂ ಮನೆಬಿಟ್ಟು ಹೊರ ಬಂದಿಲ್ಲ. ಹೀಗಾಗಿ ರೈತರು, ಕಷ್ಟಪಟ್ಟು ಬೆಳೆದ ಬೆಳೆಗಳಲ್ಲ ಮಣ್ಣು ಪಾಲಾಗಿವೆ. ಕಣ್ಣೀರು ಹಾಕಿದ ವೃದ್ಧ ರೈತ: ಸುಮಾರು 2 ಲಕ್ಷ ಸಾಲ ಮಾಡಿ, ಕಲ್ಲಂಗಡಿ ಬೆಳೆದಿದ್ದ ತಾಲೂಕಿನ ಕದಾಂಪುರದ ರೈತ ಶಿವಲಿಂಗಪ್ಪ ಗಂಜಿಹಾಳ, ಹೊಲದಲ್ಲಿ ಕೆಟ್ಟು ಬಿದ್ದ ಕಲ್ಲಂಗಡಿ ನೋಡಿ ಕಣ್ಣೀರು ಹಾಕಿದ ಪ್ರಸಂಗ ಹೃದಯ ಕಲುಕುವಂತಿತು.
ಇದೊಂದು ಅನಿವಾರ್ಯ ಪರಿಸ್ಥಿತಿ. ಸಾಧ್ಯವಾದಷ್ಟು ರೈತರ ನೆರವಿಗೆ ಬರುವ ಕೆಲಸ ಸರ್ಕಾರ ಮಾಡುತ್ತಿದೆ. ಹಾಪ್‌ಕಾಮ್ಸ್ ಮೂಲಕ ರೈತರ ಹಣ್ಣು-ತರಕಾರಿ ಖರೀದಿಸಿ, ಜನರಿಗೆ ತಲುಪಿಸುವ ಕಾರ್ಯ ನಡೆದಿದೆ. ಉಳಿದ ಬೆಳೆಯನ್ನು ಗುತ್ತಿಗೆದಾರರಿಂದ ಖರೀದಿ ಮಾಡಲು ಚಿಂತನೆ ನಡೆದಿದೆ.
ಗೋವಿಂದ ಕಾರಜೋಳ, ಡಿಸಿಎಂ
ಕೃಷಿಯೇ ನಮ್ಮ ಜೀವನ. ಬೆಳೆ ಬೆಳೆದು, ಅದನ್ನು ಮಾರಾಟ ಮಾಡಿ ಬದುಕುವ ನಮಗೆ ಈ ಬಾರಿ ದೊಡ್ಡ ಹಾನಿಯಾಗಿದೆ. 2 ಎಕರೆ 30 ಗುಂಟೆ ಕಲ್ಲಂಗಡಿ ಕೆಟ್ಟು ಹೋಗಿದೆ. ಕಿತ್ತು ಬದಿಗೆ ಹಾಕಿದ್ದೇವೆ. ನಮ್ಮಂತಹ ಬಡ ರೈತರ ನೆರವಿಗೆ ಸರ್ಕಾರ ಬರಬೇಕು. ಇಲ್ಲದಿದ್ದರೆ ರೈತರು ಬದುಕು ಬಹಳ ತೊಂದರೆಗೆ ಸಿಲುಕುತ್ತದೆ.
ಶಿವಲಿಂಗಪ್ಪ ಗಂಜಿಹಾಳ,
ಕದಾಂಪುರದ ರೈತ
ಜಿಲ್ಲೆಯಲ್ಲಿ 56 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆಯ ಕ್ಷೇತ್ರವಿದೆ. ಸಧ್ಯ ಕಟಾವಿಗೆ ಬಂದ ವಿವಿಧ ಬೆಳೆಗಳನ್ನು ಖರೀದಿ ಮಾಡಲು ರೈತರಿಗೆ ಖರೀದಿದಾರರ ಸಂಪರ್ಕ ಸಂಖ್ಯೆ ನೀಡಲಾಗಿದೆ. ಆದರೂ, ಖರೀದಿದಾರರೂ ಮುಂದೆ ಬರುತ್ತಿಲ್ಲ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯ ಕ್ಷೇತ್ರ, ಹಾನಿಯಾದ ವಿವರ ಜಿಲ್ಲಾ ಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳಿಸುತ್ತೇವೆ.
ಪ್ರಭುರಾಜ್ ಹಿರೇಮಠ,
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
ಶ್ರೀಶೈಲ ಕೆ. ಬಿರಾದಾರ