ಬಾಗಲಕೋಟೆ: ಹೆಣ್ಣು ಭ್ರೂಣ ಹತ್ಯೆ ಮಹಾ ಪಾಪವಾಗಿದ್ದು, ಅದನ್ನು ತಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು ಹಾಗೂ ಕ್ಷ-ಕಿರಣ ವೈದ್ಯರುಗಳಿಗೆ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವೈದ್ಯರು ಕಾನೂನು ಬಾಹಿರ ಕೆಲಸ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ಜಿಲ್ಲೆಗೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದ್ದು, ವ್ಯವಸ್ಥೆ ಬದಲಾವಣೆ ಎಲ್ಲರೂ ಕೈಜೋಡಿಸಬೇಕು ಎಂದರು. ನಾಗರಿಕ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಕಾರ್ಯಗಳು ನಡೆಯುತ್ತಿರುವುದು ವಿಷಾದನೀಯ.
ಇಂತಹ ಕಾರ್ಯಗಳಲ್ಲಿ ತೊಡಗಿದವರಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆಯಾಗಬೇಕು. ಆಗ ಮಾತ್ರ ತಡೆಯಲು ಸಾಧ್ಯವಾಗುತ್ತದೆ. ಎಲ್ಲ ಜೀವಕ್ಕೂ ಹಕ್ಕು ಇದೆ. ವೈದ್ಯರು ತಮ್ಮ ವೈದ್ಯಕೀಯ ಧರ್ಮದ ಜತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡಬೇಕು. ವೈದ್ಯರಿಗೆ ಗೌರವ ಸ್ಥಾನವಿದ್ದು, ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ಮಾಡುವಂತೆ ಸಲಹೆ ನೀಡಿದರು.
ಸಮಾಜದ ಪ್ರತಿಯೊಬ್ಬರಿಗೂ ಹೆಣ್ಣಿನ ಬಗ್ಗೆ ಸಂವೇದನಾಶೀಲತೆ ಬರಬೇಕು. ಸ್ಕಾÂನಿಂಗ್ ಸೌಲಭ್ಯ ಹೊಂದಿರುವ ಪ್ರತಿಯೊಂದು ಕೇಂದ್ರದ ನೋಂದಣಿ ಕಡ್ಡಾಯವಾಗಿದ್ದು, ಯಾರೆ ವ್ಯಕ್ತಿ ವೈಜ್ಞಾನಿಕ ತಂತ್ರಗಳನ್ನು ಭ್ರೂಣ ಲಿಂಗ ಪತ್ತೆಗಾಗಿ ಬಳಸಿದರೆ, ಬಳಸಲು ಕಾರಣವಾದರೆ, ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮೇಲೆ ಒತ್ತಡ ಹೇರಿದರೆ ಅದು ಅಪರಾಧ. ಈ ಬಗ್ಗೆ ಅರಿವು ಮೂಡಿಸಿ. ವೈದ್ಯರು ತಮ್ಮ ವೃತ್ತಿ ಧರ್ಮ ಮರೆಯದೇ ನೈತಿಕ ಮೌಲ್ಯ ಉಳಿಸಿಕೊಳ್ಳಬೇಕು. ಭ್ರೂಣ ಹತ್ಯೆಯಿಂದ ಉಂಟಾಗಬಹುದಾದ ಸಮಸ್ಯೆ ಹಾಗೂ ಸಾಮಾಜಿಕ ಅಸಮತೋಲನದ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಮಾತ್ರ ಪಿಡುಗು ನಿವಾರಣೆ ಮಾಡಲು ಸಾಧ್ಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ರಾಜಕುಮಾರ ಯರಗಲ್ಲ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳು ಹೆಚ್ಚಿಗೆ ಕಂಡು ಬರುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ವೈದ್ಯರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಭ್ರೂಣ ಹತ್ಯೆ ಯಂತಹ ಮಹಾ ಪಾಪದ ಕಾರ್ಯ ನಿಲ್ಲಿಸಲು ಎಲ್ಲರೂ ಕೈಜೋಡಿಸಬೇಕು. ಕಾರ್ಯಾಗಾರದ ಮೂಲಕ ಕಾಯ್ದೆಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ತಿಳಿಸಿದರು.
ಬಿವಿವಿ ಸಂಘದ ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ತಜ್ಞೆ ಡಾ| ಆಶಾ ಮಲ್ಲಾಪುರ, ರೇಡಿಯಾಲಿಜಿಸ್ಟ್ ಅನಿಲ ಕಾರಡೆ ಸ್ತ್ರೀರೋಗ, ಪ್ರಸೂತಿ ಹಾಗೂ ಕ್ಷ-ಕಿರಣ ವೈದ್ಯರ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಶ್ರೀಶೈಲ ಹಟ್ಟಿ ಸೇರಿದಂತೆ ಮುಂತಾದವರು ಇದ್ದರು.
ಹೆಣ್ಣು ಭ್ರೂಣ ಹತ್ಯೆ ಜಿಲ್ಲೆಗೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದ್ದು, ವ್ಯವಸ್ಥೆ ಬದಲಾವಣೆ ಎಲ್ಲರೂ ಕೈಜೋಡಿಸಬೇಕು.
ಆಗ ಮಾತ್ರ ಇಂತಹ ಸಾಮಾಜಿಕ ಪಿಡುಗು ಸಂಪೂರ್ಣ ಕಿತ್ತು ಹಾಕಲು ಸಾಧ್ಯ.
*ಕೆ.ಎಂ. ಜಾನಕಿ, ಜಿಲ್ಲಾಧಿಕಾರಿ
ನಮ್ಮ ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣ ಹೆಚ್ಚಾಗಿವೆ. ಇದರ ತಡೆಗೆ ವೈದ್ಯರಿಗೆ ತಜ್ಞರಿಂದ ತರಬೇತಿ ಕಾರ್ಯಾಗಾರ ನಡೆಸಲಾಗಿದೆ.
ಹೆಣ್ಣು ಭ್ರೂಣ ಹತ್ಯೆಯಂತಹ ಮಹಾ ಪಾಪದ ಕಾರ್ಯ ನಿಲ್ಲಿಸಲು ಎಲ್ಲರ ಸಹಕಾರ ಅಗತ್ಯ.
*ಡಾ| ರಾಜಕುಮಾರ ಯರಗಲ್, ಡಿಎಚ್‌ಒ