ಕಲಾದಗಿ: ಬೀಳಗಿ ಮತಕ್ಷೇತ್ರದಲ್ಲಿನ ಕಲಾದಗಿ ಸೇರಿದಂತೆ ಈ ಭಾಗದ 14 ಹಳ್ಳಿಗಳ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕಲಾದಗಿ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಟಿಸಿ (ವಿದ್ಯುತ್ ಪರಿವರ್ತಕ) ಬ್ಯಾಂಕ್ ಆರಂಭಿಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲ ಗ್ರಾಮೀಣ ಟಿಸಿ ಬ್ಯಾಂಕ್ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಟಿಸಿ ದುರಸ್ತಿಗೆ ಹಣ ವ್ಯಯಿಸುವ
ಪರದಾಡುವ ಪರಿಸ್ಥಿತಿ ಮನಗಂಡು ಬಾಗಲಕೋಟೆ ಹೆಸ್ಕಾಂ ಹಿರಿಯ ಅಧಿಕಾರಿಗಳ ಜತೆ ನಿರಂತರ ನಾಲ್ಕಾರು ತಿಂಗಳು ಸಭೆ
ನಡೆಸಿ, ಅಧಿಕಾರಿಗಳ ಸ್ಪಂದನೆಯಿಂದ ಇಂದು ಗ್ರಾಮೀಣ ಮಟ್ಟದ ಹೆಸ್ಕಾಂ ಕಚೇರಿಯಲ್ಲಿ ಟಿಸಿ ಬ್ಯಾಂಕ್ ಆರಂಭಿಸಲಾಗಿದೆ ಎಂದರು.
ಕಲಾದಗಿ, ಬೀಳಗಿಯಲ್ಲಿ ಟಿಸಿ ಬ್ಯಾಂಕ್ ಆರಂಭಿಸಲಾಗಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು, ಕೆರೂರು ಹಾಗೂ ಬಾಗಲಕೋಟೆಯಲ್ಲಿ ಟಿಸಿ ಬ್ಯಾಂಕ್‌ಗೆ ಶೀಘ್ರ ಚಾಲನೆ ನೀಡಲಾಗುವುದು. ರೈತರ ಟಿಸಿ ದುರಸ್ತಿ ಇದ್ದಲ್ಲಿ ತಕ್ಷಣವೇ 1912ಗೆ ಕರೆ ಮಾಡಿ ಮಾಹಿತಿ ನೀಡಿ, ಇಲ್ಲವೇ ತಮ್ಮ ವ್ಯಾಪ್ತಿಯ ಹೆಸ್ಕಾಂ ಕಚೇರಿ ಟಿಸಿ ದುರಸ್ತಿಗೆ ಮನವಿ ನೀಡಿದಲ್ಲಿ 24 ಗಂಟೆಯೊಳಗೆ ಅಧಿಕಾರಿಗಳು ಕ್ರಮ ಕೈಗೊಂಡು ಹೆಸ್ಕಾಂ ಸಿಬ್ಬಂದಿಗಳು ಖುದ್ದು ಬಂದು ದುರಸ್ತಿ ಇದ್ದ ಟಿಸಿ ತೆಗೆದುಕೊಂಡು ಹೋಗಿ ಸುಸ್ಥಿಯಲ್ಲಿದ್ದ ಟಿಸಿಯನ್ನು ಜೋಡಣೆ ಮಾಡಿ ಹೋಗುತ್ತಾರೆ. ರಜಾ ದಿನಗಳಲ್ಲಿಯೂ ದಿನದ 24 ಗಂಟೆ ಪೂರೈಕೆಗೆ ಕ್ರಮ ವಹಿಸಲಾಗುತ್ತದೆ. ರೈತರ ಇಸಿ ದುರಸ್ತಿಗಾಗಿ ಯಾರಾದರೂ ಹಣ ಕೇಳಿದಲ್ಲಿ, ನಿರ್ಲಕ್ಷ್ಯದಿಂದ ತಡಮಾಡಿದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹೆಸ್ಕಾಂನ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಬಳಿ ಮುಳುಗಡೆ ಸಂತ್ರಸ್ತರ 33 ಬೇಡಿಕೆ ಈಡೇರಿಸಲು ಒತ್ತಾಯ, ಪುನರ್ವಸತಿ ಕೇಂದ್ರ, ಈಗಾಗಲೇ ಅವಾರ್ಡ್ ಆದಂತವುಗಳಿಗೆ ಪರಿಹಾರ ಹಣ ನೀಡುವುದು, ವಿಸೆಟ್ ಆಗದಂತೆ ಕ್ರಮ ವಹಿಸಲು, ಅವಾರ್ಡ್ ಹಂತದಲ್ಲಿರುವಂತವುಗಳನ್ನು ಅವಾರ್ಡ್ ಮಾಡಿಸುವುದು, ಗೈಡಲೈನ್ಸ್ ವಾಲ್ಯೂ ವ್ಯತ್ಯಾಸ ಸರಿಪಡಿಸಿ ವಾಲ್ಯೂ ಹೆಚ್ಚಿಸುವುದು ಮುಳುಗಡೆ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಬಳಿ ವಿಷಯ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.
ಬೀಳಗಿ ಮತಕ್ಷೇತ್ರದಲ್ಲಿ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಲಾಭ ಯಾರಿಗೆ ತಲುಪಿಲ್ಲವೋ ಅಂತರ ಪಟ್ಟಿ ಮಾಡಲು ಎಸಿ ತಹಶೀಲ್ದಾರ್ ಸಭೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಪಟ್ಟಿ ಮಾಡಿಸಿ ಯೋಜನೆ ಲಾಭ ದೊರೆಯುವಂತೆ ಮಾಡಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಕಲಾದಗಿ ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಫಕಿರಪ್ಪ ಮಾದರ, ಚಿಕ್ಕಶೆಲ್ಲಿಕೇರಿ ಗ್ರಾಪಂ ಅಧ್ಯಕ್ಷೆ ಗೀತಾ ನಾಯ್ಕರ್,
ಖಜ್ಜಿಡೋಣಿ ಗ್ರಾಪಂ ಉಪಾದ್ಯಕ್ಷ ಶಾಸಪ್ಪ ಕುರಿ, ಬೆಳಗಾವಿ ವಲಯ ಮುಖ್ಯ ಅಭಿಯಂತರ ವಿ.ಪ್ರಕಾಶ್, ಬಾಗಲಕೋಟೆ ಕಾರ್ಯಪಾಲಕ ಅಭಿಯಂತರ ಖಲೀಮ ಅಹಮ್ಮದ್, ಎಇಇ ಬಾಲಚಂದ್ರ ಹಲಗತ್ತಿ ಇನ್ನಿತರರು ಇದ್ದರು.