ಬಾಗಲಕೋಟೆ: ಜಿಲ್ಲೆಯಲ್ಲಿ 2020-21ನೇ ಸಾಲಿಗೆ 200 ಕೋಟಿ ರೂ.ವೆಚ್ಚದ ಉದ್ಯೋಗ ಖಾತರಿ ಕಾಮಗಾರಿಗಳ ಗುರಿ ಹೊಂದಲಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.
ತಾಲೂಕಿನ ಹಳದೂರ ಗ್ರಾ.ಪಂ ವ್ಯಾಪ್ತಿಯ ಬೂದನಗಡದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆರೆ ಹೂಳು ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
2019-20ನೇ ಸಾಲಿನಲ್ಲಿ 170 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳ ಗುರಿ ಹೊಂದುವ ಮೂಲಕ ರಾಜ್ಯಕ್ಕೆ 5ಸ್ಥಾನ ಪಡೆದುಕೊಂಡರೆ, 2020-21ನೇ ಸಾಲಿಗೆ 2 ಅಥವಾ 3ನೇ ಸ್ಥಾನ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲೆಯನ್ನು ಬರ ಜಿಲ್ಲೆಯೆಂದು ಘೋಷಿಸಿದ್ದು, ಜಿಲ್ಲೆಯ ಜನತೆಗೆ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡುವ ಮೂಲಕ ದೂರದ ಮಂಗಳೂರು, ಗೋವಾಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲಾಗಿದೆ. ನರೇಗಾ ಯೋಜನೆಯ ವ್ಯಾಪ್ತಿಯಲ್ಲಿ ಸಿಬ್ಬಂದಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ತೊಂದರೆ ಇದ್ದರೂ ಸಹ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಿಲ್ಲ. 5 ಕಿ.ಮಿ. ಅಂತರ ಮೀರಿ ಬರುವ ಕೂಲಿ ಕಾರ್ಮಿಕರಿಗೆ ಪ್ರಯಾಣ ಭತ್ಯೆ ಸಹ ನೀಡಲಾಗುತ್ತಿದೆ ಎಂದರು.
ಭೇಟಿ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಉದ್ಯೋಗದ ಬೇಡಿಕೆ ಸಲ್ಲಿಸಿದ 15 ದಿನಗಳಲ್ಲೇ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡರು. ಕೂಲಿ ಹಣ ಸಕಾಲದಲ್ಲಿ ಜಮೆ ಆಗುತ್ತಿಲ್ಲ ಎಂದು ಕೂಲಿ ಕಾರ್ಮಿಕರು ತಿಳಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಮಾನಕರ, ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಅಪ್‌ಡೆಟ್, ಆಧಾರ ನಂಬರ ಜೋಡಣೆ ಬಗ್ಗೆ ಗ್ರಾಪಂ ಖಾತ್ರಿ ಪಡಿಸಲು ತಂಡ ರಚಿಸುವಂತೆ ಹಳದೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಾವಿತ್ರಿ ಮಾಶಾಳ ಅವರಿಗೆ ಸೂಚಿಸಿದರು. ಇದೇ ವೇಳೆ ಕೂಲಿ ಕಾರ್ಮಿಕರು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರನ್ನು ಸನ್ಮಾನಿಸಿದರು.
ಐಇಸಿ ಕಾರ್ಯಕ್ರಮ ಸಂಯೋಜಕ ನಾಗರಾಜ ರಾಜನಾಳ, ಎಂಐಎಸ್‌ನ ಉಜ್ವಲ ಸಕ್ರಿ, ಬಾದಾಮಿ ತಾಲೂಕಿನ ಐಇಸಿ ಸಂಯೋಜಕ ಸಮೀರ ಉಮರ್ಜಿ ಮುಂತಾದವರು ಉಪಸ್ಥಿತರಿದ್ದರು.