Advertisement

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

05:42 PM Mar 28, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ನಗರದ ನರೇಂದ್ರ ಯುವಕ ಮಂಡಳದ ಯುವಕರು, ಮಕ್ಕಳು ಕೂಡಿ ಹಿರಿಯರಿಗೇ ಮಾದರಿಯಾಗುವ ಕಾರ್ಯ
ಮಾಡುತ್ತಿದ್ದಾರೆ. ಅದೂ ಇದೇ ಪ್ರಥಮ ಬಾರಿ ಏನಲ್ಲ. ಪ್ರತಿವರ್ಷ ಬೇಸಿಗೆ ಬಂತೆಂದರೆ, ಬಿಡಾಡಿ ದನಗಳು, ಪಕ್ಷಿಗಳಿಗೆ ನೀರು-ಆಹಾರದ ವ್ಯವಸ್ಥೆ ಮಾಡುವ ಜತೆಗೆ ಗಿಡ-ಮರಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕುತ್ತಾರೆ. ಈ ಕಾರ್ಯ ಹಲವು ವರ್ಷಗಳಿಂದ ಮುಂದುವರಿಸಿದ್ದಾರೆ.

Advertisement

ಸಸ್ಯ-ಪಕ್ಷಿ ಸಂಕುಲ ಉಳಿವಿಗೆ ಶ್ರಮ: ಬೇಸಿಗೆ ಬಂದರೆ, ಸಾಕು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ
ವ್ಯಕ್ತಿ-ಸಂಘ-ಸಂಸ್ಥೆಗಳೂ ಬಾಗಲಕೋಟೆಯಲ್ಲಿ ಸಾಕಷ್ಟಿವೆ. ಆದರೆ, ಮೂಕ ಪ್ರಾಣಿಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡುವ ಕೆಲವೇ ಕೆಲವರಿದ್ದಾರೆ. ಅಂತಹವರಲ್ಲಿ ಸಾಮಾಜಿಕ ಕಾರ್ಯಕರ್ತ ಘನಶಾಂ ಭಾಂಡಗೆ ಅವರು ಕಳೆದ 22ಕ್ಕೂ ಹೆಚ್ಚು ವರ್ಷಗಳಿಂದ ನಗರ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಬಿಡಾಡಿ ದನಗಳು, ಬೀದಿ ನಾಯಿಗಳಿಗೆ ಆಹಾರ, ನೀರು ಕೊಡುವ
ಕಾರ್ಯ ಮಾಡುತ್ತಿದ್ದಾರೆ. ಅಂತಹ ಸಾಲಿಗೆ ಇದೀಗ ಬಾಗಲಕೋಟೆಯ ನರೇಂದ್ರ ಯುವಕ ಮಂಡಳಿ ಕಾರ್ಯಕರ್ತರೂ ವಿಶೇಷ ಸೇವೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.ಆದರೆ, ಎಲ್ಲೂ ಪ್ರಚಾರ ಬಯಸಿಲ್ಲ. ಪ್ರಚಾರಕ್ಕಾಗಿ ಅಲ್ಲ, ಇದು ಪ್ರೇರಣೆಗಾಗಿ ಎಂದೇ ಅವರು, ತಮ್ಮ ಸೇವೆ ಆರಂಭಿಸುತ್ತಾರೆ. ಇದು, ಇತರ ಹಲವರಿಗೆ ಮಾದರಿಯಾಗಿದೆ ಎಂದರೂ ತಪ್ಪಲ್ಲ.

100ಕ್ಕೂ ಹೆಚ್ಚು ಸ್ಥಳ: ಹಳೆಯ ಬಾಗಲಕೋಟೆ ಸೇರಿದಂತೆ ನಗರದ ವಿವಿಧೆಡೆ ಸುಮಾರು 100ಕ್ಕೂ ಹೆಚ್ಚು ಸ್ಥಳ ಗುರುತಿಸಿರುವ ನರೇಂದ್ರ ಯುವಕ ಮಂಡಳಿ ಸದಸ್ಯರು, ಮನೆಯ ಮೇಲ್ಛಾವಣಿ, ಗಿಡ-ಮರಗಳಲ್ಲಿ ಮಣ್ಣಿನ ಚಿಕ್ಕ ಚಿಕ್ಕ ಬುಟ್ಟಿ ಅಳವಡಿಸಿದ್ದಾರೆ. ಒಂದು ಸ್ಥಳದಲ್ಲಿ ನಾಲ್ಕಾರು ಬುಟ್ಟಿ ಇಟ್ಟು, ಅದರಲ್ಲಿ ನೀರು ಹಾಗೂ ವಿವಿಧ ಧಾನ್ಯಗಳನ್ನು ಹಾಕಿ, ಪಕ್ಷಿಗಳಿಗೆ ಸೇವೆಯಲ್ಲಿ ತೊಡಗಿದ್ದಾರೆ. ಇನ್ನು ನವನಗರ ಯೂನಿಟ್‌-2ರಲ್ಲಿ ಸಾವಿರಾರು ಸಸಿ ನೆಟ್ಟಿದ್ದು, ಬೇಸಿಗೆಯ ಬಿರು ಬಿಸಲಿಗೆ ಒಣಗುತ್ತಿವೆ.
ಅವುಗಳನ್ನು ಕಂಡ ಈ ಯುವಕರು, ಟ್ಯಾಂಕರ್‌ ಮೂಲಕ ನೀರು ಒದಗಿಸುವ ಕಾರ್ಯವೂ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಬಾಯಾರಿದ ಮೂಕ ಪ್ರಾಣಿಗಳ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಬೇಸಿಗೆ ಬಂತೆಂದರೆ ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಪ್ರಾಣಿ ಪಕ್ಷಿಗಳಿಗೆ ಸಾಧ್ಯವಾದಷ್ಟು ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವ ದೃಷ್ಟಿಯಿಂದ ಕಳೆದ ಏಳೆಂಟು ವರ್ಷಗಳಿಂದ ನರೇಂದ್ರ ಯುವಕ ಮಂಡಳದಿಂದ 100ಕ್ಕೂ ಹೆಚ್ಚು ಜಾಗಗಳಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿ, ಚಿಕ್ಕ ಅಳಿಲು ಸೇವೆ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ನಮ್ಮ ಮನೆಯ ಟೆರಸ್‌ ಮೇಲೆ, ಕಿಟಕಿಯ ಪಕ್ಕದಲ್ಲಿ, ಮನೆಯ ನೆರಳಿನ ಜಾಗಗಳಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಬೇಕು ಎಂಬುದು ನಮ್ಮ ಮನವಿ.
*ಸುರೇಶ ಮಾಗಿ, ನರೇಂದ್ರ
ಯುವಕ ಮಂಡಳ, ಬಾಗಲಕೋಟೆ

*ಶ್ರೀಶೈಲ ಕೆ. ಬಿರಾದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next