Advertisement

ಹೊರ ಬರಬೇಡಿ;ಮನೆಗೇಬರಲಿದೆ ತರಕಾರಿ!

01:56 PM Apr 12, 2020 | |

ಬಾಗಲಕೋಟೆ: ಇಲ್ಲಿನ ಹಳೆ ಬಾಗಲಕೋಟೆ ನಗರದ ವಾರ್ಡ್‌ ನಂ.7 ಹಾಗೂ 14ರಲ್ಲಿ 7 ಜನರಿಗೆ ಕೋವಿಡ್‌ ಸೋಂಕು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಮನೆ ಬಿಟ್ಟು ಯಾರು ಹೊರಗೆ ಬರದಂತೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನುಕೋವಿಡ್‌ ವಿಶೇಷ ಅಪರ ಜಿಲ್ಲಾಕಾರಿ ಬಸವರಾಜ ಸೋಮಣ್ಣವರ ವೀಕ್ಷಿಸಿ, ಪರಿಶೀಲನೆ ನಡೆಸಿದರು.

Advertisement

ಪೊಲೀಸ್‌, ನಗರಸಭೆ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಸವೇಶ್ವರ ವೃತ್ತದಲ್ಲಿ ತೀವ್ರ ತಪಾಸಣೆ ನಡೆಸಿದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಾರ್ವಜನಿಕರು ಮನೆಬಿಟ್ಟು ಹೊರಬರದಂತೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಅಗತ್ಯ ಪಡಿತರ ಆಹಾರ ಧಾನ್ಯಗಳ ಕಿಟ್‌, ಕಾಯಿಪಲ್ಲೆ ಸಾಗಾಟ, ಸಿಲೆಂಡರ್‌, ಮೆಡಿಕಲ್‌ ಹಾಗೂ ದಿನಸಿ ಸರಬರಾಜು ಮಾಡುವ ಪ್ರಕ್ರಿಯೆಯನ್ನು ನಿಗಾ ವಹಿಸಲಾಯಿತು.

200 ರೂ. ಹಾಗೂ 100 ರೂ.ಗಳ ಕಾಯಿಪಲ್ಲೆ ಕಿಟ್‌ ಹೊತ್ತ ಎಪಿಎಂಸಿ ವಾಹನ ಮನೆ ಮನೆಗೆ ಕಾಯಿಪಲ್ಲೆಗಳನ್ನು ಧ್ವನಿವರ್ಧಕಗಳ ಮೂಲಕ ಬಾಗಿಲಿಗೆ ಮಾರಾಟ ಮಾಡಲಾಯಿತು. 200 ರೂ.ಗಳ ಕಿಟ್‌ನಲ್ಲಿ 2 ಕೆಜಿ ಉಳ್ಳಾಗಡ್ಡಿ, 1 ಕೆಜಿ ಟೊಮೊಟೋ, 1 ಕೆಜಿ ಬಟಾಟಿ, 1 ಕೆಜಿ ಬದನೆ, ಅರ್ದ ಕೆಜಿ ಮೆಣಸಿನಕಾಯಿ ಹಾಗೂ 2 ಕಟ್ಟು ಕೊತ್ತಂಬರಿ ಕರಿಬೇವು ಒಳಗೊಂಡಿದೆ. ಅಲ್ಲದೇ ಸಿಲೆಂಡರ್‌ಗಳನ್ನು ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರು ಒಯ್ಯುತ್ತಿರುವುದನ್ನು ಕಂಡ ತಕ್ಷಣವೇ ಸಿಲೆಂಡರ್‌ ಸರಬರಾಜು ಮಾಡುವವರಿಗೆ ಮಾತನಾಡಿ, ಕಡ್ಡಾಯವಾಗಿ ವಾಹನಗಳಲ್ಲೇ ಎಚ್ಚರಿಕೆಯಿಂದ ವಿತರಿಸುವಂತೆ ಸೂಚಿಸಲಾಯಿತು. ಮೆಡಿಸಿನ್‌ ವಿತರಣೆಗೆ ಆರೋಗ್ಯ ಸಿಬ್ಬಂದಿಯು ಬಸವೇಶ್ವರ ವೃತ್ತದಲ್ಲಿ ಉಪಸ್ಥಿತರಿದ್ದು, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಬಿ.ಜಿ.ಹುಬ್ಬಳ್ಳಿ (9449843186, 6361367737) ತಿಳಿಸಿದ್ದಲ್ಲಿ ಆರೋಗ್ಯ ಸಿಬ್ಬಂದಿಗಳು ಮೆಡಿಸಿನ್‌ ತಂದು ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಸವೇಶ್ವರ ವೃತ್ತದಲ್ಲಿಯ ಕೆಲ ಮಹಿಳೆಯರು ವೈದ್ಯರ ಚೀಟಿ ಹಿಡಿದು ಬಂದಿರುವಾಗಲೇ ಆರೋಗ್ಯ ಕಾರ್ಯಕರ್ತರು ಸ್ಥಳೀಯ ಔಷಧ ಅಂಗಡಿಯಿಂದ ಔಷಧ ತಂದು ಕೊಟ್ಟು ಸಹಾಯ ಮಾಡಿದರು. ಮನೆಯಿಂದ ಯಾರು ಹೊರಬರದಂತೆ ಧ್ವನಿವರ್ಧಕ ಮೂಲಕ ಓಣಿ ಓಣಿಗಳಲ್ಲಿ ಪ್ರಚಾರ ನಡೆಸಲಾಯಿತು. ಆಹಾರಧಾನ್ಯ ಪೂರೈಕೆದಾರ ಲಕ್ಷ್ಮೀನಾರಾಯಣ ಕಾಸಟ್‌ (ಮೊ.ನಂ: 9945502371) ಮತ್ತು ಮುಳಗುಂದ (9845101024) ಅವರಿಗೆ ಸುರಕ್ಷಿತವಾಗಿ ಅಗತ್ಯ ದಿನಸಿ ವಸ್ತುಗಳನ್ನು ಪೂರೈಸಲು ಸೂಚಿಸಿದರು. 7 ಕೋವಿಡ್‌ ಸೋಂಕು ಕಂಡು ಬಂದ ಪ್ರದೇಶವನ್ನು ಈಗಾಗಲೇ ಕಂಟೇನ್‌ ಮೆಂಟ್‌ ಝೋನ್‌ ಹಾಗೂ ಸುತ್ತಲಿನ ಪ್ರದೇಶವನ್ನು ಬಫರ್‌ ಝೋನ್‌ಗಳಾಗಿ ಗುರುತಿಸಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದು ಸೋಮಣ್ಣವರ ತಿಳಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next