ಬಾಗಲಕೋಟೆ: ಮಹಾಮಾರಿ ಕೋವಿಡ್ ನಿತ್ಯ ಶತಕ ದಾಟುವುದು ಮುಂದುವರಿದಿದ್ದು, ಬುಧವಾರ ಒಂದೇ ದಿನ ಮತ್ತೆ 149 ಜನರಿಗೆ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2500ರ ಗಡಿಗೆ ಬಂದಿದೆ.
ಬುಧವಾರ 42 ಜನ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಹೊಸದಾಗಿ 149 ಜನರಿಗೆ ಸೋಂಕು ತಗುಲಿದೆ. ಅಲ್ಲದೇ ಇಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2446ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 1204 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾಗಲಕೋಟೆ ತಾಲೂಕು-17, ಬಾದಾಮಿ-41, ಹುನಗುಂದ-32, ಬೀಳಗಿ-27, ಮುಧೋಳ-23, ಜಮಖಂಡಿ-8 ಸೇರಿದಂತೆ ಬೇರೆ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 263 ಸ್ಯಾಂಪಲ್‌ಗಳ ವರದಿ ಬರಬೇಕಿದ್ದು, 666 ಜನ ಪ್ರತ್ಯೇಕ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 31610 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 28623 ನೆಗೆಟಿವ್, 2446 ಪಾಸಿಟಿವ್ ಬಂದಿವೆ.
ಇನ್ನೂ 1192 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೆ ಒಟ್ಟು 187 ಸ್ಯಾಂಪಲ್ ರಿಜೆಕ್ಟ್ ಆಗಿವೆ. ಕಂಟೈನ್ಮೆಂಟ್ ಝೋನ್ 182 ಇದ್ದು, ಇನ್ ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 8237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ತಿಳಿಸಿದ್ದಾರೆ.
ಮತ್ತಿಬ್ಬರು ಬಲಿ: ಜಿಲ್ಲೆಯ ರಬಕವಿ ನಿವಾಸಿ 39 ವರ್ಷದ ಪುರುಷ ಆ.3ರಂದು ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯಾಘಾತ ಮತ್ತು ಕೋವಿಡ್ ಸೋಂಕಿನ ತೊಂದರೆಯಿಂದ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾರೆ. ಅಲ್ಲದೇ ಬಾಗಲಕೋಟೆ ನಿವಾಸಿ 71 ವರ್ಷದ ವೃದ್ಧ ಆ.2ರಂದು ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಧುಮೇಹ, ರಕ್ತದೊತ್ತಡ, ಕೋವಿಡ್ ಸೋಂಕು ಹಾಗೂ ತೀವ್ರ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 54 ಜನ ಹಾಗೂ ಬೇರೆ ಜಿಲ್ಲೆಯಲ್ಲಿ ಮೂವರು ಸೇರಿ ಒಟ್ಟು 57 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.