ಬಾಗಲಕೋಟೆ: ಮುಳುಗಡೆ ಜಿಲ್ಲೆ ಎಂದು ಕರೆಸಿಕೊಳ್ಳುವ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗುವ 1997ಕ್ಕೂ ಪೂರ್ವ ಅಖಂಡ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಹಕಾರ ರಂಗ ಬೆಳೆದಿದೆ. ಇದೀಗ ಪ್ರತ್ಯೇಕ ಜಿಲ್ಲೆಯಾಗಿ 22 ವರ್ಷ ಕಂಡಿರುವ ಬಾಗಲಕೋಟೆ ಸಹಕಾರ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
Advertisement
ಅಖಂಡ ಜಿಲ್ಲೆಯಲ್ಲಿ ಸಹಕಾರ ಚಳವಳಿ ಜಾಗೃತಿ ಆರಂಭಗೊಂಡಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲದಿಂದ. ಅಲ್ಲಿಂದ ಆರಂಭಗೊಂಡ ಸಹಕಾರ ತತ್ವದ ಜಾಗೃತಿ ಅಖಂಡ ವಿಜಯಪುರ ಜಿಲ್ಲೆ ವ್ಯಾಪಿಸಿಕೊಂಡಿತ್ತು. ಅದರ ಫಲವಾಗಿ ಜಿಲ್ಲೆಯಲ್ಲಿ ಈಗ ಬರೋಬ್ಬರಿ 2096 ಸಹಕಾರಿ ಸಂಘಗಳು (ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊರತುಪಡಿಸಿ) ತಲೆ ಎತ್ತಿವೆ.
Related Articles
Advertisement
ಆಲಮೇಲದ ದೇಶಮುಖರ ಕೊಡುಗೆ: ಮುದ್ದೇಬಿಹಾಳದಲ್ಲಿ ಅಖಂಡ ಜಿಲ್ಲೆಯ ಮೊದಲ ಸಹಕಾರಿ ಸಂಘ 1904ರಲ್ಲಿ ಸ್ಥಾಪನೆಯಾಯಿತು. ಆಲಮೇಲದ ದಿ.ದಿವಾನ್ ಬಹದ್ದೂರ್ ಎಸ್.ಜೆ. ದೇಶಮುಖರು ಅಖಂಡ ಜಿಲ್ಲೆಯಲ್ಲಿ ಸಂಚರಿಸಿ ಸಹಕಾರ ರಂಗದ ಮಹತ್ವ, ಲಾಭ ತಿಳಿಸುವಲ್ಲಿ ಪ್ರಮುಖರಾಗಿದ್ದರು. ಇವರ ಬಳಿಕ ಸಹಕಾರ ಕ್ಷೇತ್ರವನ್ನು ಬಲಿಷ್ಠ ಹಾಗೂ ಶ್ರೀಮಂತಗೊಳಿಸಿದವರಲ್ಲಿ ಹಲವರಿದ್ದಾರೆ.
1912ರ ಬಳಿಕ ಚಳವಳಿಗೆ ವೇಗ: ಸಹಕಾರಿ ಚಳವಳಿ ಆರಂಭದ ಇತಿಹಾಸವನ್ನು ಎರಡು ಹಂತದಲ್ಲಿ ವಿಶ್ಲೇಷಿಸಬಹುದಾಗಿದೆ. 1904ರಿಂದ 1912ರ ಅವಧಿಯಲ್ಲಿ ಅಪರಿಮಿತ ಹೊಣೆಗಾರಿಕೆ ಆಧಾರದ ಮೇಲೆ ಸಹಕಾರ ಸಂಘಗಳು ಆರಂಭಗೊಂಡಿದ್ದವು. 1912ರ ಬಳಿಕ ಪರಿಮಿತ ಹೊಣೆಗಾರಿಕೆ ಮೇಲೆ ಸಂಘಗಳು ಸ್ಥಾಪನೆಗೊಂಡಿವೆ.
1912ರವರೆಗೆ ಸಹಕಾರ ಸಂಘಗಳ ಸ್ಥಾಪನೆ ನಿಧಾನಗತಿಯಾಗಿತ್ತು. ಬಳಿಕ ಸಹಕಾರ ಚಳವಳಿಯಲ್ಲಿ ತೀವ್ರ ಬದಲಾವಣೆ ಕಂಡಿವೆ. 1956ಕ್ಕೂ ಮುಂಚೆ ಬಾಗಲಕೋಟೆ ಒಳಗೊಂಡ ವಿಜಯಪುರ ಜಿಲ್ಲೆ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ಹೀಗಾಗಿ ಮುಂಬೈ ಸರ್ಕಾರದ ಸರ್ಕಾರಿ ಧೋರಣೆಗಳು, ನಮ್ಮ ಸಹಕಾರಿ ಚಳವಳಿಯಲ್ಲಿ ಕಾಣುತ್ತವೆ. 1916ರ ಪೂರ್ವದಲ್ಲಿ ಸಹಕಾರ ಸಂಘಗಳು, ಮುಂಬೈ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ 1916ರ ಬಳಿಕ ಧಾರವಾಡದಲ್ಲಿ ಸ್ಥಾಪನೆಯಾದ ಕರ್ನಾಟಕ ಸೆಂಟ್ರಲ್ ಸಹಕಾರ ಬ್ಯಾಂಕ್ ನಿಂದ ಸಾಲ ಪಡೆಯುತ್ತಿದ್ದವು.
ನೇಕಾರರಿಗೆ ಇರುವ ಮೊದಲ ಸಹಕಾರಿ ಗಿರಣಿ: ಜಿಲ್ಲೆಯಲ್ಲಿ ಕೃಷಿ ಜತೆ ನೇಕಾರಿಕೆಯೂ ದೊಡ್ಡ ಉದ್ಯಮವಾಗಿ ಬೆಳೆದಿದೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸಹಕಾರಿ ನೂಲಿನ ಗಿರಣಿಯನ್ನು ಬನಹಟ್ಟಿಯಲ್ಲಿ ಸ್ಥಾಪಿಸಿದ್ದು, ಇದು ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಾವಿರಾರು ನೇಕಾರ ಸದಸ್ಯರನ್ನು ಹೊಂದಿದೆ. ನೇಕಾರ ಸಹಕಾರ ಸಂಘದ ಜತೆಗೆ ಜಿಲ್ಲೆಯಲ್ಲಿ ಒಂದು ಸಹಕಾರ ಒಡೆತನದ ಸಕ್ಕರೆ ಕಾರ್ಖಾನೆ (ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ) ಕೂಡ ಇದೆ. 1913ರಿಂದ 19021ರ ಅವಧಿಯಲ್ಲಿ ಅರ್ಬನ್ (ಪಟ್ಟಣ) ಸಹಕಾರಿ ಬ್ಯಾಂಕ್ ಗಳ ಸ್ಥಾಪನೆಯಾಗಿವೆ. 1913ರಲ್ಲಿ ಲಕ್ಷ್ಮೀ ಸಹಕಾರಿ ಬ್ಯಾಂಕ್, 1917ರಲ್ಲಿ ಬಸವೇಶ್ವರ ಸಹಕಾರ ಬ್ಯಾಂಕ್, 1921ರಲ್ಲಿ ಬಾಗಲಕೋಟೆ ಪಟ್ಟಣ ಸಹಕಾರಿ ಬ್ಯಾಂಕ್ ಸ್ಥಾಪನೆಗೊಂಡಿವೆ.
ಸ್ವಾತಂತ್ರ್ಯ ನಂತರ (1950ರ ಬಳಿಕ ) ಜಮಖಂಡಿ ಅರ್ಬನ್ ಬ್ಯಾಂಕ್, ಮುಧೋಳ, ರಬಕವಿ ಬ್ಯಾಂಕ್‌ಗಳು, 1960ರ ನಂತರ ಹುನಗುಂದ, ಇಳಕಲ್ಲ, ಮಹಾಲಿಂಗಪುರ, ಬಾದಾಮಿಯಲ್ಲಿ ಪಟ್ಟಣ ಸಹಕಾರ ಸಂಘಗಳು ಹುಟ್ಟಿಕೊಂಡಿದ್ದು, ಅವು ಇಂದಿಗೂ ಆರ್ಥಿಕ ಸಬಲತೆಯೊಂದಿಗೆ, ಜನರ ಆರ್ಥಿಕ ಸಮಸ್ಯೆ ನಿವಾರಣೆಗೂ ಶ್ರಮಿಸುತ್ತಿವೆ.
ಸಹಕಾರಿ ಯೂನಿಯನ್: ಜಿಲ್ಲೆಯ 2096 ಸಹಕಾರ ಸಂಘಗಳಿಗೆ ಸಹಕಾರಿ ತತ್ವ, ಸಹಕಾರಿ ಶಿಕ್ಷಣದ ಮಾರ್ಗದರ್ಶನ ನೀಡಲು ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯ ನಿರ್ವಹಿಸುತ್ತಿದೆ. ಯೂನಿಯನ್ ಅಧ್ಯಕ್ಷ ಕಾಶೀನಾಥ ಹುಡೇದ ನೇತೃತ್ವದ ತಂಡ ಸಹಕಾರಿ ಸಂಘಗಳ ಬಲವರ್ಧನೆ, ಕಾನೂನು ಪಾಲನೆ ಹಾಗೂ ಸದಸ್ಯ ಗ್ರಾಹಕರಿಗೆ ಸಮಯೋಚಿತ ಸ್ಪಂದನೆ ನೀಡುವ ಮಾರ್ಗಗಳ ಕುರಿತು ಸಲಹೆ- ಮಾರ್ಗದರ್ಶನ, ಶಿಕ್ಷಣ ಕೊಡುತ್ತಿದೆ.