Advertisement

ಬನಶಂಕರಿದೇವಿ ಜಾತ್ರಾ ಮಹೋತ್ಸವಕ್ಕೆ ಕಳೆ ತಂದ ಬಳೆ

01:21 PM Jan 16, 2020 | Naveen |

ಬಾಗಲಕೋಟೆ: ಎಲ್ರೂ ಜಲ್ದಿ ರೆಡಿ ಆಗ್ರಿ. ಜಾತ್ರಾಗ್‌ ಹೋಗಿ ಬಳಿ ಉಟ್ಕೊಂಡು ಬರೂನು… ಬಾದಾಮಿಯ ಪ್ರತಿ ಮನೆಯಲ್ಲಿ ಹೆಣ್ಣು ಮಕ್ಕಳ ಬಾಯಲ್ಲಿ ಈಗ ನಿತ್ಯ ಇಂತಹ ಮಾತು ಕೇಳಿ ಬರುತ್ತಿವೆ. ಮನೀಗಿ ಮುತ್ತೈದೆ ಹೆಣ್ಮಕ್ಕಳು ಬಂದಾರ್‌. ಎಲ್ಲಾಗ್ರಿ ಬಳಿ ಉಡಿಸ್ಕೊಂಡು ಬರೂನು ಎಂದು ಮನೆಗೆ ಬಂದ ಮಹಿಳೆಯರಿಗೆ ಬಳೆ ಉಡಿಸಿಕೊಂಡು ಬರಲು ಬನಶಂಕರಿ ಜಾತ್ರೆಗೆ ಕರೆದುಕೊಂಡು ಹೋಗುತ್ತಾರೆ.

Advertisement

ಬಳೆ ವ್ಯಾಪಾರ ಬಲು ಜೋರು: ರಾಜ್ಯದಲ್ಲೇ ಅತಿಹೆಚ್ಚು ದಿನಗಳ ಕಾಲ ನಡೆಯುವ ದೊಡ್ಡ ಜಾತ್ರೆ ಎಂಬ ಖ್ಯಾತಿ ಪಡೆದ ಬನಶಂಕರಿದೇವಿ ಜಾತ್ರೆಗೆ ಬಂದರೆ ಬೇಡಿದೆಲ್ಲ ಸಿಗುವ ಸಂಭ್ರಮ ಜನರಿಗೆ. ಬನದ ಹುಣ್ಣಿಮೆಯಂದು ಬನಶಂಕರಿಯ ಹರಿದ್ರಾತೀರ್ಥ ಹೊಂಡದಲ್ಲಿ ಪುಣ್ಯಸ್ನಾನ ಮಾಡಿ, ದೇವಿಯ ಆಶೀರ್ವಾದ ಪಡೆದರೆ ಬದುಕಿನ ಸಂಕಷ್ಟಗಳು ದೂರಾಗುತ್ತವೆ ಎಂಬುದು ಭಕ್ತರ ನಂಬಿಕೆ.

ಬಾಗಲಕೋಟೆ ಅಷ್ಟೇ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರದ ಹಲೆವೆಡೆ ಲಕ್ಷಾಂತರ ಭಕ್ತರು ಈ ದೇವಿಗಿದ್ದಾರೆ. ಬಾದಾಮಿಯ ಮನೆ
ಮನೆಯ ಜನರೂ, ಜಾತ್ರೆಯ ವೇಳೆ ಮನೆಗೆ ಬರುವ ಬೀಗರು, ಪರಿಚಯಸ್ಥರಿಗೆ ಜಾತ್ರೆಗೆ ಕರೆದುಕೊಂಡು ಹೋಗಿ ಬನವ್ವನ ಬಳೆ (ಹಸಿರು-ಚಿಕ್ಕೆ ಬಳೆ) ಉಡಿಸಿಯೇ ಕಳುಹಿಸುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪ್ರತೀತಿ.

ರೈತಮಿತ್ರ ಸಾಮಗ್ರಿ: ಈ ಜಾತ್ರೆ ಅತ್ಯಂತ ಬಡವರಿಂದ ಹಿಡಿದು, ದೊಡ್ಡ ಶ್ರೀಮಂತ ವ್ಯಕ್ತಿಗಳನ್ನೂ ಗಮನ ಸೆಳೆಯುತ್ತದೆ. ಈ ಜಾತ್ರೆಯಲ್ಲಿ ಒಂದು ಸುತ್ತು
ಹಾಕಿ ಬಂದರೆ, ಎಲ್ಲ ವರ್ಗದ ಜನರಿಗೆ ಬೇಡಿದ್ದು ದೊರೆಯುತ್ತದೆ. ಒಂದೇ ತರಹದ ವ್ಯಾಪಾರ ಅಥವಾ ಮನರಂಜನೆ ಇಲ್ಲಿರಲ್ಲ. ಜಾತ್ರೆ ಅಂದಾಕ್ಷಣ, ಬೆಂಡು-ಬರಪೆ (ಮಿಟಾಯಿ), ಬಟ್ಟೆ, ಮಕ್ಕಳ ಆಟಿಗೆ ಸಾಮಗ್ರಿ ಮಾತ್ರ ಇಲ್ಲಿರಲ್ಲ. ರೈತರಿಂದ ಹಿಡಿದು, ಪ್ರತಿಯೊಬ್ಬರೂ ಬಯಸುವ ವಸ್ತುಗಳು ಇಲ್ಲಿ ದೊರೆಯುತ್ತದೆ. ಮುಖ್ಯವಾಗಿ ಹಳ್ಳಿಯ ರೈತರಿಗೆ ಸಂಬಂಧಿಸಿದ ಒಕ್ಕಲುತನ (ಕೃಷಿ)ಕ್ಕೆ ಬೇಕಾಗುವ ಕೂರಿಗೆ, ಕುಂಟೆ, ನೇಗಿಲು ವಿಶೇಷವಾಗಿ ಸಿಗುತ್ತವೆ. ಈ ಜಾತ್ರೆಗೆ ಬರುವ ನಗರ ಪ್ರದೇಶದ ಜನರು ದೇವಿಯ ದರ್ಶನ ಮಾಡಿಕೊಂಡು, ಮನರಂಜನೆ ಬಯಸುತ್ತಾರೆ. ತಮ್ಮ ಮಕ್ಕಳೊಂದಿಗೆ ಮನರಂಜನೆ ಬಯಸಿ, ಒಂದುಷ್ಟು ಆಟಿಗೆ, ಗೃಹ ಬಳಕೆ ಸಾಮಗ್ರಿ ಖರೀದಿಸಿ ಮರಳುತ್ತಾರೆ. ಆದರೆ, ಹಳ್ಳಿಗರು ಅತಿ ಹೆಚ್ಚು ವಿವಿಧ ವಸ್ತುಗಳ ಖರೀದಿ ಮಾಡುತ್ತಾರೆ.

ರುಬ್ಬುವ ಕಲ್ಲು, ಒಣಕೆ, ಬಾಗಿಲು ಕಿಡಕಿ, ಬಟ್ಟೆ, ಪಾತ್ರೆ, ಹಾಸಿಗೆ, ತಲೆದಿಂಬು, ಮನೆಯ ಅಲಂಕಾರಿಕ ವಸ್ತುಗಳ ಸಹಿತ ಬಳೆ ಅಂಗಡಿಗಳು ಇಲ್ಲಿ ಹೆಚ್ಚು ವ್ಯಾಪಾರ ಆಗುತ್ತವೆ. ಇವೆಲ್ಲವುಗಳ ಜತೆಗೆ ಸುಮಾರು 10ರಿಂದ 15ವೃತ್ತಿ ರಂಗಭೂಮಿ ನಾಟಕ ಕಂಪನಿಗಳು, ಈ ಜಾತ್ರೆಯಲ್ಲಿ ನಾಟಕ ಪ್ರದರ್ಶನ ಮಾಡುತ್ತವೆ. ಇಡೀ ವರ್ಷ ಯಾವುದೇ ಭಾಗದಲ್ಲಿ ಲಾಸ್‌ ಆಗಿದ್ದರೂ ಈ ಜಾತ್ರೆಯಲ್ಲಿ ಲಾಭ ಮಾಡಿಕೊಂಡೇ ತೆರಳುತ್ತಾರೆ.

Advertisement

ಒಟ್ಟಾರೆ, ಬನಶಂಕರಿದೇವಿ ಜಾತ್ರೆ ಎಂದರೆ ಎಲ್ಲ ವರ್ಗದವರಿಗೂ ಎಲ್ಲಾ ರೀತಿಯ ವಸ್ತುಗಳ ಖರೀದಿಗೆ ಅನುಕೂಲವಿದೆ. ಇದೊಂದು ಪಕ್ಕಾ ಹಳ್ಳಿಗರ ಜಾತ್ರೆ ಎಂದರೆ ತಪ್ಪಲ್ಲ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next