Advertisement

ಬಾಗಲಕೋಟೆ: 3 ವರ್ಷಗಳ ಬಳಿಕ ಆಂಜನೇಯ ದೇವಾಲಯ ಆರಂಭ

06:31 PM Jul 10, 2023 | Team Udayavani |

ಬಾಗಲಕೋಟೆ: ಇಲ್ಲಿನ ಕೆಂಪುರಸ್ತೆಯ ಮುಚಖಂಡಿ ಕ್ರಾಸ್‌ ಬಳಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಆಂಜನೇಯ ದೇವಾಲಯ ನಿರ್ಮಾಣ ಕಾರ್ಯ ಪುನಾರಂಭವಾಗಿದೆ.

Advertisement

ರಾಜಕೀಯ ಪ್ರತಿಷ್ಠೆಯಿಂದ ಅಡಿಪಾಯ ಹಾಕುವ ವೇಳೆಯೇ ಈ ದೇವಾಲಯ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಚುನಾವಣೆ ಮುಗಿದ ಬಳಿಕ, ಕಳೆದೆರಡು ದಿನಗಳಿಂದ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ದಿನವೇ, ಮುಚಖಂಡಿ ಕ್ರಾಸ್‌ನಲ್ಲಿ ಆಂಜನೇಯ ದೇವಾಲಯ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಲಾಗಿತ್ತು.

ಬಿಜೆಪಿಯ ಮತ್ತು ಹಿಂದೂ ಸಂಘಟನೆಗಳ ಬಹುತೇಕ ಪ್ರಮುಖರು, ಈ ದೇವಾಲಯ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ರಾಜಕೀಯ ವೈಯಕ್ತಿಕ ಪ್ರತಿಷ್ಠೆಯಿಂದ ದೇವಾಲಯ ನಿರ್ಮಾಣ ಕಾರ್ಯವನ್ನು ಪೊಲೀಸರ ಮಧ್ಯ
ಪ್ರವೇಶದಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ದೇವಾಲಯ ಅರ್ಧಕ್ಕೆ ನಿಲ್ಲಿಸಿದ್ದ ವಿಷಯವನ್ನೂ ಕೆಲ ಅಭ್ಯರ್ಥಿಗಳು, ಪ್ರಮುಖ ಟೀಕಾ ವಸ್ತುವನ್ನಾಗಿ ಮಾಡಿದ್ದರು.

ಹಲವರ ದೇಣಿಗೆ: ದೇವಾಲಯ ನಿರ್ಮಾಣಕ್ಕೆ ಓಣಿಯ ಹಿರಿಯರು ಸಮಿತಿ ಮಾಡಿಕೊಂಡಿದ್ದು, ಹಲವರು ದೇಣಿಗೆ ನೀಡಿದ್ದಾರೆ. ಕಬ್ಬಿಣ, ಮರಳು, ಖಡಿ, ಸಿಮೆಂಟ್‌ ಹೀಗೆ ವಿವಿಧ ವಸ್ತುಗಳನ್ನು ದೇಣಿಗೆ ನೀಡುತ್ತಿದ್ದಾರೆ. ಇನ್ನು ನಗರದ ಪ್ರಮುಖರೊಬ್ಬರು, ಆಂಜನೇಯ ಮೂರ್ತಿ ತಯಾರಿಸಿ ಕೊಡುವುದಾಗಿ ವಾಗ್ಧಾನ ನೀಡಿದ್ದಾರೆ. ಹಲವರು, ಹೆಸರು ಹೇಳಿಕೊಳ್ಳದೇ ದೇಣಿಗೆ ನೀಡಿದ್ದಾರೆ ಎಂದು ಸಮಿತಿಯ ಪ್ರಮುಖರೊಬ್ಬರು ಉದಯವಾಣಿಗೆ ತಿಳಿಸಿದರು.

ಪುನಾರಂಭ-ಎಂಸಿಸಿ ಭೇಟಿ: ಮುಚಖಂಡಿ ಕ್ರಾಸ್‌ನ ಆಂಜನೇಯ ದೇವಾಲಯ ನಿರ್ಮಾಣ ಕಾರ್ಯ ಪುನಾರಂಭಗೊಂಡ ಹಿನ್ನೆಲೆಯಲ್ಲಿ ಉದ್ಯಮಿ-ಸಮಾಜ ಸೇವಕ ಮಲ್ಲಿಕಾರ್ಜುನ ಚರಂತಿಮಠ ಅವರು ಭೇಟಿ ನೀಡಿ ಪರಿಶೀಲಿಸಿದರು.

Advertisement

ಸುಂದರ ಮಂದಿರ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಪ್ರಮುಖರಾದ ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ಅರುಣ ಲೋಕಾಪುರ, ನಾಗರಾಜ ಕೆರೂರ ಮುಂತಾದವರು ಉಪಸ್ಥಿತರಿದ್ದರು.

ಕಳೆದ ಮೂರು ವರ್ಷಗಳಿಂದ ದೇವಸ್ಥಾನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಈಗ ಪುನಃ ಆರಂಭಿಸಲಾಗಿದೆ. ಇದಕ್ಕಾಗಿ ಮಾರುತೇಶ್ವರ ಸೇವಾ ಸಮಿತಿ ಎಂಬ ಟ್ರಸ್ಟ್‌ ರಚಿಸಿದ್ದು, ಹಿರಿಯರು ಟ್ರಸ್ಟ್‌ನಲ್ಲಿದ್ದಾರೆ. ಸುಮಾರು 20ರಿಂದ 25 ಲಕ್ಷ ಖರ್ಚು ಆಗಲಿದೆ. ಈಗಾಗಲೇ ನಗದು ರೂಪದಲ್ಲಿ 4ರಿಂದ 5 ಲಕ್ಷ ಸಂಗ್ರಹವಾಗಿದೆ. ಇದಕ್ಕೆ ಎಲ್ಲ ರೀತಿಯ ಲೆಕ್ಕ-ಪತ್ರವಿದೆ. ದಾನಿಗಳು ದೇವಾಲಯ ನಿರ್ಮಾಣಕ್ಕೆ ನೆರವು ನೀಡಬಹುದು.
ಬಸವರಾಜ ಕಟಗೇರಿ,
ನಗರಸಭೆ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next