Advertisement

ಬಾಗಲಕೋಟ: ಪಾಳುಬಿದ್ದ ಕೆರೂರ ಪೊಲೀಸ್‌ ವಸತಿಗೃಹಗಳು

04:21 PM Jun 12, 2023 | Team Udayavani |

ಕೆರೂರ: ಕಳ್ಳರಿಂದ ರಕ್ಷಿಸಿ ಜನರು ನಿರ್ಭೀತರಾಗಿ ಬದುಕು ಸಾಗಿಸಲು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕುಟುಂಬಗಳು ವಾಸಿಸಲು ಸುಸಜ್ಜಿತ ವಸತಿ ಗೃಹಗಳು ಇಲ್ಲದೆ ಜೀವನದ ಅಭದ್ರತೆ ಕಾಡುತ್ತಿದೆ.

Advertisement

ಪಟ್ಟಣದ ಪೊಲೀಸ್‌ ಇಲಾಖೆಯ ವಸತಿಗೃಹಗಳಲ್ಲಿ ವಾಸಿಸುವ ಸಿಬ್ಬಂದಿ ಕುಟುಂಬದ ಗೋಳಾಟ ಹೇಳತೀರದು. ವಸತಿಗೃಹಗಳ ಸುತ್ತ ಕಸ ಕಡ್ಡಿ ಕೊಳಚೆ ಸಂಗ್ರಹವಾಗಿ ಜಾಲಿ ಕಂಟಿ-ಕಸ ಸೇರಿದಂತೆ ವಿಷಕಾರಿ ಗಿಡಗಂಟಿಗಳು ಬೆಳೆದಿವೆ. ಸೊಳ್ಳೆಗಳು ಹುಳು-ಹುಪ್ಪಡಿಗಳಿಗಂತೂ ಲೆಕ್ಕವೇ ಇಲ್ಲ. ಇದರಿಂದ ಪೊಲೀಸ್‌ ಕುಟುಂಬದವರ ಬದುಕು ದುಸ್ತಿರವಾಗಿದೆ.

ಮಾರಕ ರೋಗಗಳ ಆತಂಕ: ವಸತಿಗೃಹಗಳ ಪಕ್ಕ ಹೊಲಸು ಸಂಗ್ರಹವಾಗಿ ನಾಯಿ ಹಂದಿಗಳ ವಾಸಸ್ಥಾನವಾಗಿ ರೋಗ ರುಜಿನಗಳು ಹರಡುವ ಕೇಂದ್ರವಾಗಿ ಪರಿಣಮಿಸಿದೆ. ಅನೇಕ ಮನೆಗಳು ಬಳಕೆಗೆ ಇಲ್ಲದೆ ಪಾಳು ಬಿದ್ದು ಬೂತ ಬಂಗಲೆಗಳಾಗಿ ಮಾರ್ಪಟ್ಟಿದ್ದು, ಇಲ್ಲಿ ವಾಸಿಸುವ ಪೊಲೀಸ್‌ ಕುಟುಂಬಗಳು ಆತಂಕದಲ್ಲಿವೆ. ವಸತಿ ಗೃಹಗಳಿಗೆ ಎಲ್ಲ ಕಡೆ ಕಾಂಪೌಂಡ್‌ ಗೋಡೆಗಳಿಲ್ಲ. ಮುಳ್ಳು ಕಂಟಿ ಜಾಲಿ ಗಿಡಗಳೇ ಕಾಂಪೌಂಡ್‌ ಆಗಿ ಮಾರ್ಪಟ್ಟಿವೆ. ಅಲ್ಲಿರುವ ವಾತಾವರಣ ರಾತ್ರಿ ಭಯ ಹುಟ್ಟಿಸುವಂತಿದೆ. ಶೌಚಾಲಯಗಳು ಬಳಕೆಗೆ ಬಾರದೆ ದುರ್ವಾಸನೆ ಹೊಡೆಯುತ್ತಿವೆ. ಮಕ್ಕಳಿಗೆ ಸ್ವತ್ಛಂದ ವಾತಾವರಣವಿಲ್ಲ. ಪರಿಸರ ಹದಗೆಟ್ಟಿದ್ದು, ವಿವಿಧ ತರಹದ ರೋಗಗಳಿಗೆ ಆಹ್ವಾನ ನೀಡುವಂತಿದೆ.

ಸೋರುತ್ತಿರುವ ವಸತಿಗೃಹಗಳು: ಬ್ರಿಟಿಷ್‌ ಸರಕಾರದ ಅವ ಧಿ 1944ರಲ್ಲಿ ಪೊಲೀಸರ ವಸತಿಗೃಹಗಳು ನಿರ್ಮಾಣವಾಗಿದ್ದು, ಅವುಗಳೆಲ್ಲಾ ಹಂಚಿನ ಮೇಲ್ಛಾವಣಿ ಹೊಂದಿದ್ದವು. ಅವುಗಳೆಲ್ಲ ಒಡೆದು ಹೋಗಿವೆ. ಕೆಲ ವರ್ಷಗಳ ಹಿಂದೆ ಅವುಗಳನ್ನು ತೆಗೆದು ಸಿಮೆಂಟ್‌ ತಗಡಿನ ಹೊದಿಕೆ ನಿರ್ಮಿಸಲಾಗಿತ್ತು. ಮಂಗಗಳ ಹಾವಳಿ ಹಾಗೂ ಪ್ರಕೃತಿ ವಿಕೋಪದಿಂದ ರಂದ್ರಗಳು ಬಿದ್ದಿವೆ. ಕೆಲ ತಗಡುಗಳು ಹಾರಿಹೋಗಿವೆ. ಮಳೆಗಾಲದಲ್ಲಿ ಎಲ್ಲ ವಸತಿಗೃಹಗಳು ಸೋರುತ್ತವೆ. ಕಿಟಕಿಗಳು ಮುರಿದುಹೋಗಿದ್ದು ಕಸಕಡ್ಡಿ ಮಳೆ ನೀರು ಒಳಗೆ ಬರುತ್ತವ ಆತಂಕದಿಂದ ರಟ್ಟು ಅಂಟಿಸಲಾಗಿದೆ.

ಹೀಗಾಗಿ ಪೊಲೀಸ್‌ ಕುಟುಂಬಗಳ ಬದುಕು ಸಂಕಷ್ಟಮಯವಾಗಿದೆ. ನೂತನ ಪೊಲೀಸ್‌ ಕಚೇರಿ ಹಿಂಬಾಗ 30 ವಸತಿಗೃಹಗಳಲ್ಲಿದ್ದು ವಾಸಿಸಲು ಯೋಗ್ಯವಿಲ್ಲ. ಆದರೂ 12 ಮನೆಗಳು ಮಾತ್ರ ಅನಿವಾರ್ಯವಾಗಿ ವಾಸವಾಗಿದ್ದಾರೆ. ಇನ್ನುಳಿದ
ಪೊಲೀಸ್‌ ಸಿಬ್ಬಂದಿ ಪಟ್ಟಣದ ಬೇರೆಡೆ ಬಾಡಿಗೆ ಮನೆಗಳಲ್ಲಿ ಅಧಿಕ ಬಾಡಿಗೆ ನೀಡಿ ವಾಸಿಸುತ್ತಿದ್ದಾರೆ. ಈ ಹಿಂದೆ ಕಾರ್ಯನಿರ್ವಹಿಸಿದ ಪಿಎಸ್‌ಐ ಚಂದ್ರಶೇಖರ ಹೆರಕಲ ಅವರು ರಿಪೇರಿ ಮಾಡಿಸಿ ಮಿಂಚುವಂತೆ ಮಾಡಿದ್ದರು. ಮಳೆಗಾಲದಲ್ಲಿ ಕಟ್ಟಡ ಸೋರುವುದು ತಪ್ಪಿಲ್ಲ. ರಾತ್ರಿ ಮಳೆಯಾದರೆ ಅಂದು ಜಾಗರಣೆ ಖಚಿತ ಎನ್ನುತ್ತಾರೆ ಅಲ್ಲಿ ವಾಸಿಸುವ ಪೊಲೀಸರು.

Advertisement

ನೂತನ ಕಚೇರಿ ಕಟ್ಟಡಕ್ಕೆ ಪೀಠೊಪಕರಣಗಳ ಅಭಾವ: ಇನ್ನು ನೂತನವಾಗಿ ಎರಡು ಮಹಡಿಯ ಸುವ್ಯವಸ್ಥಿತ ಸುಂದರ ಬೃಹತ್‌ ಕಚೇರಿಯ ಕಟ್ಟಡ ನಿರ್ಮಾಣವಾಗಿದ್ದು, ಹೊಸ ಕಚೇರಿ ಹೆಚ್ಚಿನ ಪೀಠೊಪಕರಣಗಳ ಅವಶ್ಯಕವಾಗಿವೆ. ಇಲಾಖೆಯ ಮೇಲಧಿಕಾರಿಗಳು ಹೊಸ ಪೀಠೊಪಕರಣಗಳ ಒದಗಿಸುವ ಕಾರ್ಯ ಮಾಡಬೇಕಿದೆ.

ಪೊಲೀಸ್‌ ವಸತಿ ಗೃಹಗಳು ಹಳೆಯ ಕಟ್ಟಡಗಳಾಗಿದ್ದು, ಮೇಲ್ಛಾವಣಿಗಳು ಒಡೆದಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಸರಕಾರದ ಅನುದಾನ ನಿರೀಕ್ಷೆಯಲ್ಲಿದ್ದೇವೆ. ವಸತಿಗೃಹಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮೇಲಧಿಕಾರಿಗಳಲ್ಲಿ
ಮನವಿ ಮಾಡಲಾಗುವುದು.
ಕುಮಾರ ಹಿತ್ತಲಮನಿ,
ಪಿಎಸ್‌ಐ ಕೆರೂರ ಪೊಲೀಸ್‌ ಠಾಣೆ

ಶ್ರೀಧರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next