Advertisement

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

09:04 PM Dec 26, 2024 | Team Udayavani |

ಮಹಾಲಿಂಗಪುರ: ಡಿ.24ರ ಸಂಜೆ ಕಾಶ್ಮೀರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ಕೆಂಗೇರಿಮಡ್ಡಿಯ ಹುತಾತ್ಮ ಯೋಧ ಮಹೇಶ ನಾಗಪ್ಪ ಮರೆಗೊಂಡ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ 4 ಗಂಟೆಗೆ ನೆರವೇರಿತು.

Advertisement

ಗುರುವಾರ ಮಧ್ಯಾಹ್ನ 12.40 ರ ಸುಮಾರಿಗೆ ಬೆಳಗಾವಿ ಮೂಲಕ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನು ಪಟ್ಟಣದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಅಧಿಕಾರಿಗಳು, ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು. ಯೋಧನ ಪತ್ನಿ ಲಕ್ಷ್ಮೀ ತಾಯಿ ಶಾರದಾ, ತಮ್ಮ ಸಂತೋಷ, ತಂಗಿ ವಿದ್ಯಾಶ್ರೀ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಾಲಿಂಗಪುರ ಸುತ್ತಮುತ್ತಲಿನ ಗ್ರಾಮಗಳ ಮಾಜಿ ಸೈನಿಕ ಸಂಘಟನೆ ಸದಸ್ಯರು ಅಂತಿಮ ನಮನ ಸಲ್ಲಿಸಿದರು.

ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಮಹಾತ್ಮಾ ಗಾಂಧಿ ಕ್ರೀಡಾಂಗಣದಿಂದ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ್, ನಡುಚೌಕಿ, ಡಬಲ್ ರಸ್ತೆ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಭಗೀರಥ ವೃತ್ತದ ಮೂಲಕ ಹಾಯ್ದು ಕೆಂಗೇರಿಮಡ್ಡಿವರೆಗೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಜನರು ಜಯಘೋಷಣೆಗಳನ್ನು ಮೊಳಗಿಸಿದರು.

ಕೆಂಗೇರಿಮಡ್ಡಿಯ ಸರ್ಕಾರಿ ಜಾಗದಲ್ಲಿ ಸೇನೆಯ ಸೈನಿಕರು ಮೂರು ಬಾರಿ ಕುಶಾಲ ತೋಪು ಸಿಡಿಸಿ ಗೌರವ ಸಲ್ಲಿಸಿದರು. ನಂತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಗಿರೀಶ ಸ್ವಾದಿ, ಸಿಪಿಐ ಸಂಜೀವ ಬಳೆಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಮಾಜಿ ಅಧ್ಯಕ್ಷರಾದ ಬಸವರಾಜ ರಾಯರ, ಬಸವರಾಜ ಹಿಟ್ಟಿನಮಠ, ಪುರಸಭೆ ಸದಸ್ಯರಾದ ಪ್ರಲ್ಹಾದ ಸಣ್ಣಕ್ಕಿ, ರವಿ ಜವಳಗಿ, ಬಸವರಾಜ ಚಮಕೇರಿ, ಸರಸ್ವತಿ ರಾಮೋಜಿ, ಲಕ್ಷ್ಮೀ ಮುದ್ದಾಪೂರ, ಶೇಖರ ಅಂಗಡಿ, ಬಸವರಾಜ ಯರಗಟ್ಟಿ, ಮುಸ್ತಕ ಚಿಕ್ಕೋಡಿ, ಬಲವಂತಗೌಡ ಪಾಟೀಲ ಸೇರಿದಂತೆ ಹಲವರು ಅಂತಿಮ ದರ್ಶನ, ಮೆರವಣಿಗೆ ಹಾಗೂ ಅಂತ್ಯಕ್ರೀಯೆಯಲ್ಲಿ ಭಾಗವಹಿಸಿದ್ದರು.

ಕುಟುಂಬಸ್ಥರಿಗೆ ಸಾಂತ್ವನ :
ಪಾರ್ಥೀವ ಶರೀರದೊಂದಿಗೆ ಆಗಮಿಸಿದ್ದ ಸೇನಾ ಅಧಿಕಾರಿಗಳು, ಡಿಸಿ, ಎಸ್‌ಪಿ, ಸಂಸದರು, ಶಾಸಕರು ಹುತಾತ್ಮ ಯೋಧನ ಪತ್ನಿ, ತಾಯಿಗೆ ಸಾಂತ್ವನ ಹೇಳಿದರು.

Advertisement

ಶಾಲಾ ಮಕ್ಕಳಿಂದ ಹುತಾತ್ಮ ಯೋಧನಿಗೆ ನಮನ: ಗುರುವಾರ ಸಂಜೆ ಪಟ್ಟಣದಲ್ಲಿ ಜರುಗಿದ ಹುತಾತ್ಮ ಯೋಧ ಮಹೇಶ ನಾಗಪ್ಪ ಮರೆಗೊಂಡ ಅವರ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಪಟ್ಟಣದ ಬಸವಾನಂದ ಶಾಲೆಯ ಮಕ್ಕಳು ಜವಳಿ ಬಜಾರ್‌ನಿಂದ ಕೇಂಗೇರಿಮಡ್ಡಿಯಲ್ಲಿ ಜರುಗಿದ ಅಂತ್ಯ ಸಂಸ್ಕಾರದ ಸ್ಥಳದವರೆಗೆ ಸೈನಿಕ ಸಮವಸ್ತ್ರದಲ್ಲಿ ಭಾಗವಹಿಸಿ, ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಪಟ್ಟಣದ ಜೆಸಿ ಆಂಗ್ಲ ಮಾಧ್ಯಮ ಶಾಲೆ, ಉರ್ದು ಶಾಲೆಯ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next