Advertisement

Bagalkot: ಜಿಲ್ಲೆಯಲ್ಲಿ 125 ವರ್ಷಗಳಲ್ಲೇ ಅತಿ ದೊಡ್ಡ ಬರ!

06:23 PM Sep 15, 2023 | Team Udayavani |

ಬಾಗಲಕೋಟೆ: ಮಳೆಗಾಲದಲ್ಲೂ ಮುಂಗಾರು ಮಳೆ ಬಾರದೇ ತೀವ್ರ ಬರ ಎದುರಾಗಿದ್ದು, ಸರ್ಕಾರದ ಸಮಗ್ರ ಸಮೀಕ್ಷೆಯಲ್ಲಿ ಇದು 125 ವರ್ಷಗಳಲ್ಲೇ ಅತಿ ಭೀಕರ ಬರ ಎಂದು ಪರಿಗಣಿಸಲಾಗಿದೆ.

Advertisement

ಹೌದು, ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಬಾರಿ ಬರ ಎದುರಾಗಿದೆ. ಬರ ಘೋಷಣೆಯೂ ಆಗಿದೆ. ಬರ ಪರಿಹಾರ ಕಾಮಗಾರಿಗಳನ್ನು ಆಯಾ ಕಾಲಕ್ಕೆ ಕೈಗೊಳ್ಳಲಾಗಿದೆ. ಆದರೆ, ಜಿಲ್ಲೆಯ 9 ತಾಲೂಕುಗಳಲ್ಲಿ ಬರ ಸಮೀಕ್ಷೆ ಕೈಗೊಂಡಿದ್ದು, ಇದು 125 ವರ್ಷಗಳಲ್ಲೇ ಅತಿ ಭೀಕರವಾಗಿದೆ ಎನ್ನಲಾಗಿದೆ. ರಾಜ್ಯ ಸರ್ಕಾರ,ಎರಡು ಹಂತದಲ್ಲಿ ಬರ ಪೀಡಿತ ತಾಲೂಕು ಘೋಷಣೆ ಮಾಡಿದ್ದು, ಅತೀ ತೀವ್ರ ಬರ ಇರುವ ಹಾಗೂ ಸಾಧಾರಣಾ ಬರ ಇರುವ ತಾಲೂಕುಗಳೆಂದು ವಿಂಗಡಿಸಿದೆ. ಅತೀ ತೀವ್ರ ಬರ ಇರುವ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ 9 ತಾಲೂಕು ಒಳಗೊಂಡಿವೆ.

ಎರಡೂ ಪಟ್ಟಿಯಲ್ಲಿ ತೇರದಾಳ ಇಲ್ಲ: ಸರ್ಕಾರ ಘೋಷಿಸಿದ ತೀವ್ರ ಹಾಗೂ ಸಾಧಾರಣ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬಾಗಲಕೋಟೆ, ಬಾದಾಮಿ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್ಲ ಹಾಗೂ ರಬಕವಿ-ಬನಹಟ್ಟಿ ಸೇರಿ 9 ತಾಲೂಕು ಸ್ಥಾನ ಪಡೆದಿವೆ.

ಆದರೆ, ಈ ಸಾಧಾರಣ ಹಾಗೂ ತೀವ್ರ ಬರ ಇರುವ ಪಟ್ಟಿನಲ್ಲಿ ಹೊಸದಾಗಿ ಘೋಷಣೆಯಾದ ತೇರದಾಳ ತಾಲೂಕು ಪಟ್ಟಿಯಲ್ಲಿ ಸೇರಿಲ್ಲ. ಹೀಗಾಗಿ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತೇರದಾಳ ತಾಲೂಕನ್ನೂ ಸೇರಿಸಬೇಕು ಎಂದು ಹೊಸ ತಾಲೂಕಿನ ರೈತರು ಆಗ್ರಹಿಸಿದ್ದಾರೆ.

ರೈತರಿಗೆ ಪರಿಹಾರಧನ ನೀಡಿ: ಜಿಲ್ಲೆಯಲ್ಲಿ ಮುಂಗಾರು ಮಳೆಯನ್ನೇ ನಂಬಿ ರೈತರು, ಭೂಮಿ ಹದಗೊಳಿಸಿ, ಬಿತ್ತನೆ ಬೀತ, ರಸಗೊಬ್ಬರ ಖರೀದಿಸಿದ್ದರು. ಇನ್ನೂ ಕೆಲ ರೈತರು ಬಿತ್ತನೆ ಕೂಡ ಮಾಡಿದ್ದರು. ತೇವಾಂಶ ಕೊರತೆಯಿಂದ ಬಿತ್ತಿದ ಬೆಳೆ ಕೈಗೆ ಬಂದಿಲ್ಲ. ಹೀಗಾಗಿ ರೈತರು ತೀವ್ರ ಸಂಕಷ್ಟ ಎದುರಿಸಿದ್ದಾರೆ. ಕೂಡಲೇ ರೈತರಿಗೆ ಮುಂಗಾರು ಹಂಗಾಮಿಗೆ ಪರಿಹಾರಧನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Advertisement

2.27 ಲಕ್ಷ ರೈತರು: ಜಿಲ್ಲೆಯಲ್ಲಿ ಬಿತ್ತನೆಗೆ ಯೋಗ್ಯವಾದ 4,87,116. 14 ಹೆಕ್ಟೇರ್‌ ಭೂಮಿ ಇದ್ದು, 2,27,731 ಜನ ರೈತರಿದ್ದಾರೆ. ಅದರಲ್ಲಿ 69,742 ಅತಿ ಸಣ್ಣ ರೈತರು, 75,345 ಸಣ್ಣ ರೈತರು ಸೇರಿ ಸಣ್ಣ ಮತ್ತು ಅತೀ ಸಣ್ಣ ರೈತರು 1,45,087 ಇದ್ದಾರೆ. ಇತರೆ ರೈತರು 82,644 ಇದ್ದಾರೆ.

ಸರ್ಕಾರ ಜಿಲ್ಲೆಯನ್ನು ತೀವ್ರ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದೆ. ಕೂಡಲೇ ಬರ ಪರಿಹಾರ ಕಾರ್ಯ ಕೈಗೊಳ್ಳಲು, ಜಿಲ್ಲಾಡಳಿತಕ್ಕೆ ಮಾರ್ಗಸೂಚಿ ಬರಲಿವೆ. ಬಳಿಕ ಜಿಲ್ಲೆಯಾದ್ಯಂತ ಬರ ಸಂಬಂಧಿ ಕಾರ್ಯ ಕೈಗೊಳ್ಳಲಾಗುವುದು.
*ಆರ್‌.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next