ಬಾಗಲಕೋಟೆ: ರಾತ್ರಿ ಹೊತ್ತು ಮನೆಗಳ ಕಳ್ಳತನವಾಗದಿರಲಿ ಎಂದು ಪೊಲೀಸರು, ಗುರ್ಖಾಗಳು ಗಸ್ತು ತಿರುಗುವುದು ಸಾಮಾನ್ಯ. ಅದು ಅವರ ಕರ್ತವ್ಯ ಕೂಡ. ಆದರೆ, ಈ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರು, ತಮ್ಮ ಶಾಲಾ ಮಕ್ಕಳ ಫಲಿತಾಂಶ ವೃದ್ಧಿಗಾಗಿ ಗಸ್ತು ತಿರುಗುತ್ತಾರೆ.
ಹೌದು, ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರ ಈ ಕಾರ್ಯ, ಜಿಲ್ಲೆಗೆ ಮಾದರಿಯಾಗಿದೆ. ಎಸ್ಸೆಸ್ಸೆಲ್ಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜತೆಗೆ, ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು, ಕೇವಲ ಪರೀಕ್ಷೆಯ ವೇಳೆ ತಯಾರಿ ಮಾಡುವ ಬದಲು, ಇಡೀ ವರ್ಷ, ವಿವಿಧ ಚಟುವಟಿಕೆಗಳ ಮೂಲಕ ತಯಾರಿ ನಡೆಸುತ್ತಾರೆ.
ಒಂದು ವರ್ಷ ತೋಟ-ಮನೆ ಕೆಲಸ ಬೇಡ: ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಎಲ್ಲ ರೀತಿಯ ಅನುಕೂಲ ಇರುತ್ತದೆ. ಅಲ್ಲದೇ ಸಿಟಿ ಮಕ್ಕಳು, ತಂದೆ-ತಾಯಿಂದಿರ ಅಡುಗೆ ವಿಷಯದಲ್ಲಿ ಬಿಟ್ಟರೆ, ಹೊಲ-ಮನಿ ವಿಷಯದಲ್ಲಿ ಅಷ್ಟೊಂದು ಕೆಲಸ ಇರಲ್ಲ. ಆದರೆ, ಗ್ರಾಮೀಣ ಭಾಗದ ಮಕ್ಕಳು, ನಿತ್ಯ ಶಾಲೆಗೆ ಹೋಗುವ ಮೊದಲು, ಶಾಯಿಯಿಂದ ಬಂದ ಬಳಿಕ ಹೊಲದಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಜತೆಗೆ, ಮನೆಯಲ್ಲೂ ಕೆಲಸ ಮಾಡಲೇಬೇಕಾಗುತ್ತದೆ.
ಅದರಲ್ಲೂ ಹೆಣ್ಣು ಮಕ್ಕಳಿಗೆದ್ದರೆ, ಕಸ-ಮುಸುರೆ ಅಂತ ಹಲವು ಕೆಲಸದ ಜವಾಬ್ದಾರಿ ಇರುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಮಕ್ಕಳ ಓದಿಗೆ ಸರ್ವ ರೀತಿಯ ಸ್ವತಂತ್ರ ಇರಲ್ಲ. ಇದನ್ನು ಮನಗಂಡ, ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಮೊದಲು ತಾಯಂದಿರ ಸಭೆ ನಡೆಸಿ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮನೆ, ಹೊಲದ ಕೆಲಸ ಹಚ್ಚದಂತೆ ಮನವೋಲಿಸುವ ಕೆಲಸ ಮಾಡಿದ್ದಾರೆ. ಬಳಿಕ, ಪಾಲಕರ ಸಭೆ ನಡೆಸಿ, ನಿತ್ಯ ಶಾಲೆಗೆ ಕಳುಹಿಸಲು ಪ್ರೇರೇಪಿಸಿದ್ದಾರೆ. ಇದರ ಫಲವಾಗಿ, ಶಾಲೆಗೆ ಗೈರಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮುಖ್ಯವಾಗಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸುವವರೆಗೂ ಒಂದು ವರ್ಷ, ಮನೆ-ಹೊಲದ ಕೆಲಸಕ್ಕೆ ಒತ್ತಾಯ ಮಾಡಬೇಡಿ ಎಂದೂ ಕೇಳಿಕೊಂಡಿದ್ದಾರೆ.
ಏನಿದು ರಾತ್ರಿ ಗಸ್ತು: ಇಷ್ಟನ್ನೇ ಮಾಡಿ, ಇಲ್ಲಿನ ಶಿಕ್ಷಕರು ಸುಮ್ಮನೆ ಕುಳಿತಿಲ್ಲ. ಜತೆಗೆ ಎಸ್ಸೆಸ್ಸೆಲ್ಸಿ ಮಕ್ಕಳ ಮನೆ-ತೋಟದ ಮನೆಗಳ ವಿಳಾಸ ಪಡೆಯುತ್ತಾರೆ. ಪ್ರತಿದಿನ ಎರಡು ಬ್ಯಾಚ್‌ನಲ್ಲಿ (ರಾತ್ರಿ 8ರಿಂದ 10ಗಂಟೆಯೊಳಗೆ ಮತ್ತು ನಸುಕಿನ 4;30ರಿಂದ 5-20ರೊಳಗೆ) ಮಕ್ಕಳ ಮನೆಗೆ ಭೇಟಿ ನೀಡಿ, ಅವರಿಗೆ ಕಠಿಣ ವಿಷಯ ಕುರಿತು ಚರ್ಚೆ ಮಾಡುತ್ತಾರೆ. ಮುಖ್ಯವಾಗಿ ನಸುಕಿನಲ್ಲಿ ಮನೆ ಮನೆಗೆ ತಿರುಗಿ, ಅಧ್ಯಯನಕ್ಕಾಗಿ ಎಚ್ಚರಗೊಳಿಸುತ್ತಾರೆ. ತಮ್ಮ ಶಿಕ್ಷಕರೇ ಮನೆಗೆ ಬಂದು, ನಸುಕಿನಲ್ಲಿ ಎಬ್ಬಿಸುವ ಚಟುವಟಿಕೆಯಿಂದ ಮಕ್ಕಳು, ಪಾಲಕರಿಗೂ ಭಕ್ತಿ-ಗೌರವದ ಜತೆಗೆ ಇನ್ನಷ್ಟು ಪ್ರೇರಣಾದಾಯಕವಾಗಿ ಅಧ್ಯಯನದಲ್ಲಿ
ತೊಡಗಲು ಅನುಕೂಲವಾಗಿದೆ.
ಈ ಶಾಲೆಯ ಮುಖ್ಯಾ ಧ್ಯಾಪಕ ನಾರಾಯಣ ಶಾಸ್ತ್ರಿ,ಗಣಿತ-ಸಂಗಮೇಶ ಉಟಗಿ, ಇಂಗ್ಲಿಷ್-ಸಂಜೀವ ಜಂಬೂರೆ, ಸಮಾಜ ವಿಜ್ಞಾನ-ಸವಿತಾ ಬೆನಕಟ್ಟಿ, ಕನ್ನಡ-ಶಾರದಾ ಮಠ, ವಿಜ್ಞಾನ-ಆಸೀಫಾಬಾನು ಮೋಮಿನ, ಹಿಂದಿ- ಶಕುಂತಲಾ ಬಿರಾದಾರ, ದೈಹಿಕ ಶಿಕ್ಷಣ-ಬಾಹುಬಲಿ ಮುತ್ತೂರ, ಚಿತ್ರಕಲೆ-ಚಂದ್ರಕಾಂತ ಪೊಲೀಸ್ ಮುಂತಾದವರ ಒಗ್ಗಟ್ಟಿನ, ಮಕ್ಕಳಿಗೆ ತೋರುವ ವಿಶೇಷ ಆಸಕ್ತಿಯಿಂದ ಪ್ರತಿವರ್ಷ ಇಲ್ಲಿನ ಫಲಿತಾಂಶವೂ ವೃದ್ಧಿಯಾಗುತ್ತ ಬಂದಿದೆ. ಇತರ ಸರ್ಕಾರಿ ಶಾಲೆಗಳಿಗೆ ಮಾದರಿ ಕಾರ್ಯ ಎಂದು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಕುಂಬಾರಹಳ್ಳ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶಕ್ಕಾಗಿ ವಿಶೇಷ ಆಸಕ್ತಿ ವಹಿಸಿ, ಪ್ರತಿ ಮಗುವಿನ ಮನೆಗೆ ಭೇಟಿ ನೀಡುತ್ತಿದ್ದಾರೆ. ಜತೆಗೆ ನಸುಕಿನಲ್ಲಿ ಪುನಃ ಮಕ್ಕಳ ಮನೆಗೆ ಭೇಟಿ ಕೊಟ್ಟು, ಅವರನ್ನು ಓದಿಗಾಗಿ ಎಚ್ಚರಗೊಳಿಸುವ ಕಾರ್ಯವೂ ವಿಶೇಷ. ಅಲ್ಲದೇ ಜಿಲ್ಲೆಯಾದ್ಯಂತ ಈ ವರ್ಷ ಶೈಕ್ಷಣಿಕ ಫಲಿತಾಂಶ ವೃದ್ಧಿಗೆ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.
ಬಿ.ಕೆ. ನಂದನೂರ, ಡಿಡಿಪಿಐ, ಶಾಲಾ ಶಿಕ್ಷಣ ಇಲಾಖೆ
*ಶ್ರೀಶೈಲ ಕೆ. ಬಿರಾದಾರ