Advertisement

ಚುನಾವಣೆ ಪ್ರಚಾರದಲ್ಲೂ ಕೈ-ಕಮಲ ಪೈಪೋಟಿ

01:14 PM Apr 06, 2019 | keerthan |

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ನೇರ ಪೈಪೋಟಿ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಗಳು
ಮತ ಬೇಟೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಗಿಂತ, ಬಿಜೆಪಿ ಪ್ರಚಾರದಲ್ಲಿ ಈಗಾಗಲೇ ಒಂದು ಹೆಜ್ಜೆ ಮುಂದಿದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ವ್ಯಾಪ್ತಿಯಲ್ಲೂ ಬಿಜೆಪಿಯ ಹಾಲಿ-ಮಾಜಿ ಶಾಸಕರ, ಒಂದು ಸುತ್ತಿನ ಪ್ರಚಾರ ಅಂತಿಮ ಹಂತಕ್ಕೆ ಬಂದಿದೆ. ಏ.21ರ ವರೆಗೆ ಬಹಿರಂಗ ಪ್ರಚಾರ ನಡೆಸಲು ಅವಕಾಶವಿದ್ದು, ಅಷ್ಟರೊಳಗೆ, ಮತ್ತೂಂದು ಬಾರಿ ಕ್ಷೇತ್ರದ ಮತದಾರರನ್ನು ಭೇಟಿ ಮಾಡಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ವಿಧಾನಸಭೆ ಕ್ಷೇತ್ರವಾರು ಕ್ಷೇತ್ರ ಸ್ಥಾನಗಳು, ತಾಲೂಕು ಹಾಗೂ ಹೋಬಳಿ ಮಟ್ಟದ ಕೇಂದ್ರ ಸ್ಥಾನಗಳಲ್ಲಿ ಪ್ರಚಾರ ನಡೆಸುತ್ತಿದ್ದರೆ, ಆಯಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ಮನೆ-ಮನೆಗೆ ಪ್ರಚಾರ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

18ಕ್ಕೆ ಮೋದಿ -21ಕ್ಕೆ ಯೋಗಿ: ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏ.18ಕ್ಕೆ ಜಿಲ್ಲೆಗೆ ಆಗಮಿಸುವ ದಿನ ನಿಗದಿಯಾಗಿದೆ. ಆದರೆ, ಅವರ ಬಹಿರಂಗ ಸಮಾವೇಶದ ಸ್ಥಳ ಹಾಗೂ ಸಮಯ ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಪೂರ್ವ ತಯಾರಿಯಲ್ಲಿ ಬಿಜೆಪಿ ಜಿಲ್ಲಾ ಘಟಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಲ್ಲದೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಏ.21ರಂದು ಚುನಾವಣೆ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಬಾಗಲಕೋಟೆ ಉಪ ವಿಭಾಗ ಅಥವಾ ಜಮಖಂಡಿ ಉಪ ವಿಭಾಗದಲ್ಲಿ ಯೋಗಿಯವರ ಕಾರ್ಯಕ್ರಮ ನಡೆಸಬೇಕಾ ಎಂಬ ಗೊಂದಲವಿದ್ದು, ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲೇ ಸಮಾವೇಶ ನಡೆಸುವುದು ಸೂಕ್ತ
ಎಂಬ ತೀರ್ಮಾನವನ್ನು ಕೆಲ ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಿಂದ ಜವಾಬ್ದಾರಿ ಹಂಚಿಕೆ: ಆಯಾ ವಿಧಾನಸಭೆ ಕ್ಷೇತ್ರವಾರು ಹಾಗೂ ಇಡೀ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಕಾಂಗ್ರೆಸ್‌ ಇದೀಗ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯಾದ ಬಳಿಕ ವೀಣಾ ಕಾಶಪ್ಪನವರ ಅವರು ತಮ್ಮದೇ ಪಕ್ಷದ ಹಲವು ಮುಖಂಡರನ್ನು ಭೇಟಿ ಮಾಡಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಇದೀಗ ಪೂರ್ಣಗೊಳಿಸಿ, ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಶುಕ್ರವಾರವಷ್ಟೇ ಪ್ರಮುಖರ ಸಭೆ ನಡೆಸಿ, ಚುನಾವಣೆಯ ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಆಯಾ ಜವಾಬ್ದಾರಿ ಹೊತ್ತ ಪ್ರಮುಖರು, ಪಕ್ಷದ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ ಅಧ್ಯಕ್ಷತೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಸ್ತುವಾರಿ ಒಲ್ಲೆಂದ ಎಸ್ಸಾರ್‌?: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆ ಉಸ್ತುವಾರಿಗಳನ್ನು ಕೆಪಿಸಿಸಿ ನೇಮಕ ಮಾಡಿದೆ. ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ, ಈ ಕ್ಷೇತ್ರದ ಉಸ್ತುವಾರಿಯಾದರೆ, ಕಾಂಗ್ರೆಸ್‌ನಿಂದ ಮಾಜಿ ಸಚಿವ-ಎಂಎಲ್‌ಸಿ ಎಸ್‌.ಆರ್‌. ಪಾಟೀಲರಿಗೆ ಹೊಣೆಗಾರಿಕೆ ನೀಡಲಾಗಿತ್ತು. ಆದರೆ, ಈ ಜವಾಬ್ದಾರಿಯನ್ನು ಎಸ್‌.ಆರ್‌. ಪಾಟೀಲರು ನಿರಾಕರಿಸಿದ್ದು, ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಹೊಣೆಗಾರಿಕೆ ವಹಿಸಲಾಗಿದೆ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಉದಯವಾಣಿಗೆ ತಿಳಿಸಿದರು. ಕಾಂಗ್ರೆಸ್‌ ಜೆಡಿಎಸ್‌ ಅಭ್ಯರ್ಥಿಯಾಗಿರುವ ವೀಣಾ ಕಾಶಪ್ಪನವರ ಅವರು, ಚುನಾವಣೆ ಪ್ರಚಾರಕ್ಕೆ ಸಮಯ ಹೊಂದಾಣಿಕೆಯಲ್ಲೇ ಪ್ರಯಾಸಪಡುತ್ತಿದ್ದಾರೆ ಎನ್ನಲಾಗಿದೆ.

Advertisement

ಪ್ರಿಯಾಂಕಾ-ರಾಹುಲ್‌ ಕರೆಸಲು ಯತ್ನ:
ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ ಪರವಾಗಿ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ರಾಹುಲ್‌ ಗಾಂಧಿ ಅವರಿಗಿಂತ, ಪ್ರಿಯಾಂಕಾ ಅವರನ್ನೇ ಮುಖ್ಯವಾಗಿ ಕರೆಸಬೇಕು ಎಂಬುದು ಕಾಂಗ್ರೆಸ್‌ ನವರ ಪ್ರಯತ್ನವಾಗಿದೆ. ಇಡೀ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ವೀಣಾ ಅವರೊಬ್ಬರೇ ಮಹಿಳಾ ಅಭ್ಯರ್ಥಿಯಾಗಿದ್ದು, ಹೀಗಾಗಿ ಬಾಗಲಕೋಟೆ ಕ್ಷೇತ್ರದ ಮಹಿಳಾ ಅಭ್ಯರ್ಥಿ ಪರ, ಪಕ್ಷದ ಮಹಿಳಾ ನಾಯಕಿಯರು ಪ್ರಚಾರಕ್ಕೆ ಬರಲಿ ಎಂಬುದು ಪಕ್ಷದ ಜಿಲ್ಲಾ ಪ್ರಮುಖರ ಮತ್ತು ಸ್ವತಃ ಅಭ್ಯರ್ಥಿಯ ಒತ್ತಾಯ. ಈ ಕುರಿತು ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಕೆಪಿಸಿಸಿಗೆ ಮನವಿ ಮಾಡಲಾಗಿದೆ ಎನ್ನಲಾಗಿದೆ.

ನಮ್ಮ ಪಕ್ಷದಿಂದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪ್ರಚಾರಕ್ಕೆ ಬರಬೇಕು ಎಂದು ಕೆಪಿಸಿಸಿಗೆ ಕೇಳಿದ್ದೇವೆ. ಮುಖ್ಯವಾಗಿ ಪ್ರಿಯಾಂಕಾ ಗಾಂಧಿ ಅವರ ದಿನಾಂಕ ನಿಗದಿ ಮಾಡಿಸಲು ಹೇಳಿದ್ದೇವೆ. ಮುಂದಿನ ವಾರದಲ್ಲಿ ನಮ್ಮ ಜಿಲ್ಲೆಗೆ ಸಮಯ ಕೊಡುವ ಸಾಧ್ಯತೆ ಇದೆ.
ಎಂ.ಬಿ. ಸೌದಾಗರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಮೈತ್ರಿ ಪಕ್ಷಗಳ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಒಂದು ದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಬರಲಿದ್ದಾರೆ. ಈ ಕುರಿತು ಮನವಿ ಮಾಡಿದ್ದು, ಬರಲು ಒಪ್ಪಿಕೊಂಡಿದ್ದಾರೆ. ಆದರೆ, ದಿನ ನಿಗದಿಯಾಗಿಲ್ಲ. ಅಲ್ಲದೇ ನಮ್ಮ ಪಕ್ಷದ ಹಿರಿಯರಾದ ಬಸವರಾಜ ಹೊರಟ್ಟಿ ಒಂದು ಬಾರಿ ಪ್ರಚಾರ ಮಾಡಿದ್ದು, ಅವರೊಂದಿಗೆ ಎನ್‌.ಎಚ್‌. ಕೋನರಡ್ಡಿ ಅವರು ಬರಲಿದ್ದಾರೆ.
ಎಸ್‌.ಆರ್‌. ನವಲಿಹಿರೇಮಠ, ಜೆಡಿಎಸ್‌ ಜಿಲ್ಲಾಧ್ಯಕ್ಷ

ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವ ದಿನ ನಿಗದಿಯಾಗಿದ್ದು, ಮೋದಿಯವರು ಬಂದರೆ, ಯೋಗಿ ಆದಿತ್ಯನಾಥ ಅವರು ಪ್ರಚಾರಕ್ಕೆ ಬರುವುದು ಅನುಮಾನ. ಇನ್ನೂ ಹಲವು ರಾಷ್ಟ್ರೀಯ ನಾಯಕರನ್ನು ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ, ಪ್ರವಾಸದ ಪಟ್ಟಿ ಬಂದಿಲ್ಲ.
ಸಿದ್ದು ಸವದಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ತೇರದಾಳ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next