Advertisement

Bagalkot Lok Sabha Election: ಬಿಜೆಪಿಗೂ ಎದುರಾಗಿದೆ ಭಿನ್ನಮತ ಬಿಕ್ಕಟ್ಟು!

04:12 PM Apr 10, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಕೊಂಡಿವೆ. ಕಾಂಗ್ರೆಸ್‌ ನಂತೆ ಬಿಜೆಪಿಯಲ್ಲೂ ಭಿನ್ನಮತ ಬಿಕ್ಕಟ್ಟು ಎದುರಾಗಿದೆ.

Advertisement

ಬಿಜೆಪಿ ಅಭ್ಯರ್ಥಿ-ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ತಮ್ಮ ಸ್ವ ತಾಲೂಕಿನಲ್ಲೇ ಭಿನ್ನಮತದ ಬಿಸಿ ಎದುರಾಗಿದೆ. ಹೌದು,
ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಯುವ ಮುಖಂಡ ಮಹಾಂತೇಶ ಮಮದಾಪುರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಮಾರಗೌಡ ಜನಾಲಿ ಸೇರಿದಂತೆ ಹಲವರು, ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಕಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿ ದ್ವೇಷದ ರಾಜಕೀಯ ನಡೆದಿದೆ. ನಮ್ಮ ಪಕ್ಷದ ತತ್ವ-ಸಿದ್ಧಾಂತಕ್ಕೂ ವಿರುದ್ಧ ಬೆಳವಣಿಗೆ ನಡೆದಿವೆ ಎಂದು ಹೇಳಿಕೊಂಡಿದ್ದಾರೆ. ಈ ಅಸಮಾಧಾನ ಯಾವ ಹಂತಕ್ಕೆ ತಲುಪುತ್ತದೆ ಎಂಬ ಆತಂಕ ಕಾರ್ಯಕರ್ತರಲ್ಲಿ ಶುರುವಾಗಿದೆ.

ಜಿಲ್ಲೆಯ ನಾಯಕರು ಹೊರ ಜಿಲ್ಲೆಗೆ: ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಹಾಗೂ ಚುನಾವಣೆ ರಣತಂತ್ರದೊಂದಿಗೆ ಗೆಲ್ಲಬೇಕಾದ ಸ್ಥಳೀಯ ನಾಯಕರ ಒಗ್ಗಟ್ಟು ಅತೀ ಮುಖ್ಯ.  ಇಡೀ ಲೋಕಸಭೆ ಕ್ಷೇತ್ರದಲ್ಲಿ ಹಿರಿ-ಕಿರಿಯ ಕಾರ್ಯಕರ್ತರ ಸಮನ್ವಯದೊಂದಿಗೆ ಚುನಾವಣೆ ಎದುರಿಸಬೇಕಾಗುತ್ತದೆ. ಆದರೆ, ಬಿಜೆಪಿಯಲ್ಲಿ ಇದು ಕಾಣುತ್ತಿಲ್ಲ. ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಅವರ ಇಡೀ ಕುಟುಂಬ ಹಾಗೂ ಅವರ
ಖಾಸಾ ಬೆಂಬಲಿಗರು, ದುರ್ಗದಲ್ಲಿದ್ದಾರೆ.

ಇನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಹಿರಿಯ ಮುಖಂಡರೂ ಆಗಿರುವ ವಿಧಾನಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಅವರಿಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪ್ರಭಾರಿಯಾಗಿ, ಆ ಕ್ಷೇತ್ರದಲ್ಲಿ ಬಿಜಿ ಆಗಿದ್ದಾರೆ. ಈಚೆಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ನಾರಾಯಣಸಾ ಭಾಂಡಗೆ ಅವರಿಗೆ ಪಕ್ಕದ ಕೊಪ್ಪಳ ಜಿಲ್ಲೆಯಲ್ಲಿ ಜವಾಬ್ದಾರಿ ಹೊರಿಸಲಾಗಿದೆ.

ಇನ್ನು ಸದ್ಯ ವಿರೋಧ ಪಕ್ಷದ ಅಧಿಕಾರದಲ್ಲಿರುವ ಎಂಎಲ್‌ಸಿ ಹಣಮಂತ ನಿರಾಣಿ ಮಾತ್ರ, ವಾಯವ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಸುತ್ತಾಡುತ್ತಿದ್ದಾರೆ. ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನರಗುಂದ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಚಿವ ಸಿ.ಸಿ. ಪಾಟೀಲರು, ತಮ್ಮ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿಗೆ ಚುನಾವಣೆ ಹೊಣೆಗಾರಿಕೆ ಹೊರುವ ಸಮರ್ಥ ಅಥವಾ ಸೂಕ್ತ ನಾಯಕರಿಲ್ಲದಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಅತಿಯಾದ ಆತ್ಮ ವಿಶ್ವಾಸವೇ ?: ಬಿಜೆಪಿ ಅಭ್ಯರ್ಥಿ ಸಹಿತ ಕೆಲ ನಾಯಕರಿಗೆ ಗೆಲುವಿನ ಅತಿಯಾದ ಆತ್ಮವಿಶ್ವಾಸ ಇದ್ದಂತಿದೆ. ಕಾಂಗ್ರೆಸ್‌ ಪಾಳೆಯದಲ್ಲಿ ವೀಣಾ ಕಾಶಪ್ಪನವರ ಹೊರತುಪಡಿಸಿದರೆ, ಇತರ ಆಕಾಂಕ್ಷಿಗಳು, ಶಾಸಕರು, ಮಾಜಿ ಸಚಿವರು, ಹಾಲಿ ಸಚಿವರು ಒಗ್ಗಟ್ಟಿನ ತಂತ್ರಗಾರಿಕೆ ನಡೆಸಿದ್ದಾರೆ. 5ನೇ ಬಾರಿ ಗದ್ದಿಗೌಡರನ್ನು ಸೋಲಿಸಲೇಬೇಕೆಂಬ ತ್ರದೊಂದಿಗೆ ಇಡೀ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಮುಖ್ಯವಾಗಿ ಪಕ್ಷಾತೀತವಾಗಿ ಮುನಿಸಿಕೊಂಡ ನಾಯಕರ, ಪರದೆಯ ಹಿಂದೆ ಒಲಿಸಿಕೊಳ್ಳುವ ಪ್ರಯತ್ನವೂ
ನಡೆದಿದೆ. ಇಂತಹ ತಂತ್ರಗಾರಿಕೆ ಎದುರು, ಬಿಜೆಪಿ ಮೋದಿ ಅಲೆ ಎಂಬ ಗುಂಗಿನಲ್ಲಿದ್ದರೆ ಚುನಾವಣೆ ಗೆಲ್ಲೋದು ಕಷ್ಟ ಎಂಬ ಮಾತು ಸಹಜವಾಗಿ ಕೇಳಿ ಬಂದಿದೆ.

ಗೌಡರಿಗೆ ಮೋದಿ ಅಲೆಯೇ ಆಸರೆ !: ಕಳೆದ 2004ರಿಂದ ಸತತ ನಾಲ್ಕು ಬಾರಿ ಗೆದ್ದಿರುವ ಪಿ.ಸಿ. ಗದ್ದಿಗೌಡರ, ತಮ್ಮದೇ ಹಳೆಯ ಶೈಲಿಯಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಜತೆಗೆ ಜೆಡಿಎಸ್‌ ನೊಂದಿಗನ ಹೊಂದಾಣಿಕೆಯ ಲಾಭ ದೊಡ್ಡ ಮಟ್ಟದಲ್ಲಿ ಬರುತ್ತದೆ ಎಂಬ ತಪ್ಪು ಲೆಕ್ಕಾಚಾರದಲ್ಲೂ ಇದ್ದಾರೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಹಲವು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿಗೆ ಒಳ ಹೊಡೆತ
ಬೀಳುವ ಸಾಧ್ಯತೆ ಇದ್ದು, ಅದನ್ನು ನಮ್ಮ ನಾಯಕರು ತಕ್ಷಣ ಸರಿಪಡಿಸಿಕೊಳ್ಳಬೇಕು ಎಂಬ ಒತ್ತಾಯವನ್ನು ಬಿಜೆಪಿ ಕಾರ್ಯಕರ್ತರೊಬ್ಬರು ಮಾಡಿದ್ದಾರೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೂ ಅಜಗಜಾಂತರ ವ್ಯತ್ಯಾಸ ಇರುತ್ತವೆ. ಆದರೆ, ಒಂದು ರಾಷ್ಟ್ರೀಯ ಪಕ್ಷವಾಗಿ ಚುನಾವಣಾ ರಣತಂತ್ರ, ಪಕ್ಷದಲ್ಲಿ ಒಗ್ಗಟ್ಟು, ಇಡೀ ಕ್ಷೇತ್ರದಲ್ಲಿ ಚುನಾವಣೆಯ ಉಸ್ತುವಾರಿ ಹೊರುವ ಹೊಣೆಗಾರಿಕೆ ಇರಲೇಬೇಕು. ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿ ಅದನ್ನು ಸ್ವತಃ ಸಚಿವ ಶಿವಾನಂದ ಪಾಟೀಲರೇ ಹೊತ್ತು ನಿಭಾಯಿಸುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಇಂತಹ ಹೊಣೆಗಾರಿಕೆ ಕಾಣುತ್ತಿಲ್ಲ. ಮೋದಿ ಅಲೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ವಿಶ್ವಾಸದಲ್ಲಿದ್ದಾರೆ. ಜಿಲ್ಲೆಯ ಇನ್ನೂ ಕೆಲ ಕ್ಷೇತ್ರಗಳಲ್ಲಿ ಒಳ ಹೊಡೆತ ನೀಡುವ ಸಾಧ್ಯತೆಯೂ ನಡೆಯುತ್ತಿವೆ. ಇದನ್ನು ಬಿಜೆಪಿಗೆ ಹೇಗೆ ನಿಭಾಯಿಸುತ್ತದೆ ಕಾದು ನೋಡಬೇಕು.

■ ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next