Advertisement

ಪ್ರತ್ಯೇಕ ರಾಜ್ಯಕ್ಕೆ ಬಾಗಲಕೋಟೆ ರಾಜಧಾನಿ

03:01 PM Sep 24, 2018 | Team Udayavani |

ಬಾಗಲಕೋಟೆ: ಮುಳುಗಡೆ ಜಿಲ್ಲೆ ಬಾಗಲಕೋಟೆಯಲ್ಲಿ ರವಿವಾರ ಪ್ರತ್ಯೇಕ ರಾಜ್ಯದ ಕೂಗು ಜೋರಾಗಿತ್ತು. ಕರವೇ ನಾರಾಯಣಗೌಡ ಬಣದ ಪ್ರಬಲ ವಿರೋಧದ ಮಧ್ಯೆಯೂ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಐದು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ವಿಶೇಷ ಅಂದರೆ, ಈ ಪ್ರತ್ಯೇಕತೆ ಸಭೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಯ ಪ್ರಮುಖರು ಆಗಮಿಸಿ, ಅಚ್ಚರಿ ಮೂಡಿಸಿದರು.

Advertisement

ಹೌದು, ರವಿವಾರ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿಯಿಂದ ಪ್ರಮುಖ ಸಭೆ ಆಯೋಜಿಸಿತ್ತು. ಈ ಸಭೆಗೆ ಕರವೇ ವಿರೋಧಿಸಿ, ಪ್ರಕರಣ ದಾಖಲಿಸುವ ನಿರ್ಣಯಕ್ಕೆ ಬಂದರೆ, ಇತ್ತ ಸಮಿತಿ ಪ್ರತ್ಯೇಕ ರಾಜ್ಯಕ್ಕಾಗಿ ಐದು ನಿರ್ಣಯ ಅಂಗೀಕರಿಸಿ, ಹೊಸ ಧ್ವಜವನ್ನೂ ಘೋಷಿಸಿತು.

ತಾರತಮ್ಯ ಬಯಲು: ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಉತ್ತರ ಮತ್ತು ದಕ್ಷಿಣದ ಅಭಿವೃದ್ಧಿ ಹಾಗೂ ತಾರತಮ್ಯದ ಅಂಕಿ-ಸಂಖ್ಯೆಗಳನ್ನು ಮಂಡಿಸಲಾಯಿತು. ದಕ್ಷಿಣದಲ್ಲಿ 17 ಜಿಲ್ಲೆಗಳಿದ್ದರೆ, ಉತ್ತರದಲ್ಲಿ 13 ಜಿಲ್ಲೆಗಳಿವೆ. ಇಲ್ಲಿ ಇನ್ನೂ 4 ರಿಂದ 6 ಜಿಲ್ಲೆ ರಚನೆ ಮಾಡಲು ಅವಕಾಶಗಳಿವೆ. ಒಟ್ಟು 224 ಜನ ಶಾಸಕರಲ್ಲಿ ದಕ್ಷಿಣದಲ್ಲಿ 128 ಜನರಿದ್ದರೆ, ಉತ್ತರದಲ್ಲಿ 96 (32 ಜನ ಕಡಿಮೆ) ಶಾಸಕರಿದ್ದಾರೆ. 28 ಜನ ಸಂಸದರಲ್ಲಿ ದಕ್ಷಿಣದಲ್ಲಿ 16, ಉತ್ತರದಲ್ಲಿ 12 ಸಂಸದರಿದ್ದು, 4 ಕ್ಷೇತ್ರ ಕಡಿಮೆ ಇವೆ. 75 ಜನ ವಿಧಾನ ಪರಿಷತ್‌ ಸದಸ್ಯರಲ್ಲಿ ದಕ್ಷಿಣದಲ್ಲಿ 53 ಜನರಿದ್ದರೆ, ಉತ್ತರದಲ್ಲಿ 22 ಎಂಎಲ್‌ಸಿಗಳಿದ್ದಾರೆ. ಒಟ್ಟು 12 ಜನ ರಾಜ್ಯಸಭೆ ಸದಸ್ಯರಲ್ಲಿ ದಕ್ಷಿಣದಲ್ಲಿ 10 ಜನರಿದ್ದರೆ, ಉತ್ತರದಲ್ಲಿ ಕೇವಲ ಇಬ್ಬರಿದ್ದಾರೆ.

ಸಂಸದರು, ಶಾಸಕರು, ಎಂಎಲ್‌ಸಿಗಳಿಗೆ ಪ್ರತ್ಯೇಕ ಅನುದಾನ ಇರುತ್ತದೆ. ನಮ್ಮ ಭಾಗದಲ್ಲಿ ಅವರ ಸಂಖ್ಯೆಯೇ ಕಡಿಮೆ ಇದ್ದಾಗ, ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಸಮಿತಿಯ ನಿಲೇಶ ಬನ್ನೂರ ಅವರ ಪ್ರಶ್ನೆಯಾಗಿತ್ತು.

ಪ್ರಮುಖ ಖಾತೆಗಳೂ ಇಲ್ಲ: ಕರ್ನಾಟಕ ಏಕೀಕರಣ ಬಳಿಕ ಈವರೆಗೆ ರಾಜ್ಯವಾಳಿದ ಮುಖ್ಯಮಂತ್ರಿಗಳಲ್ಲಿ 12 ಜನ ದಕ್ಷಿಣದವರು 40 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಉತ್ತರದ 7 ಜನರಿಗೆ ಮುಖ್ಯಮಂತ್ರಿಯ ಅಧಿಕಾರ ಸಿಕ್ಕರೂ ಅವರು ಕೇವಲ 16 ವರ್ಷ ಆಡಳಿತ ನಡೆಸಬೇಕಾಯಿತು.

Advertisement

ಇನ್ನು ಹಣಕಾಸು, ಗೃಹ ಖಾತೆಯಂತಹ ಪ್ರಮುಖ ಇಲಾಖೆಗಳು ಉತ್ತರದವರಿಗೆ ಸಿಗುವುದಿಲ್ಲ. ಈ ಭಾಗದವರನ್ನು ಏಕೆ ಪ್ರಮುಖ ಖಾತೆಗಳಿಗೆ ನೇಮಕ ಮಾಡಲ್ಲ. ಇದು ತಾರತಮ್ಯ ಅಲ್ಲವೇ. ಹೋರಾಟ ತೀವ್ರಗೊಂಡರೆ ಇನ್ನು 7ರಿಂದ 8 ವರ್ಷದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುವುದು ನಿಶ್ಚಿತ. ನಾನೊಬ್ಬ ಕೊಡಗು ಜಿಲ್ಲೆಯವನಾದರೂ, ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವೆ ಎಂದು ಹೈಕೋರ್ಟ್‌ ವಕೀಲ ಪಿ.ಎನ್‌. ಅಮೃತೇಶ ಪ್ರಕಟಿಸಿದರು.

ಸಭೆಗೆ ಬಂದ ಕಾಂಗ್ರೆಸ್‌- ಬಿಜೆಪಿ ಪ್ರಮುಖರು: ಉ.ಕ ಪ್ರತ್ಯೇಕ ರಾಜ್ಯಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ವಿರೋಧಿಸುತ್ತಿವೆ. ಆದರೆ, ಆಯಾ ಪಕ್ಷಗಳ ಕೆಲವರು ವೈಯಕ್ತಿಕ ಬೆಂಬಲ ಕೊಟ್ಟಿದ್ದಾರೆ. ರವಿವಾರದ ಈ ಮಹತ್ವದ ಸಭೆಗೂ ಬಿಜೆಪಿ- ಕಾಂಗ್ರೆಸ್‌ನ ಕೆಲವು ಪ್ರಮುಖರು ಆಗಮಿಸಿದ್ದರು. ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಆಗಿರುವ ವೆಂಕಟಾಚಲಪತಿ ಬಳ್ಳಾರಿ, ಕಾಂಗ್ರೆಸ್‌ ಯುವ ಮುಖಂಡರೂ ಆಗಿರುವ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಶಿವಾನಂದ ಉದಪುಡಿ ಸಭೆಯಲ್ಲಿ ಭಾಗವಹಿಸಿದ್ದರು.

ಇನ್ನು ಬಿಜೆಪಿಯ ಹಿರಿಯ ಮುಖಂಡ, ನಗರಸಭೆ ಮಾಜಿ ಸದಸ್ಯ ರಂಗನಗೌಡ ದಂಡನ್ನವರ ಕೂಡ ಪಾಲ್ಗೊಂಡಿದ್ದರು. ಇವರಲ್ಲದೇ ಬಿಜೆಪಿಯ ಹಲವು ಬೆಂಬಲಿಗರೂ ಸಭೆಯಲ್ಲಿದ್ದರು. ಒಟ್ಟಾರೆ, ರವಿವಾರದ ಸಭೆಯಲ್ಲಿ ಬಾಗಲಕೋಟೆ, ಉತ್ತರ ಕರ್ನಾಟಕ ಹೊಸ ರಾಜ್ಯದ ರಾಜಧಾನಿ ಆಗಬೇಕು ಎಂಬ ಪ್ರಮುಖ ನಿರ್ಣಯ ಹೊರ ಬಿದ್ದಿತು. ಈ ಸಭೆಯಲ್ಲಿ ಇಬ್ಬರು ಪ್ರಮುಖ ಸ್ವಾಮೀಜಿಗಳು ಭಾಗವಹಿಸಿ, ಹೋರಾಟಕ್ಕೆ ಮತ್ತಷ್ಟು ಬಲ ತುಂಬಿಸಿದರು. ಆದರೆ, ಈ ಪ್ರತ್ಯೇಕತೆಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಹಲವರು ಸಭೆಯ ಬಗ್ಗೆ ತಿಳಿದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕ್ರಿ ಎಂದು ಅಭಿಪ್ರಾಯ ಹಂಚಿಕೊಂಡರು.

ಉತ್ತರಕ್ಕೆ ಆದ ಅನ್ಯಾಯದ ಬಗ್ಗೆ ಗೊತ್ತಿಲ್ಲದವರು, ಗೌಡರ ಗುಲಾಮರು ಇಂದಿನ ಸಭೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ರಾಜ್ಯವಾಗಲು ಉತ್ತರಕ್ಕೆ ಎಲ್ಲ ಅರ್ಹತೆ ಇವೆ. ಅಭಿವೃದ್ಧಿಗಾಗಿ ಪ್ರತ್ಯೇಕ ಜಿಲ್ಲೆ, ತಾಲೂಕು ಕೇಳುವವರು, ಪ್ರತ್ಯೇಕ ರಾಜ್ಯಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇಡೀ ದೇಶದಲ್ಲಿ ಕನ್ನಡದ ನಾಡು ಎರಡು ರಾಜ್ಯಗಳಾದರೆ ಕನ್ನಡಿಗರಿಗೇ ಹೆಮ್ಮೆಯಲ್ಲವೆ.
ಎ.ಎ. ದಂಡಿಯಾ, ಉಪಾಧ್ಯಕ್ಷ,
ಉ.ಕ. ಅಭಿವೃದ್ಧಿ ಹೋರಾಟ ಸಮಿತಿ

ಸರ್ಕಾರದ ಪ್ರಮುಖ ಸಚಿವ ಸ್ಥಾನಗಳು ಉತ್ತರಕ್ಕೆ ಸಿಗಲ್ಲ. ಗೃಹ, ಹಣಕಾಸು ಖಾತೆ ಈ ಭಾಗಕ್ಕೆ ಕೊಟ್ಟರೆ, ಈ ತಾರತಮ್ಯ ಏಕೆ ಬರುತ್ತದೆ. ನಿಶ್ಚಿತವಾಗಿ ಇನ್ನು 7ರಿಂದ 8 ವರ್ಷದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿದೆ.
ಪಿ.ಎನ್‌. ಅಮೃತೇಶ,
ಹೈಕೋರ್ಟ್‌ ವಕೀಲ, ಕೊಡಗು.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next