ಬಾಗಲಕೋಟೆ: ನವನಗರದ ಅಂಬೇಡ್ಕರ್ ಭವನದ ಹಿಂಭಾಗದಲ್ಲಿರುವ ಕೋರ ವಿಜ್ಞಾನ ಕೇಂದ್ರದಲ್ಲಿ ರವಿವಾರ ಮಕ್ಕಳು, ಹಿರಿಯರು, ಶಿಕ್ಷಕರು ಸೋಲಾರ ಗ್ಲಾಸ್ ಮೂಲಕ ಗ್ರಹಣ ವೀಕ್ಷಣೆ ಮಾಡಿದರು.
ಸಾರ್ವಜನಿಕರಿಗೆ ಕೋರ ವಿಜ್ಞಾನ ಕೇಂದ್ರದಲ್ಲಿ ಬೆಳಗ್ಗೆ 9.30ರಿಂದ 1.30ರವರೆಗೆ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಭೀತಿ ಹಿನ್ನೆಲೆಯಲ್ಲಿ 10 ವರ್ಷ ಒಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರಿಗೆ ವೀಕ್ಷಣೆ ನಿಬಂರ್ಧಿ ಸಲಾಗಿತ್ತು. ನೂರಾರು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೀಕ್ಷಣೆ ಮಾಡಿದರು.
ಸೂರ್ಯ-ಭೂಮಿ ನಡುವೆ ಚಂದ್ರ ಬರುವ ಅಪರೂಪದ ಖಗೋಳ ವಿಸ್ಮಯ ಸೂರ್ಯಗ್ರಹಣವನ್ನು ಜಿಲ್ಲೆಯ ಜನತೆ ಕೌತಕದಿಂದ ವೀಕ್ಷಣೆ ಮಾಡಿದರು. ಗ್ರಹಣ ಹಿನ್ನೆಲೆ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ ದೇವಿಗೆ ಅಭಿಷೇಕ ಸೇರಿದಂತೆ ಯಥಾ ರೀತಿಯ ಪೂಜಾ ಕಾರ್ಯಕ್ರಮಗಳು ನಡೆದವು. ಸ್ಪರ್ಶ ಮತ್ತು ಮೋಕ್ಷ ಕಾಲದಲ್ಲಿ ಬನಶಂಕರಿ ದೇವಿಗೆ ಜಲಾಭಿಷೇಕ ಮಾಡಲಾಯಿತು. ಈ ವೇಳೆ ಭಕ್ತರಿಗೆ ಗರ್ಭಗುಡಿ ಪ್ರವೇಶ ನಿಷೇಸಲಾಗಿತ್ತು. ಗ್ರಹಣ ಮೋಕ್ಷ ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನವನಗರದ ಶ್ರೀಕೃಷ್ಣ ಮಠದಲ್ಲಿ ಪ್ರಮೋದಾಚಾರ್ಯ ಆಲೂರ, ಸಂತೋಷ ಗದ್ದನಕೇರಿ ನೇತೃತ್ವದಲ್ಲಿ ಹೋಮ ಹವನ ನಡೆಸಲಾಯಿತು. ಹಾಗೂ ಕೂಡಲಸಂಗಮನಾಥ, ಚಿಕ್ಕ ಸಂಗಮನಾಥ, ಮಹಾಕೋಟೇಶ್ವರ ದೇವಸ್ಥಾನ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಜರುಗಿದವು.
ಸಂಪನ್ಮೂಲ ವ್ಯಕ್ತಿಗಳಾದ ಡಾ|ರಾಘವೇಂದ್ರ ಮಿನಾಳ, ಕೇಂದ್ರದ ಸಂಚಾಲಕ ಸಂತೋಷ ಬೆಳಮಕರ ಪ್ರಾತ್ಯಕ್ಷಿಕೆ ಮೂಲಕ ಖಗೋಳ ವಿಸ್ಮಯ ಗ್ರಹಣ ಯಾವ ರೀತಿ ನಡೆಯುತ್ತದೆ ಎನ್ನುವುದರ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಕೇಂದ್ರ ಸಂಚಾಲಕರು ಸಾಮಾಜಿಕ ಜಾಲತಾಣಗಳ ಮೂಲಕ ಸೂರ್ಯ, ಚಂದ್ರರ ಭೂಮಿ ಮೇಲೆ ನಡೆಸುವ ನೆರಳು -ಬೆಳಕಿನ ಆಟದ ಕೂತುಹಲ ಸಂಗತಿಯನ್ನು ವೈಜ್ಞಾನಿಕವಾಗಿ ತಿಳಿಸುವ ಪ್ರಯತ್ನ ಮಾಡಿದರು.