Advertisement

ಬಾಗಲಕೋಟೆ ಜಿಲ್ಲೆಯಲ್ಲಿ ಮಹಾಮಾರಿಗೆ ಇಬ್ಬರು ಬಲಿ

08:59 PM Jun 25, 2020 | Sriram |

ಬಾಗಲಕೋಟೆ : ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಪರಿಶೀಲನೆಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ, ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದ ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ (ಹಿರೇಮ್ಯಾಗೇರಿ) ಗ್ರಾಮದ ವ್ಯಕ್ತಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್-19ದಿಂದ ಮೃತಪಟ್ಟವರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ.

Advertisement

ತಾಲೂಕಿನ ಚಿಕ್ಕಮ್ಯಾಗೇರಿಯ 57 ವರ್ಷದ ಪಿ 10173(ಬಿಜಿಕೆ 155) ವ್ಯಕ್ತಿ, ಹುಬ್ಬಳ್ಳಿ ಮೀರಜ್ ಮಾರ್ಗದ ರೈಲ್ವೆಯಲ್ಲಿ ಟಿಕೆಟ್ ಪರಿಶೀಲನೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಜೂ. 11ರಂದು, ಮರಳಿ ತಮ್ಮೂರಿಗೆ ಬಂದಿದ್ದರು. ಈ ವೇಳೆ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು, ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದರು. ಶಂಕೆಯ ಹಿನ್ನೆಲೆಯಲ್ಲಿ ಅವರ ಗಂಟಲು ಮಾದರಿ ಪರೀಕ್ಷೆ ಮಾಡಿದ್ದು, ಜಿಲ್ಲಾ ಲ್ಯಾಬ್‌ನಲ್ಲಿ ಸೋಂಕಿರುವುದು ಖಚಿತವಾಗಿತ್ತು. ಬಳಿಕ ಬೆಂಗಳೂರಿಗೆ ತಪಾಸಣೆಗೆ ಕಳುಹಿಸಿದ್ದು, ಅಲ್ಲಿಯೂ ಕೋವಿಡ್ ಇರುವುದು ಖಚಿತಪಟ್ಟಿದೆ. ಸಧ್ಯ ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ ಗ್ರಾಮಗಳನ್ನು ಸೀಲಡೌನ್ ಮಾಡಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ 120 ಜನರನ್ನು ಕ್ವಾರಂಟೈನ್ ಮಾಡಿ, ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ

ಮಂಗಳವಾರ ಮೃತಪಟ್ಟಿದ್ದ ರೈಲ್ವೆ ಅಧಿಕಾರಿ ಶವವನ್ನು ಕುಟುಂಬದವರು, ಸಂಬಂಧಿಕರು ಸ್ನಾನ ಮಾಡಿಸಿ, ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮುಂದಾಗಿದ್ದರು. ಆದರೆ, ಸ್ಥಳೀಯ ಲ್ಯಾಬ್‌ನಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ,ತಾಲೂಕು ಆಡಳಿತ ಕೋವಿಡ್-19 ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿತ್ತು.ಕಳೆದ ಏಪ್ರಿಲ್ 3ರಂದು ಬಾಗಲಕೋಟೆ ನಗರದ 76 ವರ್ಷದ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದರು. ಇದೀಗಚಿಕ್ಕಮ್ಯಾಗೇರಿಯಲ್ಲಿ ಮತ್ತೊಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

15 ಜನರಿಗೆ ಪಾಸಿಟಿವ್:
ಗುರುವಾರ ಜಿಲ್ಲೆಯಲ್ಲಿ ಮೂವರು ಮಕ್ಕಳು ಸಹಿತ 15 ಜನರಿಗೆ ಸೋಂಕು ತಗುಲಿದೆ. ಕಳೆದ ಜೂ. 12ರಂದು ಬಾಗಲಕೋಟೆಯಲ್ಲಿ ಮದುವೆ ಮಾಡಿಕೊಂಡಿದ್ದ ಸೋಂಕಿತ ಅಬಕಾರಿ ಇಲಾಖೆಯ ಸಬ್ ಇನ್ಸಪೆಕ್ಟರ್ ಸಂಪರ್ಕದಿಂದ ಕಲಾದಗಿಯ ಐವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 113 ಜನರು ಗುಣಮುಖರಾಗಿ, ಬಿಡುಗಡೆಗೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next