Advertisement

ಬಾಗಲಕೋಟೆ: 30 ವರ್ಷಗಳ ಬಳಿಕ ಜಾತ್ರೆ

06:01 PM Nov 27, 2021 | Team Udayavani |

ಬಾಗಲಕೋಟೆ: ಬಾಗಲಕೋಟೆಯ ಗ್ರಾಮ ದೇವತೆ ಎಂದೇ ಕರೆಯುವ ದ್ಯಾಮವ್ವ ದೇವಿಯ ಜಾತ್ರೆ ಮಹೋತ್ಸವವನ್ನು 30 ವರ್ಷಗಳ ಬಳಿಕ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಾತ್ರಾ ಸಮಿತಿಯ ಗೌರವ ಅಧ್ಯಕ್ಷ ಶ್ರೀಮಂತ ಬಸವಪ್ರಭು ಸರನಾಡಗೌಡರ ಹೇಳಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಗಿತಗೊಂಡಿದ್ದ ನಗರದ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವವನ್ನು ಈ ವರ್ಷ ಅದ್ಧೂರಿಯಾಗಿ ಆಚರಣೆ ಮಾಡಲು ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಪ್ರಮುಖರು, ಹಿರಿಯರು ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನಗರದ ಕಿಲ್ಲಾ ಭಾಗದಲ್ಲಿರುವ ದ್ಯಾಮವ್ವ ದೇವತೆ ಆಸ್ತಿಕ ಭಕ್ತರ ಸಂರಕ್ಷಕಿಯಾಗಿದ್ದಾಳೆ. ಊರಿನ ಜನರನ್ನು ಸುಖ, ಸಮೃದ್ಧಿಯಿಂದ ಇಡಲು ಹಾಗೂ ಯಾವುದೇ ರೋಗ ರುಜಿನಗಳು ವ್ಯಾಪಿಸದಂತೆ ದೇವಿ ನಮ್ಮನ್ನು ರಕ್ಷಿಸಲೆಂದು ದೊಡ್ಡ ಪ್ರಮಾಣದ ಜಾತ್ರೆ ಮಾಡುತ್ತಿದ್ದು ಇನ್ನೂ ಪ್ರತಿವರ್ಷ ಮೂರು ವರ್ಷಕ್ಕೊಮ್ಮೆ ದೇವಿಯ ಜಾತ್ರೆ ಮಾಡುತ್ತೇವೆ ಎಂದು ಹೇಳಿದರು. ಡಿ. 20ರಿಂದ 24ರವರೆಗೆ ಜಾತ್ರಾ ಉತ್ಸವ ನಡೆಯಲಿದ್ದು, 20ರಂದು ಬೆಳಗ್ಗೆ 9 ಗಂಟೆಗೆ ಆರತಿ, ಕಳಸ, ಪೂರ್ಣಕುಂಭ, ಮಂಗಲವಾದ್ಯಗಳೊಂದಿಗೆ ನಗರದಲ್ಲಿ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಡಿ. 21ರಂದು ಮತ್ತು 22ರಂದು ಹೋಮ ಹವನ ಹಾಗೂ ಶ್ರೀದೇವಿಯರ ಪ್ರಾಣ ಪ್ರತಿಷ್ಠಾಪನೆ, 23ರಿಂದ 24ರವರೆಗೆ ಸಾರ್ವಜನಿಕರಿಂದ ಶ್ರೀ ದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಉತ್ಸವ ಸಮಿತಿಯ ಪದಾ ಧಿಕಾರಿ ಅಶೋಕ ಲಿಂಬಾವಳಿ ಮಾತನಾಡಿ, 30 ವರ್ಷಗಳಿಂದ ಜಾತ್ರೆ ಮಾಡದೇ ಇರುವುದರಿಂದ ದ್ಯಾಮವ್ವ ದೇವಿಯ ಜಾತ್ರೆಯನ್ನು ನಗರದ ಎಲ್ಲ ಜನರು ಸೇರಿಕೊಂಡು ವಿಧಿ ವಿಧಾನದ ಮೂಲಕ ಮಾಡುತ್ತಿದ್ದು, ಜಾತ್ರಾ ಮಹೋತ್ಸವಕ್ಕೆ ಎಲ್ಲ ಪಕ್ಷದ ನಾಯಕರನ್ನು, ಮುಖಂಡರನ್ನು ಆಹ್ವಾನಿಸಲಾಗಿದೆ. ಇನ್ನೂ ನಗರಸಭೆಯ ಸದಸ್ಯರು ಸಹ ಕೈ ಜೋಡಿಸಿದ್ದಾರೆ. ದೇವಿಯ ಜಾತ್ರೆಯಂದು ನಗರದಲ್ಲಿ ಮಹಿಳಾ ಸಂಘಟನೆಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ದೇವಿಯ ಮೆರವಣಿಗೆಯ ದಿವಸ ಅಲಂಕಾರ ಮಾಡಲು ತಿಳಿಸಲಾಗುವುದು. ಎರಡು ದಿನಗಳ ಕಾಲ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

Advertisement

ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು ಎಂದು ಹೇಳಿದರು. ಪ್ರಮುಖರಾದ ಸಂಗಯ್ಯ ಸರಗಣಾಚಾರಿ, ಗುಂಡೂರಾವ್‌, ಸಿಂಧೆ, ಮನ್ನಿಕೇರಿ ದೇಸಾಯಿಯವರು, ಸುರೇಶ ಕುದರಿಕಾರ, ಸುರೇಶ ಮಜ್ಜಗಿ, ಶ್ರೀನಾಥ ಸಜ್ಜನ್‌, ಕಾಂತು ಪತ್ತಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next