Advertisement

ನರೇಗಾ ಹಬ್ಬಕ್ಕೆ ಬಾಗಲಕೋಟೆ ಆಯ್ಕೆ; ರಾಜ್ಯದಲ್ಲೇ ಬಸವನಾಡು ಪ್ರಥಮ

03:24 PM Mar 08, 2022 | Team Udayavani |

ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ರಾಜ್ಯ ಸರ್ಕಾರ ವಿಶೇಷ ಗೌರವ ಪ್ರಶಸ್ತಿ ಘೋಷಿಸಿದೆ.

Advertisement

ರಾಜ್ಯದ 31 ಜಿಲ್ಲೆಗಳಲ್ಲೇ ಪ್ರಥಮ ಸ್ಥಾನ ಪಡೆದ ಇಲ್ಲಿನ ಜಿಪಂ ಸಿಇಒ ಟಿ.ಭೂಬಾಲನ್‌, ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿಪಂನ ಎಲ್ಲ ಹಿರಿಯ, ಕಿರಿಯ ಹಾಗೂ ನರೇಗಾ ಯೋಜನೆ ಅನುಷ್ಠಾನದಡಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರ ಮಾ. 14ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ ನಲ್ಲಿ ನಡೆಯಲಿರುವ ನರೇಗಾ ಹಬ್ಬದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಜತೆಗೆ ವಿಶೇಷ ಪ್ರಮಾಣ ಪತ್ರವನ್ನೂ ಸರ್ಕಾರ ನೀಡಲಿದೆ.

ಪ್ರಶಸ್ತಿಗೆ ಮಾನದಂಡವೇನು?: ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ 12 ಪ್ರಮುಖ ಅಂಶಗಳ ಷರತ್ತಿನೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಯೋಜನೆ ಪರಿಣಾಮಕಾರಿ ಅನುಷ್ಠಾನದಲ್ಲಿ ಅಧಿಕಾರಿ, ಸಿಬ್ಬಂದಿ, ಕಾಯಕ ಬಂಧು, ಇತರ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವಂತೆ ಉಲ್ಲೇಖೀಸಲಾಗಿತ್ತು. ಈ ನಾಮ ನಿರ್ದೇಶನಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ, ಎಂಐಎಸ್‌ ಅಂಕಿ-ಅಂಶಗಳನ್ನು ಆಧರಿಸಿ ಅತ್ಯುತ್ತಮ ಸಾಧನೆ ಮಾಡಿದ ಅಧಿಕಾರಿ, ಸಿಬ್ಬಂದಿ ಮತ್ತು ಇತರ ವ್ಯಕ್ತಿಗಳನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಗೆ ಮುಖ್ಯವಾಗಿ ಮಾನವ ದಿನಗಳ ಸೃಷ್ಟಿಯಲ್ಲಿ ಅತಿ ಹೆಚ್ಚು ಸಾಧನೆ ಮಾಡಿದ ಜಿಪಂ ಅನ್ನು ಪರಿಗಣಿಸಲಾಗಿದೆ. ಬಾಗಲಕೋಟೆ ಜಿ.ಪಂ.ಗೆ ವಾರ್ಷಿಕ 50 ಲಕ್ಷ ದಿನಗಳ ಉದ್ಯೋಗ ಸೃಷ್ಟಿ ಯ ಗುರಿ ಇದೆ. ಆದರೆ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ 2021-22ನೇ ಸಾಲಿನಲ್ಲಿ 59 ಲಕ್ಷ ಮಾನವ ದಿನಗಳ ಸೃಷ್ಟಿಸಿದೆ.ಹೀಗಾಗಿ ಗುರಿ ಮೀರಿ ಸಾಧನೆ ಮಾಡಿದ ಜಿಪಂನಲ್ಲಿ ಬಾಗಲಕೋಟೆಯೇ ಮೊದಲ ಸ್ಥಾನದಲ್ಲಿದೆ.

ಅಲ್ಲದೇ ಈ ವರ್ಷ ಕೈಗೆತ್ತಿಗೊಂಡ ಕಾಮಗಾರಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು, ಸಮಯಕ್ಕೆ ಸರಿಯಾಗಿ ವೇತನ ಪಾವತಿ, ವೇತನ ರಿಜೆಕ್ಟ್ ಆಗದಂತೆ ನೋಡಿಕೊಳ್ಳುವುದು, ಸಾಮಾಜಿಕ ಲೆಕ್ಕ ಪರಿಶೋಧನೆ ರಿಕವರಿ ಹೀಗೆ ಹಲವು ಮಾನದಂಡಗಳಡಿ ಈ ಆಯ್ಕೆ ನಡೆದಿದೆ.

Advertisement

ಗಮನ ಸೆಳೆದ ವಿಶೇಷ ಕಾಮಗಾರಿಗಳು: ಈ ವರ್ಷ ಜಿಲ್ಲೆಯಲ್ಲಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನದ ಜತೆಗೆ ಜಿಲ್ಲೆಯಲ್ಲಿ ಹಲವು ವಿಶೇಷ ಕಾಮಗಾರಿ ಕೈಗೊಳ್ಳುವ ಮೂಲಕ ಗಮನ ಸೆಳೆಯುವ ಕಾಮಗಾರಿ ನಡೆದಿದೆ. ಬಾದಾಮಿ ತಾಲೂಕಿನ ಹೊಸೂರಿನಲ್ಲಿ ಸಂಪೂರ್ಣ ಪಾಳು ಬಿದ್ದಿದ್ದ ಹಾಗೂ ಐತಿಹಾಸಿಕ ಬಾವಿಗೆ ಮರುಜೀವ ನೀಡಿದ್ದು, ಸುತ್ತಲೂ ಗಾರ್ಡನ್‌, ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಲಾಗಿದೆ.ಹೀಗಾಗಿ ಆ ಬಾವಿಯ ಸುತ್ತ ಹೋಗಲೂ ಹೆದರುತ್ತಿದ್ದ ಜನರೀಗ ಅಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಿದ್ದಾರೆ.

ಇಂತಹ ಹಲವಾರು ಕಾಮಗಾರಿಗಳು ಜಿಲ್ಲೆಯಲ್ಲಿ ನಡೆದಿವೆ. ಜಿಲ್ಲೆಯಲ್ಲಿರುವ 195 ಗ್ರಾಪಂಗಳಲ್ಲೂ ನರೇಗಾ ಯೋಜನೆಯಡಿ ನಿಗದಿತ ಗುರಿ, ನಿರ್ದಿಷ್ಟ ಯೋಜನೆಗಳ ಪೂರ್ಣಗೊಳಿಸಲು ಶಿಸ್ತುಬದ್ಧ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲೇ ಮೊದಲ ಜಿಪಂ ಆಗಿ ಬಾಗಲಕೋಟೆ ಹೊರ ಹೊಮ್ಮಿದೆ.

ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನದಲ್ಲಿ ಬಾಗಲಕೋಟೆ ಜಿಪಂಗೆ ರಾಜ್ಯದಲ್ಲೇ ಮೊದಲ ಸ್ಥಾನ ಬಂದಿದೆ. ಇದಕ್ಕಾಗಿ ನರೇಗಾ ಹಬ್ಬ ಎಂಬ ಹೊಸ ಕಾರ್ಯಕ್ರಮದಡಿ ಈ ಕಾರ್ಯಕ್ಕಾಗಿ ಶ್ರಮಿಸಿದ ನಮ್ಮ ಸಿಇಒ ಟಿ.ಭೂಬಾಲನ್‌ ಅವರು ಸಹಿತ ಎಲ್ಲ ಅಧಿಕಾರಿಗಳಿಗೂ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನಾನೂ ಇರುವುದು ಖುಷಿ ತಂದಿದೆ.
ಅಮರೇಶ ನಾಯಕ,
ಉಪ ಕಾರ್ಯದರ್ಶಿ, ಜಿ.ಪಂ

*ಶ್ರೀಶೈಲ ಕೆ. ಬಿರಾದಾರ

 

Advertisement

Udayavani is now on Telegram. Click here to join our channel and stay updated with the latest news.

Next