Advertisement

ಮೀಸಲು ಗೋಜಲು; ಜನನಾಯಕರಿಗೆ ಸಂಕಟ!

05:00 PM Jul 10, 2021 | Team Udayavani |

 ವರದಿ: ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಬಗ್ಗೆ ಇದ್ದ ಅಸಮಾಧಾನ ಮರೆಯುವ ಮುಂಚೆಯೇ, ಇದೀಗ ಕ್ಷೇತ್ರಗಳ ಮೀಸಲಾತಿ ವಿಷಯದಲ್ಲೂ ಸರ್ವ ಪಕ್ಷಗಳಲ್ಲಿ ದೊಡ್ಡ ಅಸಮಾಧಾನ ಉಂಟಾಗಿದೆ ಎಂಬ ಮಾತು ಬಲವಾಗಿ ಹೇಳಿ ಬಂದಿದೆ.

ಹೌದು, ಜಿ.ಪಂ. ಚುನಾವಣೆಯ ಮೇಲೆ ಕಣ್ಣಿಟ್ಟು ಹಲವು ರೀತಿ ಪೂರ್ವ ತಯಾರಿ ಮಾಡಿಕೊಂಡಿದ್ದ ಯುವ ರಾಜಕಾರಣಿಗಳಿಗೆ ಮೀಸಲಾತಿ ಅಧಿಸೂಚನೆಯಿಂದ ನಿರಾಸೆ ಮೂಡಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಶ್ನಿಸಿ, ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದ್ದ ಗುರುವಾರದವರೆಗೆ ಜಿಲ್ಲೆಯಿಂದ ಸುಮಾರು 34ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ.

ಸರ್ವ ಪಕ್ಷದಲ್ಲೂ ಅಸಮ್ಮತ: ಮೀಸಲಾತಿ ನಿಗದಿ ವಿಷಯದಲ್ಲಿ ಆಡಳಿತಾರೂಢ ಬಿಜೆಪಿಯೂ ಸೇರಿದಂತೆ ವಿರೋಧ ಪಕ್ಷ ಕಾಂಗ್ರೆಸ್‌ ನಲ್ಲೂ ಅಸಮಾಧಾನ ಎದುರಾಗಿದೆ. ಮುಖ್ಯವಾಗಿ ಆಡಳಿತ ಪಕ್ಷ ಬಿಜೆಪಿಯ ಪ್ರಮುಖರು, ತಮ್ಮ ತಮ್ಮ ಕ್ಷೇತ್ರಗಳ ಶಾಸಕರ ವಿರುದ್ಧವೂ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಚುನಾವಣೆ ಆಯೋಗ ಮೀಸಲಾತಿ ನಿಗದಿ ಮಾಡುತ್ತದೆ. ಆದರೆ, ಯಾವ ಪಕ್ಷದ ಅಧಿಕಾರ ಇರುತ್ತದೆಯೋ ಆ ಪಕ್ಷದ ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಪಾತ್ರ ಇದರಲ್ಲಿ ಹೆಚ್ಚಿರುತ್ತದೆ. ತಮ್ಮ ತಮ್ಮ ಬೆಂಬಲಿಗರು, ಪಕ್ಷದ ಪ್ರಮುಖರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಮಾಡುತ್ತಾರೆ. ಆದರೆ, ಈ ಬಾರಿ ಆಡಳಿತ ಪಕ್ಷದವರಾದರೂ ನಮಗೆ ನೆರವಾಗುವ ನಿಟ್ಟಿನಲ್ಲಿ ಯಾವುದೇ ಕಾರ್ಯ ಮಾಡಿಲ್ಲ ಎಂಬುದು ಹಲವರ ಅಸಮಾಧಾನ.

ಎಲ್ಲವೂ ಮಹಿಳೆಯರಿಗೆ ಮೀಸಲು: ಜಿ.ಪಂ. ಕ್ಷೇತ್ರಗಳ ಮೀಸಲಾತಿ ನಿಗದಿ ವಿಷಯದಲ್ಲಿ ರಾಜಕೀಯ ಫ್ರಂಟ್‌ಲೆçನ್‌ನಲ್ಲಿರುವ ಪುರುಷ ರಾಜಕಾರಣಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲ ಚುನಾವಣೆ ಮಾಡುವವರು. ನಿತ್ಯವೂ ನಮ್ಮ ಸಾಹೇಬರ ಬಗ್ಗೆ ಪ್ರಚಾರ ಮಾಡಿ, ತನು, ಮನು, ಧನದಿಂದ ಕೆಲಸ ಮಾಡುತ್ತಿದ್ದೇವೆ. ಆದರೂ, ನಮಗೊಂದು ರಾಜಕೀಯ ನೆಲೆ ಕಲ್ಪಿಸಲು ಜಿಪಂ ಕ್ಷೇತ್ರಕ್ಕಾದರೂ ಅವಕಾಶ ಕೊಡಿಸುತ್ತಾರೆ ಎಂಬ ಭರವಸೆ ಹುಸಿಗೊಳಿಸಿದ್ದಾರೆ. ಬಹುತೇಕ ಕ್ಷೇತ್ರಗಳನ್ನು ಮೀಸಲಾತಿ ಮಹಿಳೆಯರಿಗೆ ನಿಗದಿಯಾಗಿವೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಬಾಗಲಕೋಟೆ ತಾಲೂಕಿನಲ್ಲಿ ಐದು ಕ್ಷೇತ್ರಗಳಿದ್ದು, ಅದರಲ್ಲಿ ನಾಲ್ಕು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ರಾಂಪುರ ಕ್ಷೇತ್ರ ಮಾತ್ರ ಎಸ್‌.ಸಿ ವರ್ಗಕ್ಕೆ ಮೀಸಲಾಗಿದೆ. ಹುನಗುಂದ ತಾಲೂಕಿನಲ್ಲಿ ಮೂರು ಕ್ಷೇತ್ರಗಳಿದ್ದು, ಅದರಲ್ಲಿ ಕೂಡಲಸಂಗಮ-ಸಾಮಾನ್ಯ (ಮಹಿಳೆ), ಅಮರಾವತಿ-2ಎ, ಸೂಳಿಭಾವಿ-2ಎ ವರ್ಗಕ್ಕೆ ಮೀಸಲಿವೆ. ಬಾದಾಮಿ ತಾಲೂಕಿನಲ್ಲಿ ಹಲಕುರ್ಕಿ-2ಎ (ಮಹಿಳೆ), ಜಲಗೇರಿ-ಎಸ್‌.ಸಿ, ಕರಡಿಗುಡ್ಡ ಎಸ್‌.ಎನ್‌-ಸಾಮಾನ್ಯ (ಮಹಿಳೆ), ಮುತ್ತಲಗೇರಿ-2ಎ, ಜಾಲಿಹಾಳ-ಸಾಮಾನ್ಯ (ಮಹಿಳೆ), ನಂದಿಕೇಶ್ವರ-ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾಗಿದೆ.

ಇಳಕಲ್ಲ ತಾಲೂಕಿನಲ್ಲಿ ನಾಲ್ಕು ಕ್ಷೇತ್ರಗಳಿದ್ದು, ಒಂದು 2ಎ, ಎಸ್‌.ಸಿ, ಸಾಮಾನ್ಯ ಹಾಗೂ ಎಸ್‌.ಟಿ ಮಹಿಳೆಗೆ ಮೀಸಲಾಗಿದ್ದು, ಗುಡೂರ ಕ್ಷೇತ್ರ ಎಸ್‌.ಟಿ. ಮಹಿಳೆ ಕ್ಷೇತ್ರಕ್ಕೆ ಮೀಸಲಾಗಿದ್ದನ್ನು ಪ್ರಶ್ನಿಸಿ, ಹಲವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಹೊಸದಾಗಿ ರಚನೆಯಾದ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್‌.ಪಿ-ಎಸ್‌.ಟಿ (ಮಹಿಳೆ), ಕಟಗೇರಿ-ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಗುಡೂರ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಹುಲ್ಲಿಕೇರಿ ಕ್ಷೇತ್ರವನ್ನೂ ಎಸ್‌.ಟಿ ವರ್ಗಕ್ಕೆ ನೀಡಿರುವ ಕುರಿತು ಆಕ್ಷೇಪಣೆ ವ್ಯಕ್ತವಾಗಿದೆ. ಇನ್ನು ಜಮಖಂಡಿ ತಾಲೂಕಿನ ತುಂಗಳ, ತೊದಲಬಾಗಿ, ಸಾವಳಗಿ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕೊಣ್ಣುರ ಎಸ್‌.ಸಿ ಮಹಿಳೆ ಹಾಗೂ ಹುನ್ನೂರ ಎಸ್‌.ಟಿ ವರ್ಗಕ್ಕಿವೆ. ಈ ಕುರಿತು ಜಿ.ಪಂ. ಮಾಜಿ ಸಚಿವ ಅರ್ಜುನ ದಳವಾಯಿ ಸಹಿತ ಹಲವರು ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಪ್ರತಿನಿಧಿಸುವ ಮುಧೋಳ ತಾಲೂಕಿನಲ್ಲಿ ಐದು ಕ್ಷೇತ್ರಗಳಿದ್ದು, ಈ ಕುರಿತೂ ಹಲವರು ಆಕ್ಷೇಪಣೆ ಸಲ್ಲಿಸಿ, ಮೀಸಲಾತಿ ಬದಲಾವಣೆ ಮಾಡುವಂತೆ ಸ್ವತಃ ಕಾರಜೋಳ ಅವರಿಗೆ ಮನವಿ ಮಾಡಿದ್ದಾರೆ. ಅದೇ ರೀತಿ ಬೀಳಗಿ, ಜಮಖಂಡಿ, ಹುನಗುಂದ, ಬಾದಾಮಿ ಹಾಗೂ ಬಾಗಲಕೋಟೆ ತಾಲೂಕಿನ ವ್ಯಾಪ್ತಿಯ ಜಿಪಂ ಕ್ಷೇತ್ರಗಳ ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next