ಬಾಗಲಕೋಟೆ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಶಾಸಕ ಗೋವಿಂದ ಕಾರಜೋಳರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಅಂತಿಮಗೊಂಡಿದ್ದು, ಜಿಲ್ಲೆಗೆ ಮತ್ತೂಂದು ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಿಸಿದೆ.
Advertisement
ನಿಜ, ಕಾರಜೋಳರ ಜತೆಗೆ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ರಾಜಕೀಯ ಲೆಕ್ಕಾಚಾರದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರ ಮುತುವರ್ಜಿ ಜತೆಗೆ ಸಂಘ-ಪರಿವಾರದ ಬಲ ಇರುವವರಿಗೆ ಸ್ಥಾನ ದೊರೆಯಲಿದೆ ಎನ್ನಲಾಗಿದೆ.
Related Articles
Advertisement
ಅಲ್ಲದೇ ಮಾಜಿ ಶಾಸಕ ಪಿ.ಎಚ್. ಪೂಜಾರ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಪ್ರಮುಖ ಜವಾಬ್ದಾರಿ ಕೊಡಬೇಕು ಎಂದು ಕೇಳಿಕೊಳ್ಳಲು ಅವರ ಬೆಂಬಲಿಗರು ಪಕ್ಷದ ಹಿರಿಯರಿಗೆ ಮನವಿ ಮಾಡಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧ್ವಜಾರೋಹಣ ಭಾಗ್ಯ ಯಾರಿಗೆ?: ಹಿಂದೆ ಸದಾನಂದಗೌಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಇತ್ತು. ಆಗ ಜಿಲ್ಲೆಯಿಂದ ಗೋವಿಂದ ಕಾರಜೋಳ ಹಾಗೂ ಮುರಗೇಶ ನಿರಾಣಿ ಇಬ್ಬರೂ ಸಚಿವರಾಗಿದ್ದರು. ಆದರೆ, ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೂ ಕೊಟ್ಟಿರಲಿಲ್ಲ. ಆ. 15ರ ಧ್ವಜಾರೋಹಣದ ಜವಾಬ್ದಾರಿ ಮಾತ್ರ ತಾತ್ಕಾಲಿಕವಾಗಿ ಮುರಗೇಶ ನಿರಾಣಿ ಅವರಿಗೆ ನೀಡಲಾಗಿತ್ತು. ಆಗ ಜಿಲ್ಲೆಯಲ್ಲಿ ಕಾರಜೋಳ ಮತ್ತು ನಿರಾಣಿ ಬಣಗಳು ಸೃಷ್ಟಿಯಾಗಿದ್ದವು. ಈಗ ರಾಜಕೀಯ ವಿದ್ಯಮಾನ ಬದಲಾಗಿವೆ. ರಹಸ್ಯ ಅಸಮಾಧಾನಗಳೇನೇ ಇದ್ದರೂ, ಸದ್ಯ ಬಿಜೆಪಿಯ ಎಲ್ಲ ಶಾಸಕರೂ ಒಗ್ಗಟ್ಟಾಗಿರುವಂತಿದ್ದಾರೆ. ಆದರೆ, ಸಚಿವ ಸ್ಥಾನದ ವಿಷಯದಲ್ಲಿ ಪೈಪೋಟಿ ಮಾತ್ರ ನಡೆಯುತ್ತಲೇ ಇದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾಡಳಿತದಿಂದ ನಡೆಯುವ ಧ್ವಜಾರೋಹಣ ನಡೆಸುವ ಸೌಭಾಗ್ಯ ಜಿಲ್ಲೆಯ ಯಾವ ಜನಪ್ರತಿನಿಧಿಗೆ ದೊರೆಯಲಿದೆ ಎಂಬ ಕುತೂಹಲ ಮೂಡಿದೆ. ಜಿಲ್ಲೆಯಿಂದ ಕಾರಜೋಳರೊಬ್ಬರೇ ಸಚಿವರಾದರೆ, ಅವರೇ ಜಿಲ್ಲೆಯ ಉಸ್ತುವಾರಿಯೂ ಆಗುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ದೊರೆತಲ್ಲಿ, ಅದು ಯಾರಿಗೆ ದೊರೆಯಲಿದೆ ಹಾಗೂ ಆ. 15ಕ್ಕೆ ಯಾರು ಧ್ವಜಾರೋಹಣ ಮಾಡಲಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.