ಬಾಗಲಕೋಟೆ : ತೋಟಗಾರಿಕೆ ವಿವಿಯ 11ನೇ ಘಟಿಕೋತ್ಸವದಲ್ಲಿ ಒಟ್ಟು 680 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಗಮನ ಸೆಳೆದರು.
ಎಂಎಸ್ಸಿಯ ಹಣ್ಣು ವಿಜ್ಞಾನ ವಿಭಾಗದಲ್ಲಿ ಪಿತೃತಅಹ್ಮದ ನೂರಿ ಮತ್ತು ತರಕಾರಿ ವಿಜ್ಞಾನ ವಿಭಾಗದಲ್ಲಿ ನಸೀಮ್ ಎಂಬ ವಿದ್ಯಾರ್ಥಿಗಳು ಪದವಿ ಪಡೆದರು. ಸಭಾಂಗಣದಲ್ಲಿ ಪಾಲ್ಗೊಂಡವರೆಲ್ಲ ಬಹುತೇಕ ಇವರನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಕಾರಣ ಅವರು ಅಫ್ಘಾನಿಸ್ಥಾನ ದೇಶದವರಾಗಿದ್ದರು. ಪಿತೃತ ಅಹ್ಮದ ನೂರಿ ಮತ್ತು ನಸೀಮ್, ಅಫ್ಘಾನಿಸ್ಥಾನದಲ್ಲಿ ಶಿಕ್ಷಕರಾಗಿದ್ದು, ಅವರು ಭಾರತೀಯ ತೋಟಗಾರಿಕೆ ಕೃಷಿ ಪದ್ಧತಿಗೆ ಮನಸೋತಿದ್ದಾರೆ. ಹೀಗಾಗಿ ಅವರಿಬ್ಬರು ಭಾರತದ ತೋಟಗಾರಿಕೆ ಕಾಲೇಜಿನಲ್ಲಿ ಎಂಎಸ್ಸಿ ಪದವಿ ಮಾಡುವ ಆಸಕ್ತಿಯಿಂದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಬರೆದಿದ್ದರು. ಅವರಿಗೆ ಬೆಂಗಳೂರಿನ ಜಿಕೆವಿಕೆ ಕಾಲೇಜಿನಲ್ಲಿ ಪ್ರವೇಶ ಕೂಡ ದೊರೆತಿದ್ದು, ಕಳೆದ ಎರಡು ವರ್ಷದಿಂದ ಅವರು ಎಂಎಸ್ಸಿ ಹಣ್ಣು ಮತ್ತು ತರಕಾರಿ ವಿಭಾಗದಲ್ಲಿ ಪದವಿ ಪಡೆದಿದ್ದು, ಅವರಿಗೂ ಬುಧವಾರ ರಾಜ್ಯಪಾಲರು ಪದವಿ ಪ್ರದಾನ ಮಾಡಿದರು.
ನಾವು ಭಾರತ, ಅದರಲ್ಲೂ ಕರ್ನಾಟಕದ ಬಗ್ಗೆ ವಿಶೇಷ ಗೌರವ, ಆಸಕ್ತಿ ಹೊಂದಿದ್ದೇವೆ. ಇಲ್ಲಿನ ಕೃಷಿ ಪದ್ಧತಿ, ಶಿಕ್ಷಣ ಬಗ್ಗೆ ಕಲಿಯಬೇಕೆಂಬ ಆಸಕ್ತಿ ಇತ್ತು. ನಮ್ಮ ದೇಶದ ಹವಾಮಾನ, ಭಾರತದ ಹವಾಮಾನಕ್ಕೂ ಅಷ್ಟೊಂದು ವ್ಯತ್ಯಾಸವಿಲ್ಲ. ನಮ್ಮಲ್ಲಿ ಆಪಲ್ ಸಹಿತ ಹಣ್ಣು ಬೆಳೆ ಹೆಚ್ಚು ಬೆಳೆಯುತ್ತೇವೆ. ಆ ವಿಭಾಗದಲ್ಲೇ ಅಧ್ಯಯನ ಕೈಗೊಂಡಿದ್ದೇವೆ ಎಂದು ಪಿತೃತಅಹ್ಮದ ನೂರಿ ಉದಯವಾಣಿಗೆ ತಿಳಿಸಿದರು.
ಇದನ್ನೂ ಓದಿ : ವಿದ್ಯುತ್ ತಂತಿ ದುರಸ್ಥಿ ವೇಳೆ ಅವಘಡ : ಇಬ್ಬರು ಸ್ಥಳದಲ್ಲೇ ಸಾವು, ಇನ್ನೋರ್ವನಿಗೆ ಗಂಭೀರ ಗಾಯ