Advertisement

10ರಂದು ಟಿಪ್ಪು ಜಯಂತಿ ಆಚರಣೆ: ಜಿಲ್ಲಾಧಿಕಾರಿ

05:15 PM Nov 08, 2018 | |

ಬಾಗಲಕೋಟೆ: ಟಿಪ್ಪು ಜಯಂತಿಯನ್ನು ನ. 10ರಂದು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಟಿಪ್ಪು ಜಯಂತಿ ಆಚರಣೆ ಕುರಿತು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನ್‌ ವ್ಯಕ್ತಿಗಳು, ಸಂತರು, ಶರಣರು, ಸೂಫಿಗಳು ಯಾವುದೇ ಜಾತಿ ಮತಕ್ಕೆ ಸೀಮಿತರಲ್ಲ. ಅವರು ನಾಡಿಗೆ ನೀಡಿದ ಕೊಡುಗೆ, ಸಾಧನೆ ಅವುಗಳನ್ನು ಮುಂದಿನ ಪೀಳಿಗೆ ಅನುಕರಿಸಲಿ ಎಂಬ ಉದ್ದೇಶದಿಂದ ಸರಕಾರ ಇಂತಹ ಮಹಾನ್‌ ವ್ಯಕ್ತಿಗಳ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದರು.

Advertisement

ಜಿಲ್ಲಾಡಳಿತದ ವತಿಯಿಂದ ಆಡಿಟೋರಿಯಂ ಹಾಲ್‌ನಲ್ಲಿ ಟಿಪ್ಪು ಜಯಂತಿಯನ್ನು ಸಂಭ್ರಮದಿಂದ ನಡೆಸಲಾಗುವುದು. ನ್ಯಾಯಾಲಯದ ಆದೇಶದಂತೆ ಮೆರವಣಿಗೆ, ರ್ಯಾಲಿ ಮುಂತಾದವುಗಳನ್ನು ನಿಷೇಧಿಸಿರುವುದರಿಂದ ಅಂತವುಗಳಿಗೆ ಅವಕಾಶ ನೀಡದೇ ಅರ್ಥಪೂರ್ಣ ಜಯಂತಿಗೆ ಅವಶ್ಯವಿರುವ ಸಲಹೆ, ಸೂಚನೆಗಳನ್ನು ನೀಡಬೇಕು ಎಂದರು. ಸಮಾಜದ ಮುಖಂಡರಾದ ಎ.ಎ.ದಾಂಡಿಯಾ, ಕುತುಬುದ್ದಿನ ಖಾಜಿ, ಎಂ.ಎಂ.ನಬಿವಾಲೆ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯಲ್ಲಿ ಟಿಪ್ಪು ಕುರಿತಾದ ಸಮಗ್ರ ಅಧ್ಯಯನ ಮಾಡಿದ ಉಪನ್ಯಾಸಕರನ್ನು ಕರೆಸಬೇಕು.

ಪ್ರತಿ ಭಾರಿ ಅಂಬೇಡ್ಕರ ಭವನದಲ್ಲಿ ಆಚರಿಸಲಾಗುತ್ತಿದ್ದು, ಅದರ ಬದಲಾಗಿ ಕಲಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ ಮಾತನಾಡಿ, ಕಳೆದ ಬಾರಿ ಅರ್ಥಪೂರ್ಣವಾಗಿ ಟಿಪ್ಪು ಜಯಂತಿ ಆಚರಿಸಲಾಗಿತ್ತು. ವೇದಿಕೆ ಮೇಲೆ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ ಸಮಾಜದ ಮುಖಂಡರಿಗೆ ಅವಕಾಶ ಮಾಡಿಕೊಡಲಾಗುವುದು. ಆದರೆ ಮೆರವಣಿಗೆ, ಜಾಥಾ ರದ್ದುಗೊಳಿಸಲಾಗಿದ್ದು, ಸಮಾಜದ ಬಾಂಧವರು ಸಹಕರಿಸಬೇಕು. ಇದು ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೂ ಅನ್ವಯಿಸುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ಟಿಪ್ಪು ಜಯಂತಿ ಅಚ್ಚುಕಟ್ಟಾಗಿ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು. ಸಮಾಜದ ಮುಖಂಡರಾದ ಡಾ| ವೈ.ಎಸ್‌. ಪಠಾಣ, ಆರ್‌.ಡಿ. ಬಾಬು, ಸಲಿಂ ಮೊಮಿನ್‌, ಅಮರ ಪುಣೆಕರ, ಡಿವೈಎಸ್‌ಪಿ ಗಿರೀಶ, ಸಿಪಿಐ ಶ್ರೀಶೈಲ ಗಾಬಿ, ಪಿಎಸ್‌ಐ ಸಂತೋಷ ಹಳ್ಳೂರ, ಶಿವಾನಂದ ಮುಖರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next