ಬಾಗಲಕೋಟೆ: ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗೆ ಬರಲು ಕೇಂದ್ರ ಸರ್ಕಾರ ಇದೇ ಬಜೆಟ್‌ನಲ್ಲಿ ಘೋಷಿಸಿದ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರ ನೋಂದಣಿ ಕಾರ್ಯ ಜಿಲ್ಲೆಯಲ್ಲೂ ಆರಂಭಗೊಂಡಿದೆ.
ಹೌದು, ಸಣ್ಣ ಮತ್ತು ಅತಿ ಸಣ್ಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಮೂರು ಕಂತುಗಳಲ್ಲಿ ವಾರ್ಷಿಕ ಆರು ಸಾವಿರ ಹಣ ನೀಡುವ ಯೋಜನೆ ಇದು. ಈ ಯೋಜನೆಗೆ ಇಡೀ ರಾಷ್ಟ್ರಾದ್ಯಂತ ಫೆ.25ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯ ಅರ್ಹರು, ಈ ಯೋಜನೆ ಲಾಭ ಪಡೆಯಬೇಕಿದೆ.
ಜಿಲ್ಲೆಯಲ್ಲಿ 1.45 ಲಕ್ಷ ರೈತರು: ಕೇಂದ್ರ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು 1,45,087 ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರೆಲ್ಲ ಅನುಬಂಧ-ಸಿ ಮತ್ತು ಅನುಬಂಧ-ಡಿ ಅಡಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಯಾವ ರೈತರು, ಪಿಎಂ-ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವುದಿಲ್ಲವೋ ಅವರ ಖಾತೆಗೆ ಹಣ ಬರುವುದಿಲ್ಲ. ಈ ಯೋಜನೆಯಡಿ ರೈತರು ನೋಂದಣಿ ಮಾಡಿಕೊಳ್ಳಲು ಫೆ.25 ಕೊನೆ ದಿನವೆಂದು ಸುಳ್ಳು ಸುದ್ದಿ ಹಬ್ಬಿಸಿದ್ದು, ಸದ್ಯಕ್ಕೆ ಅಂತಿಮ ದಿನ ನಿಗದಿಯಾಗಿಲ್ಲ. ಆದರೂ ರೈತರು ಮೊದಲ ಆದ್ಯತೆಯಲ್ಲಿ ನೋಂದಣಿ ಮಾಡಿಕೊಂಡರೆ ಉತ್ತಮ.
ಕನಿಷ್ಠ ನೆರವು ಮಾತ್ರ: ಈ ಯೋಜನೆಯಿಂದ ರೈತರಿಗೆ ದೊಡ್ಡ ಮಟ್ಟದ ನೆರವು ಆಗುವುದಿಲ್ಲ. ಆದರೆ, ಮುಂಗಾರು-ಮುಂಗಾರು ಎರಡೂ ಬೆಳೆ ಕೈ ಕೊಟ್ಟಾಗ, ಮೂರು ತಿಂಗಳಿಗೊಮ್ಮೆ ಕನಿಷ್ಠ 2 ಸಾವಿರ ರೂ. ರೈತರ ಪ್ರಾಪಂಚಿಕ ಅಡಚಣೆ ಅಥವಾ ಕೃಷಿ ಸಂಬಂಧಿತ ಕೆಲಸಗಳಿಗೆ ಸಣ್ಣ ಮಟ್ಟದಲ್ಲಿ ಅನುಕೂಲ ಕಲ್ಪಿಸಲು ಇದು ನೆರವಾಗಲಿದೆ. ಹೀಗಾಗಿ ಒಂದು ವರ್ಷಕ್ಕೆ ಆರು ಸಾವಿರ ಪಡೆಯಲು ಯಾರು ಅಲೆದಾಡಬೇಕೆಂಬ ಸಮಸ್ಯೆ ಈ ಯೋಜನೆಯಡಿ ಇಲ್ಲ. ಕಾರಣ, ಇದು ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಮ್ (ಎಬಿಪಿಎಸ್) ಇದೆ. ಒಮ್ಮೆ ಸೂಕ್ತ ದಾಖಲೆ ಸಲ್ಲಿಸಿ, ನೋಂದಣಿ ಮಾಡಿಕೊಂಡರೆ, ಅವರ ಬ್ಯಾಂಕ್‌ಗೆ ಖಾತೆಗೆ ಹಣ ಸಂದಾಯವಾಗುತ್ತದೆ.
ಒಟ್ಟು 2.27 ಲಕ್ಷ ರೈತರು: ಜಿಲ್ಲೆಯ ಆರು ತಾಲೂಕಿನಲ್ಲಿ (ಹೊಸ ತಾಲೂಕುಗಳು ಆಡಳಿತಾತ್ಮಕ ಅರ್ಹತೆ ಪಡೆದಿಲ್ಲ) ಈ ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಅರ್ಹರಿದ್ದಾರೆ. 2.20 ಎಕರೆ ಒಳಗೆ ಭೂಮಿ ಹೊಂದಿದವರು ಅತಿ ಸಣ್ಣ ಹಾಗೂ 5 ಎಕರೆ ಒಳಗೆ ಭೂಮಿ ಹೊಂದಿದ್ದರೆ ಅವರು ಸಣ್ಣ ರೈತರ ವ್ಯಾಪ್ತಿಗೆ ಬರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 2,27,731 ರೈತರಿದ್ದು, ಅದರಲ್ಲಿ 69,742 ಜನ ಅತಿ ಸಣ್ಣ, 75,345 ಸಣ್ಣ ರೈತರಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ಸೇರಿ ಒಟ್ಟು 1,45,087 ರೈತರು, ಪಿಎಂ-ಕಿಸಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ಪಡೆಯಲು ಅರ್ಹರಿದ್ದಾರೆ. ಒಟ್ಟು 2,27,731 ರೈತರು 48,77,116.14 ಹೆಕ್ಟೇರ್ ಕೃಷಿ ಭೂಮಿ ಹೊಂದಿದ್ದಾರೆ. ಅದರಲ್ಲಿ 69,742 ಅತಿಸಣ್ಣ ರೈತರು 40,350.7 ಹೆಕ್ಟೇರ್ ಭೂಮಿ ಹೊಂದಿದ್ದು, 75,345 ರೈತರು, 1,09,374.06 ಹೆಕ್ಟೇರ್ ಭೂಮಿ ಒಡೆತನ ಹೊಂದಿದ್ದಾರೆ. ಜಿಲ್ಲೆಯಲ್ಲಿ 82,644 ಜನರು ಮಧ್ಯಮ ಮತ್ತು ದೊಡ್ಡ ರೈತರಿದ್ದಾರೆ. ಇವರು 3,37,391.38 ಹೆಕ್ಟೇರ್ ಭೂಮಿ ಹೊಂದಿದ್ದಾರೆ.
ನೋಂದಣಿ ಎಲ್ಲೆಲ್ಲಿ?
ಸಣ್ಣ ಮತ್ತು ಅತಿ ಸಣ್ಣ ರೈತರು ಜಿಲ್ಲೆಯ ಆಯಾ ನಾಡಕಚೇರಿ (ಹೋಬಳಿಗೊಂದು), ಸಹಾಯಕ ಕೃಷಿ ಅಧಿಕಾರಿಗಳ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದು. ಜಿಲ್ಲೆಯಲ್ಲಿ 198 ಗ್ರಾಪಂ ಕಚೇರಿಗಳಿದ್ದು, ಅವರಿಗೂ ಪಿಎಂ-ಕಿಸಾನ್ ಯೋಜನೆಯಡಿ ರೈತರ ದಾಖಲೆ ಎಂಟ್ರಿ ಮತ್ತು ಹೆಸರು ನೊಂದಾಯಿಸಲು ಪ್ರತ್ಯೇಕ ಲಾಗಿನ್ ಐಡಿ ನೀಡಲಾಗಿದೆ. ಆದರೆ, ಗ್ರಾಪಂ ಕಚೇರಿಗಳಲ್ಲಿ ಈ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ.
ದಾಖಲೆಗಳೇನೇನು?
ಪಿಎಂ-ಕಿಸಾನ್ ಯೋಜನೆಯಡಿ ಅನುಬಂಧ-ಸಿ ಮತ್ತು ಅನುಬಂಧ-ಡಿ ಎಂಬ ಎರಡು ಅರ್ಜಿ ನಮೂನೆ ಇವೆ. ಅನುಬಂಧ-ಸಿ ಅಡಿಯಲ್ಲಿ ಈಗಾಗಲೇ ಆಯಾ ಗ್ರಾಪಂ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸೂಚನಾ ಫಲಕದಲ್ಲಿ ರೈತರ ಪಟ್ಟಿ ಹಚ್ಚಲಾಗಿದ್ದು, ಅದರಲ್ಲಿ ಹೆಸರು ಇರುವ ರೈತರಿಗೆ ಐಡಿ ನಂಬರ್ ನೀಡಲಾಗಿರುತ್ತದೆ. ಆ ಐಡಿ ನಂಬರ್ ನಮೂದಿಸಿ, ಆಧಾರ್ ಕಾರ್ಡ್, ಕಂಪ್ಯೂಟರ್ ಆಧಾರಿತ ಭೂಮಿಯ ಪಹಣಿ (ಉತಾರ), ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಸಂಖ್ಯೆ, ಎಸ್‌ಸಿ, ಎಸ್‌ಟಿ ರೈತರಾಗಿದ್ದರೆ ಜಾತಿ ಪ್ರಮಾಣ ಪತ್ರ ನೀಡಬೇಕು. ಒಂದು ವೇಳೆ ರೈತರ ಹೆಸರು ತಮ್ಮ ಗ್ರಾಪಂ, ಇಲ್ಲವೇ ಪಿಕೆಪಿಎಸ್‌ನ ನಾಮಫಲಕದಲ್ಲಿ ಹಚ್ಚಿರದಿದ್ದರೆ ಅವರು ಅನುಬಂಧ-ಡಿ ರ್ಜಿಯಲ್ಲಿ ನಾಲ್ಕು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಲ್ಲದೇ ಅನುಬಂಧ-ಇ ಎಂಬ ಮತ್ತೂಂದು ಅರ್ಜಿ ಇದ್ದು, ದೊಡ್ಡ ರೈತರಾಗಿದ್ದರೂ, ಅವರ ಹೆಸರು ಸಣ್ಣ-ಅತಿ ಸಣ್ಣ ರೈತರ ಪಟ್ಟಿಯಲ್ಲಿ ದಾಖಲಾಗಿದ್ದರೆ, ಅದನ್ನು ತೆಗೆದು ಹಾಕಲು, ಪಿಎಂ-ಕಿಸಾನ್ ಯೋಜನೆಗೆ ನಾನು ಅರ್ಹನಲ್ಲ ಎಂಬುದನ್ನು ಭರ್ತಿ ಮಾಡಿಕೊಡಲು ಬಳಸಬಹುದಾಗಿದೆ.
ದಾಖಲೆ ಕೊಡಿ
ಪಿಎಂ-ಕಿಸಾನ್ ಯೋಜನೆಯಡಿ ಜಿಲ್ಲೆಯ ಸಣ್ಣ ಮತ್ತು ಅತಿಸಣ್ಣ ರೈತರು, ಅರ್ಜಿ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು. ಇಲಾಖೆಯಿಂದ ಅರ್ಜಿ ಪಡೆಯುವ ಕೆಲಸ ಮಾಡುತ್ತಿದ್ದು, ಎಲ್ಲ ರೈತರು ಈ ಯೋಜನೆಯ ಲಾಭ ಪಡೆಯಬೇಕು.
ರಾಜಶೇಖರ ವಿಜಯಪುರ
ಜಂಟಿ ಕೃಷಿ ನಿರ್ದೇಶಕ
ಶ್ರೀಶೈಲ ಕೆ. ಬಿರಾದಾರ